ಬೆಂಗಳೂರು: ನಗರದ ಕೆಲ ಅಂಗಡಿಗಳಲ್ಲಿ ಬಿಸ್ಕೆಟ್, ಚಾಕಲೇಟ್ ಸೇರಿ ಆಹಾರ ಪದಾರ್ಥಗಳ ಖರೀದಿ ವೇಳೆ ಎಚ್ಚರವಹಿಸಿ. ನಗರದಲ್ಲಿ ಅವಧಿ ಮೀರಿದ ಆಹಾರ ಪದಾರ್ಥ ಸಂಗ್ರಹಿಸಿ ಮಾರಾಟ ಮಾಡುತ್ತಿದ್ದ ಅಂಗಡಿ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ, 10 ಲಕ್ಷ ರೂ. ಮೌಲ್ಯದ ಆಹಾರ ಪದಾರ್ಥ ಜಪ್ತಿ ಮಾಡಿದ್ದಾರೆ.
ಈ ಸಂಬಂಧ ಇಮ್ರಾನ್ ಖಾನ್(40) ಎಂಬಾತನನ್ನು ಬಂಧಿಸಲಾಗಿದೆ. ಸಿದ್ದಾಪುರ ಠಾಣೆ ವ್ಯಾಪ್ತಿಯ ಅರೆಕಂಪನಹಳ್ಳಿಯಲ್ಲಿ ಆರೋಪಿ ಇಮ್ರಾನ್ ಖಾನ್ ಎಚ್.ಎಂ.ಟ್ರೇಡರ್ಸ್ ಎಂಬ ದಿನಸಿ ಮಳಿಗೆ ಹೊಂದಿದ್ದ. ಅದರಲ್ಲಿ ಅವಧಿ ಮೀರಿದ ಪ್ರತಿಷ್ಠಿತ ಕಂಪನಿಗಳ ಚಾಕಲೇಟ್, ಬಿಸ್ಕೆಟ್ ಮತ್ತು ತಿಂಡಿ, ತಿನಿಸು ಮತ್ತಿತರ ಆಹಾರ ಪದಾರ್ಥಗಳನ್ನು ಕಡಿಮೆ ಬೆಲೆಗೆ ಖರೀದಿಸಿ, ಸಂಗ್ರಹಿಸಿ ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಲೇಬಲ್ ತೆಗೆದು ಮಾರಾಟ: ಅವಧಿ ಮೀರಿದ ಪದಾರ್ಥಗಳ ಮೇಲಿನ ದಿನಾಂಕದ ಅವಧಿ ಮತ್ತು ದರ ಪಟ್ಟಿಯ ಲೇಬಲ್ ತೆಗೆದು ಹಾಕಿ, ಸಾರ್ವಜನಿಕರಿಗೆ ಮಾರುತ್ತಿದ್ದ. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ. ಆತನ ಮಳಿಗೆಯಲ್ಲಿದ್ದ 10 ಲಕ್ಷ ರೂ. ಮೌಲ್ಯದ ಅವಧಿ ಮೀರಿದ ಆಹಾರ ಪಾದರ್ಥಗಳನ್ನು ಜಪ್ತಿ ಮಾಡಲಾಗಿದೆ ಎಂದು ಸಿಸಿಬಿ ಪೊಲೀಸರು ಹೇಳಿದರು.
ಸಿಸಿಬಿ ಆರ್ಥಿಕ ಅಪರಾಧ ದಳದ ಎಸಿಬಿ ಮಂಜುನಾಥ್ ಚೌಧರಿ, ಇನ್‌ಸ್ಪೆಕ್ಟರ್ ಸಂತೋಷ್ ರಾವ್ ನೇತೃತ್ವದಲ್ಲಿ ಕಾರಾಚರಣೆ ನಡೆಸಲಾಗಿದೆ.
ಸಗಟು ವ್ಯಾಪಾರಿಗಳಿಂದ ಖರೀದಿ ಅವಧಿ ಮೀರಿದ ಆಹಾರ ಪದಾರ್ಥಗಳನ್ನು ಸಗಟು ವ್ಯಾಪಾರಿಗಳು ಕಂಪನಿಗಳಿಗೆ ಹಿಂದಿರುಗಿಸುತ್ತಾರೆ. ಆದರೆ, ಕೆಲ ಸಗಟು ವ್ಯಾಪಾರಿಗಳು, ಕಂಪನಿಗಳಿಂದ ಹಣ ವಾಪಸ್ ಬರುವುದು ತಡವಾಗುತ್ತದೆ ಎಂಬ ಕಾರಣಕ್ಕೆ, ಅಲ್ಪ ಮೊತ್ತಕ್ಕೆ ಇಂತಹ ವ್ಯಾಪಾರಿಗಳಿಗೆ ಮಾರುತ್ತಾರೆ. ಅವುಗಳನ್ನು ಖರೀದಿಸಿದ ವ್ಯಾಪಾರಿ ಅವುಗಳ ಮೇಲಿನ ಲೇಬಲ್ ತೆಗೆದು ಹಾಕಿ, ರಿಯಾಯಿತಿ ದರದಲ್ಲಿ ಮಾರಾಟ ಮಾಡುತ್ತಾನೆ ಎಂದು ಸಿಸಿಬಿ ಎಂದು ಪೊಲೀಸರು ಹೇಳಿದರು.