Advertisement

ಸಿಲಿಂಡರ್‌ನಲ್ಲಿ ಗಾಂಜಾ ಮಾರಾಟ: ಆರೋಪಿಯ ಬಂಧನ

12:57 PM Dec 13, 2017 | Team Udayavani |

ಬೆಂಗಳೂರು: ಉದ್ಯಾನಗರಿಯಾಗಿರುವ ಬೆಂಗಳೂರು ಡ್ರಗ್‌ ಯಾರ್ಡ್‌ ಆಗಿ ಬದಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ನಗರದಲ್ಲಿ ಹೆಚ್ಚುತ್ತಿರುವ ಮಾದಕ ವಸ್ತು ಮಾರಾಟ ದಂಧೆಯೇ ಇದಕ್ಕೆ ಸಾಕ್ಷಿ.

Advertisement

ಮತ್ತೂಂದೆಡೆ ಮಾದಕ ವಸ್ತು ದಂಧೆಕೋರರ ವಿರುದ್ಧ ಸಮರ ಸಾರಿರುವ ಪೊಲೀಸರು ಆರೋಪಿಗಳ ಪತ್ತೆಗಾಗಿ ಚಾಪೆ ಕೆಳಗೆ ತೂರಿದ್ರೆ, ಆರೋಪಿಗಳು ರಂಗೋಲಿ ಕೆಳಗೆ ತೂರುತ್ತಾರೆ. ಇದಕ್ಕೆ ತಾಜಾ ಉದಾಹರಣೆ ಎಂದರೇ, ಖಾಲಿ ಸಿಲಿಂಡರ್‌ಗಳ ಹಿಂಭಾಗವನ್ನು ಕತ್ತರಿಸಿ ಲಾಕ್‌ ವ್ಯವಸ್ಥೆ ಮಾಡಿಕೊಂಡು ಗಾಂಜಾ ಮಾರಾಟ ಮಾಡುತ್ತಿದ್ದ ಬೃಹತ್‌ ಜಾಲವನ್ನು ರಾಮಮೂರ್ತಿನಗರ ಠಾಣೆ ಪೊಲೀಸರು ಬೇಧಿಸಿದ್ದಾರೆ.

ಕೆ.ಆರ್‌.ಪುರಂ ರೈಲ್ವೆ ನಿಲ್ದಾಣದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಗುಲಾಬ್‌ಜಾನ್‌(40) ನನ್ನು ಬಂಧಿಸಲಾಗಿದೆ. ಈತನಿಂದ ಒಂದು ಆಟೋ ರಿûಾ, ಚಿಕ್ಕ ಪ್ಯಾಕೇಟ್‌ಗಳ  ಸಮೇತ 3 ಕೆ.ಜಿ.350 ಗ್ರಾಂ ಗಾಂಜಾ, ಗಾಂಜಾ ತುಂಬಿದ್ದ ಎರಡು ಸಿಲಿಂಡರ್‌ಗಳು ಹಾಗೂ ಒಂದು ಮೊಬೈಲ್‌ ವಶಕ್ಕೆ ಪಡೆಯಲಾಗಿದೆ. ಮತ್ತೂಬ್ಬ ಆರೋಪಿ ಬಹದ್ದೂರ್‌ಗಾಗಿ ಹುಡುಕಾಟ ನಡೆಯುತ್ತಿದೆ.

ಈ ದಂಧೆಯ ಹಿಂದೆ ಬೃಹತ್‌ ಜಾಲ ಇದ್ದು, ಇದನ್ನು ಬೇಧಿಸಲು ವಿಶೇಷ ತಂಡ ರಚಿಸಲಾಗಿದೆ. ಸಿಲಿಂಡರ್‌ನ ತಳ ಭಾಗವನ್ನು ಕತ್ತರಿಸಿ ಗಾಂಜಾ ತುಂಬಿಸಿ ಕೊಡುತ್ತಿದ್ದ ಕೆ.ಆರ್‌.ಪುರಂ ನಿವಾಸಿ ಪ್ರಮುಖ ಆರೋಪಿಯ ಬಗ್ಗೆ ಮಾಹಿತಿ ಸಿಕ್ಕಿದ್ದು, ಸದ್ಯದಲ್ಲೇ ಬಂಧಿಸಲಾಗುವುದು.

ಆರೋಪಿ ರೈಲ್ವೆ ನಿಲ್ದಾಣದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಬಗ್ಗೆ ಡಿಸಿಪಿ ವಿಶೇಷ ದಳಕ್ಕೆ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ರಾಮಮೂರ್ತಿನಗರ ಠಾಣೆ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್‌ ಆಯುಕ್ತ ಸೀಮಂತ್‌ ಕುಮಾರ್‌ ಸಿಂಗ್‌ ಹೇಳಿದರು.

Advertisement

ಖಾಲಿ ಸಿಲಿಂಡರ್‌ನಲ್ಲಿ ಗಾಂಜಾ: ಇತ್ತೀಚೆಗೆ ಮಾದಕ ವಸ್ತು ಮಾರಾಟ ಆರೋಪದ ಮೇಲೆ ಆರೋಪಿಯೊಬ್ಬನನ್ನು ಬಂಧಿಸಲಾಗಿತ್ತು. ಈತ ಹೊಸಕೋಟೆ ಮತ್ತು ಕೆ.ಆರ್‌.ಪುರಂ ರೈಲ್ವೆ ನಿಲ್ದಾಣದಲ್ಲಿ ಗಾಂಜಾ ಖರೀದಿಸಿದ್ದಾಗಿ ಹೇಳಿದ್ದ. ಈ ಮಾಹಿತಿ ಆಧರಿಸಿ ಕೆ.ಆರ್‌.ಪುರಂ ರೈಲ್ವೆ ನಿಲ್ದಾಣದ ಬಳಿ ದಾಳಿ ನಡೆಸಿದಾಗ ಗುಲಾಬ್‌ಜಾನ್‌ ಅನ್ನು ಮಾಲು ಸಮೇತ ಬಂಧಿಸಲಾಗಿತ್ತು.

ಬಳಿಕ ತೀವ್ರ ವಿಚಾರಣೆಗೆ ಒಳಪಡಿಸಿದಾಗ ಇನ್ನಷ್ಟು ಗಾಂಜಾ ಸಂಗ್ರಹಿಸಿಟ್ಟಿದ್ದ ರೈಲ್ಲೆ ನಿಲ್ದಾಣದ ಬಳಿಯಿರುವ ಸ್ಲಂವೊಂದರಲ್ಲಿರುವ ಮನೆಯೊಂದಕ್ಕೆ ಕರೆದೊಯ್ದ. ಈ ಮನೆ ಮುಂದೆ ನಿಂತಿದ್ದ ಆಟೋವನ್ನು ಪರಿಶೀಲಿಸಿದಾಗ ಎರಡು ಸಿಲಿಂಡರ್‌ಗಳು ಪತ್ತೆಯಾದವು. ಈ ಬಗ್ಗೆ ಆರೋಪಿಗೆ ಪ್ರಶ್ನಿಸಿದಾಗ ಯಾವುದೇ ಸುಳಿವು ನೀಡಲಿಲ್ಲ.

ನಂತರ ಸಿಲಿಂಡರ್‌ ಮೇಲೆ-ಕೆಳಗೆ ಮಾಡಿದಾಗ ಹಿಂಭಾಗದಲ್ಲಿ ಲಾಕರ್‌ ವ್ಯವಸ್ಥೆ ಮಾಡಿರುವುದು ಬೆಳಕಿಗೆ ಬಂತು. ಆದರೆ, ಇದರ ಕೀ ಪರಾರಿಯಾದ ಬಹದ್ದೂರ್‌ ಬಳಿ ಇತ್ತು. ಹೀಗಾಗಿ ಕಬ್ಬಿಣ ರಾಡ್‌ನಿಂದ ಬೀಗ ಒಡೆದಾಗ ಅದರೊಳಗೆ ಸಣ್ಣ-ಸಣ್ಣ ಗಾಂಜಾ ಪ್ಯಾಕೆಟ್‌ಗಳು ಪತ್ತೆಯಾಗಿವೆ. ಆರೋಪಿ ಹೇಳುವ ಪ್ರಕಾರ  ತಾನು ಗಾಂಜಾ ಮಾರಾಟಗಾರ ಅಷ್ಟೇ.

ಸಿಲಿಂಡರ್‌ಗೆ ತುಂಬಿಕೊಟ್ಟ ವ್ಯಕ್ತಿ ಬೇರೆ ಇದ್ದಾನೆ ಎಂದು ಮಾಹಿತಿ ನೀಡಿದ್ದಾನೆ. ಆತನ ಬಗ್ಗೆಯೂ ಮಾಹಿತಿ ಸಿಕ್ಕಿದ್ದು ಸದ್ಯದಲ್ಲೇ ಬಂಧಿಸುತ್ತೇವೆ. ಪ್ರಾಥಮಿಕ ಮಾಹಿತಿ ಪ್ರಕಾರ ಆಂಧ್ರಪ್ರದೇಶ ಮೂಲಕ ನಗರಕ್ಕೆ ಗಾಂಜಾ ಸರಬರಾಜು ಆಗುತ್ತಿದೆ ಎಂಬ ಮಾಹಿತಿ ಇದೆ ಎಂದು ಅವರು ತಿಳಿಸಿದರು.

ಪ್ರಯಾಣಿಕರಂತೆ ಪರಾರಿ: ಖಚಿತ ಮಾಹಿತಿ ಮೇರೆಗೆ ರಾಮಮೂರ್ತಿನಗರ ಇನ್‌ಸ್ಪೆಕ್ಟರ್‌ ನೇತೃತ್ವದ ತಂಡ ಕೆ.ಆರ್‌.ಪುರಂ. ರೈಲ್ವೆ ನಿಲ್ದಾಣದ ಬಳಿ ದಾಳಿ ನಡೆಸಿ ಗುಲಾಬ್‌ಜಾನ್‌ನನ್ನು ವಶಕ್ಕೆ ಪಡೆಯುತ್ತಿದ್ದಂತೆ ಪ್ರಯಾಣಿಕರಂತೆ ರಸ್ತೆ ಬದಿಗಳಲ್ಲಿ, ರೈಲ್ವೆ ನಿಲ್ದಾಣದ ಬಳಿ ಗಿರಾಕಿಗಳು ಹಾಗೂ ಪೊಲೀಸರನ್ನು ಗಮನಿಸುತ್ತಿದ್ದ ಇತರೆ ನಾಲ್ಕು ಮಂದಿ ಆರೋಪಿಗಳು ಪರಾರಿಯಾಗಿದ್ದಾರೆ.

ಆರಂಭದಲ್ಲಿ ಇವರನ್ನು ಕಂಡು ರೈಲಿಗೆ ತೆರಳಲು ಪ್ರಯಾಣಿಕರು ಹೋಗುತ್ತಿದ್ದಾರೆ ಎಂಬ ಭಾವಿಸಿದ್ದೆವು. ನಂತರ ಇವರ ಕೂಗಾಟ ಹಾಗೂ ಇತರರಿಗೆ ತಪ್ಪಿಸಿಕೊಳ್ಳುವಂತೆ ಸೂಚಿಸುತ್ತಿದ್ದುದ್ದನ್ನು ಗಮನಿಸಿ ಬೆನ್ನು ಬಿದ್ದ ಪೊಲೀಸರಿಗೆ ಕಣ್ಣುತಪ್ಪಿಸಿ ರೈಲ್ವೆ ಟ್ರ್ಯಾಕ್‌ ದಾಟಿ ಪರಾರಿಯಾದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹೇಗಿತ್ತು ಲಾಕರ್‌: ಸಿಲಿಂಡರ್‌ ಹಿಂಭಾಗವನ್ನು ವೃತ್ತಾಕಾರದಲ್ಲಿ ಕತ್ತರಿಸಿ ಒಂದು ಭಾಗದಲ್ಲಿ ಬೀಗ ಹಾಗೂ ಮತ್ತೂಂದು ಭಾಗದಲ್ಲಿ ತೆರೆಯಲು ಅನುಕೂಲವಾಗುವಂತೆ ಚಿಲಕ ಅಳವಡಿಸಿದ್ದಾರೆ. ಆಂಧ್ರಪ್ರದೇಶದಿಂದ ರೈಲಿನಲ್ಲಿ ಬರುತ್ತಿದ್ದ ಗಾಂಜಾವನ್ನು ಸಣ್ಣ-ಸಣ್ಣ ಪ್ಯಾಕೆಟ್‌ಗಳನ್ನಾಗಿ ಮಾಡಿ ಸಿಲಿಂಡರ್‌ನಲ್ಲಿ ಭರ್ತಿ ಮಾಡುತ್ತಿದ್ದರು. ಇದಕ್ಕಾಗಿಯೇ ನಾಲ್ಕೈದು ಸಿಲಿಂಡರ್‌ಗಳನ್ನು ಕಳವು ಮಾಡಿದ್ದರು. ಗ್ರಾಹಕರ ಬೇಡಿಕೆಗೆ ತಕ್ಕಂತೆ ಅಲ್ಲಲ್ಲಿ ಸಿಲಿಂಡರ್‌ ಅನ್ನು ಕೊಂಡೊಯ್ದು ಗಾಂಜಾ ಮಾರಾಟ ಮಾಡುತ್ತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next