ಸಾಗರ: ಪಡಿತರ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದ್ದು, ತಾಲೂಕು ಆಡಳಿತ ಸೂಕ್ತ ಕ್ರಮ ಜರುಗಿಸಬೇಕು. ಅಗತ್ಯ ಇಲ್ಲದವರ ಪಡಿತರ ಚೀಟಿಯನ್ನು ರದ್ದುಪಡಿಸುವಂತೆ ಒತ್ತಾಯಿಸಿ ಸಾಮಾಜಿಕ ಕಾರ್ಯಕರ್ತ ಸ್ವಾಮಿನಾಥ್ ಹೊಸಂತೆ ಗ್ರಾಮದಿಂದ ತಹಶೀಲ್ದಾರ್ ಕಚೇರಿವರೆಗೆ ರಾಷ್ಟ್ರಧ್ವಜ ಹಿಡಿದು 20 ಕಿಮೀ ಏಕಾಂಗಿಯಾಗಿ ಅರೆ ಬೆತ್ತಲೆ ಪಾದಯಾತ್ರೆ ನಡೆಸಿ ತಹಶೀಲ್ದಾರ್ ಮಲ್ಲೇಶ್ ಬಿ. ಪೂಜಾರ್ ಅವರಿಗೆ ಮನವಿ ಸಲ್ಲಿಸಿ, ತಮ್ಮ ಕುಟುಂಬದ ಪಡಿತರ ಚೀಟಿಯನ್ನು ರದ್ದುಪಡಿಸುವಂತೆ ಒತ್ತಾಯಿಸಿದ ವಿಚಿತ್ರ ಘಟನೆ ಶನಿವಾರ ನಡೆದಿದೆ.
ಇದೇ ಸಂದರ್ಭದಲ್ಲಿ ತಹಶೀಲ್ದಾರ್ ಮಲ್ಲೇಶ್ ಮನವಿ ಸ್ವೀಕರಿಸಿ ಸ್ವಾಮಿನಾಥ್ ಅವರಿಗೆ ಹೊಸ ಅಂಗಿ ಕೊಡಿಸಿ, ಬಸ್ ಚಾರ್ಜ್‌ಗೆ ವೈಯಕ್ತಿಕ ಹಣ ನೀಡಿ ಮಾನವೀಯತೆ ಮೆರೆದರು. ಜೊತೆಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಬೇಡಿಕೆ ಈಡೇರಿಸುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸ್ವಾಮಿನಾಥ್ ಹೊಸಂತೆ, ಕೇಂದ್ರ ಮತ್ತು ರಾಜ್ಯ ಸರ್ಕಾರ ಬಡಜನರು ಹಸಿವಿನಿಂದ ಬಳಲಬಾರದು ಎಂದು ಪಡಿತರ ಅಕ್ಕಿಯನ್ನು ಉಚಿತವಾಗಿ ಕೊಡುತ್ತಿದೆ. ನಮ್ಮ ಮನೆಯಲ್ಲಿ ಸುಮಾರು ಒಂದು ಕ್ವಿಂಟಾಲ್‌ನಷ್ಟು ಪಡಿತರ ಅಕ್ಕಿಯನ್ನು ಬಡವರಿಗೆ ಕೊಡಲು ಸಂಗ್ರಹಿಸಿ ಇಡಲಾಗಿತ್ತು. ಆದರೆ ನನ್ನ ಪತ್ನಿ ನನಗೆ ಗೊತ್ತಿಲ್ಲದೆ ಅಕ್ಕಿಯನ್ನು ಕಾಳಸಂತೆಕೋರರಿಗೆ ಮಾರಾಟ ಮಾಡಿದ್ದಾರೆ. ಇದರಿಂದ ನನಗೆ ಬೇಸರವಾಗಿದೆ. ಈ ಹಿನ್ನೆಲೆಯಲ್ಲಿ ಅರೆಬೆತ್ತಲೆಯಾಗಿ 20 ಕಿಮೀ ಪಾದಯಾತ್ರೆ ನಡೆಸಿ ನನ್ನ ಪಡಿತರ ಚೀಟಿಯನ್ನು ರದ್ದು ಮಾಡುವಂತೆ ಮನವಿ ಮಾಡಿದ್ದೇನೆ. ಜೊತೆಗೆ ತಾಲೂಕಿನ ಬೇರೆಬೇರೆ ಭಾಗದಲ್ಲಿ ಇಂತಹ ಅವ್ಯವಹಾರ ನಡೆಯುತ್ತಿದೆ. ಅಗತ್ಯ ಇಲ್ಲದವರ ಪಡಿತರ ಚೀಟಿಯನ್ನು ರದ್ದು ಮಾಡಬೇಕು. ಪಡಿತರ ಅಕ್ಕಿಯನ್ನು ಖರೀದಿ ಮಾಡುವ ರೈಸ್‌ಮಿಲ್, ಅಂಗಡಿಯವರ ಮೇಲೆ ದಾಳಿ ನಡೆಸಿ ಸೂಕ್ತಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ: 2022-23 ನೇ ಸಾಲಿನ ಆರಾಧನಾ ಕಾರ್ಯಕ್ರಮಕ್ಕಾಗಿ 49.74 ಕೋಟಿ ರೂಪಾಯಿಗಳ ಅನುದಾನ
ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್, ಸ್ವಾಮಿನಾಥ್ ಅವರ ಸಾಮಾಜಿಕ ಕಳಕಳಿ ಮಾದರಿಯಾಗಿದೆ. ಮನವಿಯಲ್ಲಿ ತಿಳಿಸಿರುವಂತೆ ನಾನು ಅವರ ಮನೆಗೆ ಹೋಗಿ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಜರುಗಿಸುತ್ತೇನೆ. ಇದರ ಜೊತೆಗೆ ತಾಲೂಕಿನಲ್ಲಿ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಯಾರಾದರೂ ಮಾರಾಟ ಮಾಡುವುದಾಗಲಿ, ಖರೀದಿ ಮಾಡುವುದಾಗಲಿ ಕಂಡು ಬಂದರೆ ನನ್ನ ಗಮನಕ್ಕೆ ತನ್ನಿ. ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಹೇಳಿದರು.