ಬೆಂಗಳೂರು: ಪಾಲಿಕೆ ವ್ಯಾಪ್ತಿಯ ರುದ್ರಭೂಮಿ ಹಾಗೂ ವಿದ್ಯುತ್ ಚಿತಾಗಾರಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಮಾಸಿಕ 17 ಸಾವಿರ ವೇತನ ನೀಡಲು ಬಿಬಿಎಂಪಿ ನಿರ್ಧರಿಸಿದ್ದು, ಈ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ತೀರ್ಮಾನಿಸಿದೆ. ಪಾಲಿಕೆಯ ವ್ಯಾಪ್ತಿಯ ರುದ್ರಭೂಮಿ ಹಾಗೂ ಚಿತಾಗಾರ ಕಾರ್ಮಿಕರನ್ನು ಕಾಯಂಗೊಳಿಸಬೇಕೆಂದು ಒತ್ತಾಯಿಸಿ ಕಳೆದ ಜನವರಿಯಲ್ಲಿ ಕಾರ್ಮಿಕರನ್ನು ಮಣ್ಣಿನಲ್ಲಿ ಹೂಳುವ ಮೂಲಕ ಪ್ರತಿಭಟನೆ ನಡೆಸಿದ್ದರು.
ಈ ವೇಳೆ ಮೇಯರ್ ಪದ್ಮಾವತಿ ಅವರು ಪರಿಶೀಲನೆ ನಡೆಸಿ ಅಗತ್ಯ ಕ್ರಮಕೈಗೊಳ್ಳುವ ಭರವಸೆ ನೀಡಿದ್ದರು. ಆ ಹಿನ್ನೆಲೆಯಲ್ಲಿ ಕ್ರಮಕ್ಕೆ ಮುಂದಾಗಿರುವ ಮೇಯರ್ ಜಿ.ಪದ್ಮಾವತಿ ಮತ್ತು ಆಯುಕ್ತ ಮಂಜುನಾಥಪ್ರಸಾದ್, ರುದ್ರಭೂಮಿ ಮತ್ತು ಚಿತಾಗಾರ ಕಾರ್ಮಿಕರಿಗೆ ಮಾಸಿಕ ಕನಿಷ್ಠ ವೇತನ ನೀಡಲು ನಿರ್ಧರಿಸಿದ್ದಾರೆ.
ಈ ಕುರಿತು ಶುಕ್ರವಾರ ಕಾರ್ಮಿಕರೊಂದಿಗೆ ಸಭೆ ನಡೆಸಿರುವ ಅವರು, ಕಾರ್ಮಿಕರನ್ನು ಕಾಯಂಗೊಳಿಸುವ ಅಧಿಕಾರ ಪಾಲಿಕೆಗೆ ಇಲ್ಲ. ಹೀಗಾಗಿ ಕಾರ್ಮಿಕರಿಗೆ ಮಾಸಿಕ ಕನಿಷ್ಠ ವೇತನ ರೂಪದಲ್ಲಿ 17 ಸಾವಿರ ರೂ. ನೀಡುವ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ಇದರೊಂದಿಗೆ ಕಾರ್ಮಿಕರ ಕುಟುಂಬಕ್ಕೆ ವಸತಿ, ಮಕ್ಕಳಿಗೆ ಎಸ್‌ಸಿಪಿ/ಟಿಎಸ್‌ಪಿ ಯೋಜನೆ ಅಡಿಯಲ್ಲಿ ಬಿಬಿಎಂಪಿಯಿಂದ ವಿದ್ಯಾಭ್ಯಾಸ ನೀಡುವುದಕ್ಕೂ ಸಭೆಯಲ್ಲಿ ನಿರ್ಧರಿಸಲಾಗಿದೆ. ಅದರ ಜತೆಗೆ ಆರೋಗ್ಯ ವಿಮೆ ಮಾಡಿಸುವುದಾಗಿಯೂ ಭರವಸೆ ನೀಡಲಾಗಿದೆ.
ಈ ಹಿಂದೆ ಬಿಬಿಎಂಪಿ ಅಧಿಕಾರಿಗಳು ನಡೆಸಿದ ಸರ್ವೇಯಂತೆ ಪಾಲಿಕೆಯಲ್ಲಿ 184 ಕಾರ್ಮಿಕರಿದ್ದಾರೆ ಎಂಬ ಮಾಹಿತಿಯಿದೆ. ಆದರೆ, ರುದ್ರಭೂಮಿ ಮತ್ತು ಚಿತಾಗಾರ ಕಾರ್ಮಿಕರ ಪ್ರಕಾರ 200ಕ್ಕೂ ಹೆಚ್ಚಿನ ಸಿಬ್ಬಂದಿ ಕೆಲಸ ಮಾಡುತ್ತಿರುವ ಬಗ್ಗೆ ಮಾಹಿತಿಯಿದ್ದು, ತಮ್ಮ ವ್ಯಾಪ್ತಿಯಲ್ಲಿ ಎಷ್ಟು ಸ್ಮಶಾನಗಳಿವೆ ಮತ್ತು ಎಷ್ಟು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ ಎಂಬ ಬಗ್ಗೆ ಸರ್ವೇ ನಡೆಸುವಂತೆ ವಲಯ ಜಂಟಿ ಆಯುಕ್ತರಿಗೆ ಆಯುಕ್ತ ಮಂಜುನಾಥಪ್ರಸಾದ್ ಸೂಚನೆ ನೀಡಿದ್ದಾರೆ.
ಇನ್ನು, 10 ದಿನದೊಳಗಾಗಿ ಸರ್ವೇ ನಡೆಸಿ ನಿಖರ ಮಾಹಿತಿ ನೀಡಬೇಕು. ಅಕ್ಟೋಬರ್‌ನಿಂದ ಸ್ಮಶಾನ ಕಾರ್ಮಿಕರಿಗೆ ಕನಿಷ್ಠ ವೇತನ ನೀಡಲು ಆರಂಭಿಸುವಂತೆಯೂ ಸೂಚನೆ ನೀಡಿದ್ದಾರೆ.