ರಾಮನಗರ: ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಭಾನುವಾರ ನಗರದ ಕೃಷಿ ಉತ್ಪನ್ನ ಮಾರುಕಟ್ಟೆಗೆ (ಎಪಿಎಂಸಿ) ಭೇಟಿ ನೀಡಿ ಮೂಲ ಸೌಕರ್ಯಗಳ ಬಗ್ಗೆ ಪರಿಶೀಲನೆ ನಡೆಸಿದರು. ಹಣ್ಣು ಮತ್ತು ತರಕಾರಿ ಮಾರಾಟಕ್ಕೆ ರೈತರಿಗೆ ಎಲ್ಲಾ ಸೌಕರ್ಯಗಳನ್ನು ಕಲ್ಪಿಸಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕೆಲವರು ರೈತರು ಮತ್ತು ಮಾರಾಟಗಾರರ ಬಳಿ ಮಾತನಾಡಿ, ಬೇಡಿಕೆ ಕುಸಿದಿರುವ ತರಕಾರಿ, ಹಣ್ಣು ಗಳ ಬಗ್ಗೆ ಮಾಹಿತಿ ಸಂಗ್ರಹಿಸಿದರು. ದಪ್ಪ ಮೆಣಸಿನಕಾಯಿ, ನಿಂಬೆಹಣ್ಣಿಗೆ ಬೇಡಿಕೆ ಕಡಿಮೆಯಾಗಿದೆ ಎಂದು ಕೆಲವು ರೈತರು ಸಚಿವರ ಗಮನ ಸೆಳೆದರು.
ಕೃಷಿ ಉತ್ಪನ್ನಗಳ ಸಾಗಾಣಿಕೆಗೆ ಗ್ರೀನ್ ಪಾಸ್: ಸುದ್ದಿಗಾರರೊಂದಿಗೆ ಮಾತನಾಡಿ, ಲಾಕ್ ಡೌನ್ ಜಾರಿಯಲ್ಲಿದ್ದು, ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳ ಸಾಗಾಣಿಕೆ ಮತ್ತು ಮಾರಾಟಕ್ಕೆ ಮತ್ತು ಕೃಷಿ ಕ್ಷೇತ್ರದ ಚಟುವಟಿಕೆಗಳಿಗೆ ರಾಜ್ಯದಲ್ಲಿ ಸಂಪೂರ್ಣ ಮುಕ್ತವಾಗಿದೆ. ಸರ್ಕಾರ ಸದ್ಯದಲ್ಲೇ ಗ್ರೀನ್ ಪಾಸ್ ವ್ಯವಸ್ಥೆ ಜಾರಿ ಮಾಡಲಿದೆ. ಹೋಟೆಲ್ ಗಳು ಮುಚ್ಚಿದ್ದರಿಂದ ಅನ್ಯ ರಾಜ್ಯಗಳಿಗೆ ಸಾಗಾಣಿಕೆ ಕಡಿತವಾಗಿದ್ದು, ರೈತರು ಬೆಳೆದ ಕೆಲವು ಬೆಳೆಗೆ ಬೇಡಿಕೆಯಿಲ್ಲದೆ ನಷ್ಟ ಅನುಭವಿಸಿರುವ ಪ್ರಕರಣಗಳ ಬಗ್ಗೆ ಸಿಎಂ ಬಳಿ ಚರ್ಚಿಸಿ ಪರಿಹಾರಕ್ಕೆ
ಪ್ರಯತ್ನಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
13 ಸಾವಿರ ಕೋಟಿ ರೂ. ಬೆಳೆಸಾಲ: ಕಳೆದ ಸಾಲಿನಲ್ಲಿ ರೈತರಿಗೆ 13 ಸಾವಿರ ಕೋಟಿ ರೂ. ಬೆಳೆ ಸಾಲ ನೀಡಲಾಗಿದೆ. ಈ ಸಾಲಿನಲ್ಲೂ ಅಷ್ಟೇ ಪ್ರಮಾಣದ ಸಾಲ ನೀಡಲು ಸರ್ಕಾರ ಉದ್ದೇಶಿಸಿದೆ. ಇನ್ನೆರಡು ದಿನಗಳಲ್ಲಿ ಈ ಬಗ್ಗೆ ಆದೇಶ ಹೊರಡಿಸಲಾಗುವುದು. ಜತೆಗೆ ರಾಜ್ಯದಲ್ಲಿ ಹಸಿರು ಜೋನ್ ಸೇರಿದಂತೆ ಲಾಕ್‌ಡೌನ್ ಸಡಿಲಿಕೆ ಬಗ್ಗೆ ಮುಖ್ಯಮಂತ್ರಿ ಸೋಮವಾರ ಕ್ಯಾಬಿನೆಟ್ ಮೀಟಿಂಗ್ ಕರೆದಿದ್ದಾರೆ ಎಂದು ಮಾಹಿತಿ ಕೊಟ್ಟರು.
ಡೀಸಿ ಎಂ.ಎಸ್.ಅರ್ಚನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನೂಪ್ ಶೆಟ್ಟಿ , ತಹಶೀಲ್ದಾರ್ ನರಸಿಂಹ ಮೂರ್ತಿ, ಎಪಿಎಂಸಿ ಅಧ್ಯಕ್ಷ ದೊರೆಸ್ವಾಮಿ ಮತ್ತು ಪದಾಧಿಕಾರಿಗಳು, ರಾಜ್ಯ ಕೆಡಿಪಿ ಸದಸ್ಯ ಎಂ.ರುದ್ರೇಶ್, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಎಸ್. ಮುರಳೀಧರ, ಬಿಡದಿ ಸ್ಮಾರ್ಟ್ ಸಿಟಿ ಅಧ್ಯಕ್ಷ ವರದರಾಜೇಗೌಡ, ಕೆಎಂಎಫ್ ಮಾಜಿ ಅಧ್ಯಕ್ಷ ಪಿ.ನಾಗರಾಜ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಸಚಿವರೊಂದಿಗಿದ್ದರು.