ಬಾಗಲಕೋಟೆ: ಸೇವಾ ಹಿರಿತನ ಮೇಲೆ ಮುಖ್ಯಾಧ್ಯಾಪಕ ಹುದ್ದೆಗೆ ಬಡ್ತಿ ಪಡೆಯುವ ಶಿಕ್ಷಕರು ಅದನ್ನು ನಿರಾಕರಿಸಿ ಮೊದಲಿದ್ದ ಹುದ್ದೆಯಲ್ಲೇ ಮುಂದುವರಿದರೂ ನಿಯಮ ಬಾಹಿರವಾಗಿ ಅಂತಹ ಶಿಕ್ಷಕರಿಗೆ ವೇತನ ಬಡ್ತಿ ನೀಡುತ್ತಿದ್ದು, ಇದರಿಂದ ಸರ್ಕಾರಕ್ಕೆ ವಾರ್ಷಿಕ 45ರಿಂದ 50 ಕೋಟಿ ಹೊರೆಯಾಗುತ್ತಿರುವ ಪ್ರಕರಣ ಜಿಲ್ಲೆಯಲ್ಲಿ ಬಯಲಿಗೆ ಬಂದಿದೆ.
ಸರ್ಕಾರಿ ಪ್ರಾಥಮಿಕ ಶಾಲಾ ಸಹ ಶಿಕ್ಷಕರಿಗೆ ಕಾನೂನು ಬಾಹಿರವಾಗಿ 10, 20, 25, 30 ವರ್ಷಗಳ ವಿಶೇಷ ವೇತನ ಬಡ್ತಿ ನೀಡಿ ತಾರತಮ್ಯವೆಸಗಿದ್ದು, ಸೇವಾ ಪುಸ್ತಕದಲ್ಲಿ ಮುಂಬಡ್ತಿ ಕುರಿತು ಮಾಹಿತಿ ದಾಖಲಿಸದೆ ಸರ್ಕಾರದ ಬೊಕ್ಕಸಕ್ಕೆ ನಷ್ಟವನ್ನುಂಟು ಮಾಡಲಾಗುತ್ತಿದೆ. ಇದರಲ್ಲಿ ಪ್ರಭಾವ ಹೊಂದಿರುವ ಶಿಕ್ಷಕರು, ಇಲಾಖೆ ಅಧಿಕಾರಿಗಳೂ ಭಾಗಿಯಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಏನಿದು ಪ್ರಕರಣ?:
ಪ್ರಾಥಮಿಕ, ಪ್ರೌಢ ಶಾಲಾ ಶಿಕ್ಷಕರಿಗೆ ತಾವು ಸಲ್ಲಿಸಿದ ಸೇವಾ ಹಿರಿತನ (10, 20, 25, 30 ವರ್ಷ)ದ ಮೇಲೆ 10 ವರ್ಷದ ಕಾಲಮಿತಿ ವೇತನ ಬಡ್ತಿ, 15 ವರ್ಷದ ಸ್ವಯಂ ಚಾಲಿತ ವೇತನ ಬಡ್ತಿ ಹಾಗೂ 20, 25, 30 ವರ್ಷದ ವಿಶೇಷ ವೇತನ ಬಡ್ತಿ ನೀಡಲಾಗುತ್ತದೆ. ಈ ಬಡ್ತಿ ನೀಡುವಾಗ ಕಡ್ಡಾಯವಾಗಿ ಪ್ರಾಕ್ಸಿ ಕೌನ್ಸೆಲಿಂಗ್‌ನಲ್ಲಿ ಹಾಜರಾಗಬೇಕು. ಹೀಗೆ ಹಾಜರಾದವರು ಮುಖ್ಯಾಧ್ಯಾಪಕ ಹುದ್ದೆಗೆ ಬಡ್ತಿ ಪಡೆಯುತ್ತಾರೆ. ಅವರಿಗೆ ವೇತನ ಬಡ್ತಿ ಸಮೇತ ಬಡ್ತಿ ಪಡೆದ ಹುದ್ದೆಗೆ ವರ್ಗಗೊಳ್ಳುತ್ತಾರೆ. ಆದರೆ, ಜಿಲ್ಲೆಯಲ್ಲಿ ಬಹುತೇಕರು ಮುಖ್ಯಾಧ್ಯಾಪಕ ಹುದ್ದೆ ಜವಾಬ್ದಾರಿ ತೆಗೆದುಕೊಳ್ಳದೆ ತಾವಿದ್ದ ಸಹ ಶಿಕ್ಷಕ ಹುದ್ದೆಯಲ್ಲೇ ಮುಂದುವರಿಯಲು ಬಯಸಿ ಬಡ್ತಿ ನಿರಾಕರಿಸುತ್ತಾರೆ.
ಇನ್ನೂ ಕೆಲವರು ಪ್ರಾಕ್ಸಿ ಕೌನ್ಸೆಲಿಂಗ್‌ಗೆ ಹಾಜರಾದರೂ ತಮಗೆ ಬೇಕಾದ ಸ್ಥಳ ಸಿಗಲಿಲ್ಲ ಎಂಬ ಕಾರಣಕ್ಕೆ ಬಡ್ತಿಯನ್ನು ತಾತ್ಕಾಲಿಕವಾಗಿ ನಿರಾಕರಿಸಿ ಅದೇ ಸ್ಥಳ ಹಾಗೂ ಹುದ್ದೆಯಲ್ಲಿ ಮುಂದುವರಿಯುತ್ತಾರೆ. ಇದನ್ನು ಕಡ್ಡಾಯವಾಗಿ ಸೇವಾ ಪುಸ್ತಕದಲ್ಲಿ ನಮೂದಿಸಬೇಕು. ಬಡ್ತಿ ನಿರಾಕರಿಸಿದರೆ ಪ್ರಾಕ್ಸಿ ಕೌನ್ಸೆಲಿಂಗ್‌ನಲ್ಲಿ ಭಾಗವಹಿಸಿ ಬಡ್ತಿ ಪ್ರಕ್ರಿಯೆ ತಾತ್ಕಾಲಿಕವಾಗಿ ಮುಂದೂಡಿದರೆ ಅವರಿಗೆ ಮುಂದೆ ಯಾವತ್ತೂ ಈ ನಿಯಮದಡಿ ವೇತನ ಬಡ್ತಿ ನೀಡಲು ಅವಕಾಶವಿಲ್ಲ. ಆದರೆ, ಬಾಗಲಕೋಟೆ ತಾಲೂಕುವೊಂದರಲ್ಲೇ 83 ಜನ ಶಿಕ್ಷಕರಿಗೆ ಈ ರೀತಿ ನಿಯಮ ಮೀರಿ ವೇತನ ಬಡ್ತಿ ನೀಡಲಾಗಿದೆ. ಇದರಿಂದ ಈ ತಾಲೂಕುವೊಂದರಲ್ಲೇ ವಾರ್ಷಿಕ 8ರಿಂದ 10 ಲಕ್ಷ ಸರ್ಕಾರಕ್ಕೆ ಹೊರೆಯಾಗುತ್ತಿದೆ.
ಇದು ಸರ್ಕಾರಕ್ಕೆ ಮಾಡಿದ ವಂಚನೆ: ಶಿಕ್ಷಕರ ವಿಶೇಷ ವೇತನ ಬಡ್ತಿ ವಿಷಯದಲ್ಲಿ ಬಾಗಲಕೋಟೆ ಜಿಲ್ಲೆ ಅಷ್ಟೇ ಅಲ್ಲ ರಾಜ್ಯದ ಹಲವು ಜಿಲ್ಲೆಗಳಲ್ಲೂ ನಿರಂತರವಾಗಿ ನಡೆಯುತ್ತಿದೆ ಎನ್ನಲಾಗಿದೆ. ಇದರಿಂದ ಸರ್ಕಾರಕ್ಕೆ ವಾರ್ಷಿಕ 45ರಿಂದ 50 ಕೋಟಿ ವಂಚನೆಯಾಗುತ್ತಿದೆ. ಪ್ರಾಕ್ಸಿ ಕೌನ್ಸೆಲಿಂಗ್‌ನಲ್ಲಿ ಭಾಗವಹಿಸಿ ತಾತ್ಕಾಲಿಕ ಬಡ್ತಿ ನಿರಾಕರಿಸಿದವರಿಗೂ, ಬಡ್ತಿ ಪಡೆದ ಹುದ್ದೆಗೆ ಹೋಗಿ ಹಾಜರಾಗದವರಿಗೂ ವೇತನ ಬಡ್ತಿ ನೀಡಲಾಗಿದೆ. ಇಂತಹ ಪ್ರಕರಣ ಬಯಲಿಗೆ ತರುವಲ್ಲಿ ಬಾಗಲಕೋಟೆ ವಿದ್ಯಾಗಿರಿಯ ಬಿಟಿಡಿಎ ಆವರಣದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಮುಖ್ಯಾಧ್ಯಾಪಕ ಎಸ್.ಎಸ್. ಬೇವೂರ ಪ್ರಮುಖ ಪಾತ್ರ ವಹಿಸಿದ್ದಾರೆ.
ಸಮಗ್ರ ಮಾಹಿತಿ ಒಳಗೊಂಡ ದೂರನ್ನು ಡಿಡಿಪಿಐಗೆ ಸಲ್ಲಿಸಿದ್ದು, ಡಿಡಿಪಿಐ ಶ್ರೀಶೈಲ ಎಸ್. ಬಿರಾದಾರ ವಿಶೇಷ ಮುತುವರ್ಜಿ ವಹಿಸಿ ಈ ಪ್ರಕರಣ ಸಮಗ್ರವಾಗಿ ಹೊರ ತಂದಿದ್ದಾರೆ. ನಿಯಮ ಮೀರಿ ವೇತನ ಬಡ್ತಿ ಪಡೆದ ಬಾಗಲಕೋಟೆ ತಾಲೂಕಿನ 83 ಜನ ಶಿಕ್ಷಕರಿಂದ ಒಟ್ಟು ಸುಮಾರು 7 ಲಕ್ಷಕ್ಕೂ ಅಧಿಕ ಹಣ ಸರ್ಕಾರ ಮರಳಿ ಪಾವತಿಸಲು ಆದೇಶವಾಗಿದೆ. ಆದರೆ, ಅದು ಕಾರ್ಯಗತವಾಗಿಲ್ಲ.
ಶ್ರೀಶೈಲ ಕೆ. ಬಿರಾದಾರ