Advertisement

ಬೀಗಮುದ್ರೆ ಇದ್ದರೂ ಮಾರಾಟ!: ಮದ್ಯ ದಾಸ್ತಾನು ತಪಾಸಣೆಗೆ ಸೂಚನೆ

09:53 AM May 02, 2020 | mahesh |

ಮಂಗಳೂರು: ಲಾಕ್‌ಡೌನ್‌ ಅವಧಿಯಲ್ಲಿ ಸೀಲ್‌ ಮಾಡಿರುವ (ಬೀಗ ಮುದ್ರೆ) ಬಾರ್‌ ಮತ್ತು ವೈನ್‌ಶಾಪ್‌ ಸಹಿತ ಎಲ್ಲ ವಿಧದ ಮದ್ಯ ಮಾರಾಟ ಅಂಗಡಿಗಳಲ್ಲಿ (ಸನ್ನದುಗಳ) ಮದ್ಯ ದಾಸ್ತಾನುಗಳನ್ನು ತಪಾಸಣೆ ಮಾಡು ವಂತೆ ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಬಾರ್‌, ಮದ್ಯದಂಗಡಿಗಳ ಸಹಿತ ಎಲ್ಲ ಮದ್ಯ ಮಾರಾಟ ಸನ್ನದುಗಳನ್ನು ಬೀಗ ಮುದ್ರೆಗೊಳಿಸಿದ್ದರೂ ಮದ್ಯ ಮಾರಾಟ ಹಾಗೂ ಸಾಗಾಟ ಮಾಡಿರುವ ಬಗ್ಗೆ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ರಾಜ್ಯ ಅಬಕಾರಿ ಆಯುಕ್ತರು ಜ್ಞಾಪನಾಪತ್ರನ್ನು ಹೊರಡಿಸಿದ್ದು, ಲಾಕ್‌ಡೌನ್‌ ಪೂರ್ವದಲ್ಲಿದ್ದ ಮದ್ಯ, ಬಿಯರ್‌ ದಾಸ್ತಾನುಗಳನ್ನು ತಪಾಸಣೆ ಮಾಡುವಂತೆ ಅಬಕಾರಿ ಇಲಾಖೆಗೆ ಸೂಚಿಸಿದ್ದರು. ಸನ್ನದುಗಳು ಈ ಹಿಂದೆ ಸೀಲ್‌ ಮಾಡಿರುವಂತೆಯೇ ಇರುವು ದನ್ನು ದೃಢಪಡಿಸಿಕೊಂಡು ಜಿಲ್ಲಾಧಿಕಾರಿಯವರ ಅನುಮತಿಯೊಂದಿಗೆ ಸನ್ನದುದಾರರ ಗಮನಕ್ಕೆ ತಂದು ಸನ್ನದಿನಲ್ಲಿರುವ ಮದ್ಯ, ಬಿಯರ್‌, ವೈನ್‌ ಇತ್ಯಾದಿಗಳ ಪ್ರಮಾಣದ ಇನ್‌ವೆಂಟ್ರಿಯನ್ನು ಸಿದ್ಧಪಡಿಸಿಕೊಂಡು ವ್ಯತ್ಯಾಸ ಕಂಡುಬಂದಲ್ಲಿ ವಿವರವಾದ ತನಿಖೆ ಮಾಡಿ ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಅವರು ಪತ್ರದಲ್ಲಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು.
ಇದರನ್ವಯ ಜಿಲ್ಲಾಧಿಕಾರಿಯವರು ಆದೇಶವನ್ನು ಹೊರಡಿಸಿ ಲಾಕ್‌ಡೌನ್‌ ಮಾಡಿದ ಅವಧಿಯಲ್ಲಿ ಸೀಲ್‌ ಮಾಡಿರುವ ಎಲ್ಲ ವಿಧದ ಮದ್ಯ ಮಾರಾಟದ ಸನ್ನದುಗಳನ್ನು ಸನ್ನದುದಾರರ ಸಮಕ್ಷಮದಲ್ಲಿ ತೆರೆದು ವೀಡಿಯೋ ಚಿತ್ರೀಕರಣದೊಂದಿಗೆ ಮದ್ಯ, ಬಿಯರ್‌, ವೈನ್‌ ಇತ್ಯಾದಿ ಅಬಕಾರಿ ವಸ್ತುಗಳ ದಾಸ್ತಾನು ವಿವರ ತಯಾರಿಸಲು ಅನುಮತಿ ನೀಡಿದ್ದಾರೆ. ದಾಸ್ತಾನು ಲಾಕ್‌ಡೌನ್‌ ಪೂರ್ವದಲ್ಲಿದ್ದ ಪ್ರಮಾಣಕ್ಕಿಂತ ವ್ಯತ್ಯಾಸ ಕಂಡುಬಂದಲ್ಲಿ ಅಂತಹ ಸನ್ನದುಗಳ ವಿರುದ್ಧ ಕ್ರಮ ಜರಗಿಸುವಂತೆ ಸೂಚಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next