Advertisement

ಪಿಒಪಿ ಮೂರ್ತಿಗಳ ಮಾರಾಟ ನಿರ್ಬಂಧ

01:15 AM Aug 01, 2019 | Lakshmi GovindaRaj |

ಬೆಂಗಳೂರು: ಗಣೇಶ ಚತುರ್ಥಿಯಂದು ಪಿಒಪಿ ಹಾಗೂ ಬಣ್ಣ ಲೇಪಿತ ಗಣೇಶ ಮೂರ್ತಿಗಳನ್ನು ಬಳಸಬಾರದು ಎಂದು ಹೈಕೋರ್ಟ್‌ ಆದೇಶಿಸಿದ್ದರೂ ನಗರದಲ್ಲಿ ಕಡಿವಾಣ ಬಿದ್ದಿಲ್ಲ. ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಮೇಯರ್‌ ಗಂಗಾಂಬಿಕೆ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಈ ಸಂಬಂಧ ಬುಧವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಪಿಒಪಿ ಗಣೇಶ ಮೂರ್ತಿಗಳನ್ನು ಕೂರಿಸಲು ಹಾಗೂ ಕೆರೆಗಳಲ್ಲಿ ವಿಸರ್ಜನೆ ಮಾಡಲು ಅನುಮತಿ ಕೊಡಬಾರದು. ನಗರದಲ್ಲಿ ತಯಾರಿ, ಮಾರಾಟ, ಸಂಗ್ರಹಸಿಟ್ಟಿರುವ ಗೋಡನ್‌ಗಳಿಗೆ ಭೇಟಿ ನೀಡಿ ಎಲ್ಲಾ ಗಣೇಶ ಮೂರ್ತಿಗಳನ್ನು ಜಪ್ತಿ ಮಾಡಿ ಪಾಲಿಕೆ ನಿಗದಿಪಡಿಸಿರುವ ಸ್ಥಳಕ್ಕೆ ಕೊಂಡೊಯ್ಯಬೇಕು. ಅದಕ್ಕೆ ಬೇಕಾದ ವಾಹನ ವ್ಯವಸ್ಥೆಯನ್ನು ಪಾಲಿಕೆಯಿಂದಲೇ ಕಲ್ಪಿಸಲಾಗುವುದು.

ಜಪ್ತಿ ಮಾಡುವ ವೇಳೆ ಪೊಲೀಸ್‌ ಭದ್ರತೆ ಕಲ್ಪಿಸಲು ನಗರ ಪೊಲೀಸ್‌ ಆಯುಕ್ತರಿಗೆ ಪತ್ರ ಬರೆಯಲಾಗುವುದು ಎಂದು ಹೇಳಿದರು. ನಗರಕ್ಕೆ ಹೊರರಾಜ್ಯ ಮತ್ತು ಹೊರ ನಗರಗಳಿಂದ ಪಿಒಪಿ ಗಣೇಶ ಮೂರ್ತಿಗಳನ್ನು ತಡೆಯುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ, ಪೊಲೀಸ್‌ ಸಿಬ್ಬಂದಿಗಳನ್ನು ಚೆಕ್‌ಪೋಸ್ಟ್‌ಗಳಲ್ಲಿ ನಿಯೋಜನೆ ಮಾಡುವಂತೆಯೂ ಆಯುಕ್ತರಲ್ಲಿ ಮನವಿ ಮಾಡಲಾಗಿದೆ ಎಂದು ಹೇಳಿದರು.

ಈ ಬಾರಿ ನಗರದಲ್ಲಿ ಯಾವುದೇ ಕಾರಣಕ್ಕೂ ಪಿಒಪಿ ಗಣೇಶ ಮೂರ್ತಿಗಳನ್ನು ಮಾರಾಟ ಮಾಡುವಂತಿಲ್ಲ. ಪಾದಾಚಾರಿ ಮಾರ್ಗದಲ್ಲಿ ಗಣೇಶ ಮೂರ್ತಿಗಳನ್ನಿಟ್ಟು ಮಾರಾಟ ಮಾಡಲು ಅನುಮತಿ ಕೊಡಬೇಡಿ. ಗಣೇಶ ಮೂರ್ತಿ ತಯಾರಿಸಲು ಪರವಾನಗಿ ನೀಡಕೂಡದು. ಜೊತಗೆ ಪಿಒಪಿ ಗಣೇಶ ಮೂರ್ತಿಗಳನ್ನು ಕೂರಿಸಲು ಅನುಮತಿ ನೀಡಬಾರದು ಎಂದರು.

ತಾತ್ಕಾಲಿಕ ಹೊಂಡಗಳ ನಿರ್ಮಾಣ: ನಗರದಲ್ಲಿರುವ ಪ್ರಮುಖ ಕೆರೆಗಳ ಬಳಿ ತಾತ್ಕಾಲಿಕ ಹೊಂಡಗಳನ್ನು ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಬೇಕು. ಜೊತೆಗೆ ಆ ಸ್ಥಳಗಳಲ್ಲಿ ಬ್ಯಾರಿಕೇಡ್‌, ವಿದ್ಯುತ್‌ ದೀಪಗಳ ಅಳವಡಿಕೆ, ಸಿಸಿ ಕ್ಯಾಮರಾ ಅಳವಡಿಕೆ ಮಾಡಬೇಕು. ಗಣೇಶ ವಿಸರ್ಜನಾ ವಾಹನ ಎಲ್ಲೆಲ್ಲಿ ನಿರ್ಮಾಣ ಮಾಡಬೇಕು ಎಂಬ ಪಟ್ಟಿಯನ್ನು ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಆಯುಕ್ತ ಎನ್‌. ಮಂಜುನಾಥ ಪ್ರಸಾದ್‌ ಸ್ಪಷ್ಟಪಡಿಸಿದರು.

Advertisement

ಏಕಗವಾಕ್ಷಿ ಪದ್ಧತಿ: ಕಳೆದ ವರ್ಷದಂತೆ ಈ ಬಾರಿಯೂ ಕೂಡ ಬಿಬಿಎಂಪಿ, ಬೆಸ್ಕಾಂ, ಪೊಲೀಸ್‌ ಇಲಾಖೆಯಿಂದ ಏಕಗವಾಕ್ಷಿ ಪದ್ಧತಿಯಲ್ಲೇ ಗಣೇಶ ಮೂರ್ತಿಗಳನ್ನು ಕೂರಿಸಲು ಅನುವು ಮಾಡಿಕೊಡಲಾಗುವುದು. ಪಾಲಿಕೆ ವ್ಯಾಪ್ತಿಯಲ್ಲಿ ಕೂರಿಸುವ ಗಣೇಶ ಮೂರ್ತಿಗಳಿಗೆ ನೆಲ ಬಾಡಿಗೆಯನ್ನು ಸಂಗ್ರಹಿಸುವುದಿಲ್ಲ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next