ಬೀದರ: ನಗರದ ಜಿಲ್ಲಾ ಸರ್ಕಾರಿ ನೌಕರರ ಸಮುದಾಯ ಭವನ ನವೀಕರಣದ ಮುಂದುವರಿದ ಕಾಮಗಾರಿಗೆ ಜಿಲ್ಲೆಯ ಸರ್ಕಾರಿ ನೌಕರರ ಒಂದು ದಿನದ ವೇತನ ಕೊಡಲು ಒಮ್ಮತದ ನಿರ್ಣಯ ಕೈಗೊಳ್ಳಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಹೇಳಿದರು.
ನೌಕರರ ಒಂದು ದಿನದ ವೇತನ ಪಡೆಯುವ ಸಂಬಂಧ ನೌಕರರ ಭವನದಲ್ಲಿ ನಡೆದ ಸಭೆಯಲ್ಲಿ ಭವನ ನವೀಕರಣದ ಮುನ್ನೋಟ ಬಿಡುಗಡೆ ಮಾಡಿ ಮಾತನಾಡಿದ ಅವರು, ಭವನ ನವೀಕರಣದ ಮುಂದುವರಿದ ಕಾಮಗಾರಿಗೆ 4 ಕೋಟಿ ರೂ. ವೆಚ್ಚವಾಗಲಿದೆ. ಈ ಪೈಕಿ ಸರ್ಕಾರದಿಂದ 1 ಕೋಟಿ ರೂ. ಪಡೆಯಲಾಗುವುದು. ನೌಕರರ ಒಂದು ದಿನದ ವೇತನದಿಂದ ಉಳಿದ 3 ಕೋಟಿ ರೂ. ಹೊಂದಿಸಲಾಗುವುದು ಎಂದರು.
ಮುಂದುವರಿದ ಕಾಮಗಾರಿಗಳಲ್ಲಿ ಜಿ ಪ್ಲಸ್ 3 ಕಟ್ಟಡ, 10 ಕೋಣೆಗಳು, ಎರಡು ಸಭಾಭವನ, ಹವಾ ನಿಯಂತ್ರಿತ ಮಂಟಪ, ಹೊರಾಂಗಣ ಮಂಟಪ, ಹವಾ ನಿಯಂತ್ರಿತ ಡೈನಿಂಗ್ ಹಾಲ್, ಅಡುಗೆ ಕೋಣೆ, ಗ್ರಂಥಾಲಯ, ನೌಕರರ ತರಬೇತಿ ಕೇಂದ್ರ, ಪಾರ್ಕಿಂಗ್ ಟೈಲ್ಸ್, ವಿದ್ಯುತ್ ದೀಪ, ಲಿಫ್ಟ್ ಅಳವಡಿಕೆ ಕಾಮಗಾರಿಗಳು ಸೇರಿವೆ ಎಂದರು.
ವಿವಿಧ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ರವೀಂದ್ರ ರೆಡ್ಡಿ, ಭೀಮರಾವ್ ಹಡಪದ, ಸಂಜು ಸೂರ್ಯವಂಶಿ, ಸಾರಿಕಾ ಗಂಗಾ, ಮಲ್ಲಿಕಾರ್ಜುನ, ಶಿವರಾಜ ಕಪಲಾಪುರೆ, ಶಿವಾನಂದ ಪಾಟೀಲ ಮಾತನಾಡಿದರು.
ಸಂಘದ ಗೌರವಾಧ್ಯಕ್ಷ ಬಸವರಾಜ ಜಕ್ಕಾ, ಉಪಾಧ್ಯಕ್ಷರಾದ ರಾಜಕುಮಾರ ಹೊಸದೊಡ್ಡೆ, ಡಾ| ವೈಶಾಲಿ, ಪ್ರಧಾನ ಕಾರ್ಯದರ್ಶಿ ರಾಜಶೇಖರ ಮಂಗಲಗಿ, ಸಹ ಕಾರ್ಯದರ್ಶಿ ಮನೋಹರ ಕಾಶಿ, ತಾಲೂಕು ಅಧ್ಯಕ್ಷರಾದ ರಾಜಪ್ಪ ಪಾಟೀಲ, ನಾಗಶೆಟ್ಟಿ ಡುಮಣಿ, ರಾಜಕುಮಾರ ಬೇಲೂರೆ, ಶಿವಕುಮಾರ ಘಾಟೆ, ಲಿಂಗಾನಂದ ಮಹಾಜನ, ಮಲ್ಲಿಕಾರ್ಜುನ ಮೇತ್ರೆ, ಭೀಮಾಶಂಕರ ಆದೆಪ್ಪ ಇದ್ದರು.