Advertisement
ಸಾಮಾನ್ಯವಾಗಿ 35 ಸಾವಿರ ಸಾರಿಗೆ ನೌಕರರು ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ)ದಲ್ಲಿ ಪ್ರತಿ ತಿಂಗಳ 1ನೇ ತಾರೀಕಿಗೆ ವೇತನ ಪಾವತಿ ಆಗುತ್ತಿತ್ತು. ಆದರೆ ಈ ಸಲ “ಶಕ್ತಿ’ ಯೋಜನೆ ಬಸ್‌ಗಳಲ್ಲಿ ಸಂಚರಿಸುವ ಎಲ್ಲ ಮಹಿಳೆಯರಿಗೆ ನಿಗಮವು ಉಚಿತ ಪ್ರಯಾಣ ಸೇವೆ ಕಲ್ಪಿಸುತ್ತಿದ್ದು, ಅದರ ಮೊತ್ತ ಒಟ್ಟಾರೆ ಆದಾಯದ ಅರ್ಧದಷ್ಟಾಗುತ್ತದೆ. ಇದನ್ನು ಸರಕಾರವೇ ಭರಿಸುವುದಾಗಿ ಹೇಳಿದೆ. ಆದರೆ ಇನ್ನೂ ಜೂನ್ ಮತ್ತು ಜುಲೈ ತಿಂಗಳ ಅನುದಾನವೂ ಬಂದಿಲ್ಲ. ಒಂದು ವೇಳೆ ಸಕಾಲದಲ್ಲಿ ಬಿಡುಗಡೆಯಾಗದಿದ್ದರೆ, ನೌಕರರ ವೇತನ ಪಾವತಿ ವಿಳಂಬವಾಗುವ ಸಾಧ್ಯತೆ ಇದೆ.
Related Articles
ಇದರ ಅರಿವು ಸರಕಾರಕ್ಕೂ ಇದೆ. ಹಾಗಾಗಿ ವಿಳಂಬಕ್ಕೆ ಅವಕಾಶ ಕೊಡುವುದಿಲ್ಲ. “ಶಕ್ತಿ’ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿದೆ. ಇದಕ್ಕೆ ಬಜೆಟ್‌ನಲ್ಲಿ ಈಗಾಗಲೇ 2,800 ಕೋಟಿ ರೂ. ಮೀಸಲಿಟ್ಟಿದ್ದು, ಅನುಮೋದನೆಯೂ ಸಿಕ್ಕಿದೆ. ಎರಡು ದಿನಗಳ ಹಿಂದೆಯಷ್ಟೇ ರಾಜ್ಯಪಾಲರ ಅಂಕಿತ ಮುದ್ರೆಬಿದ್ದಿದೆ. ಒಂದೆರಡು ದಿನಗಳಲ್ಲಿ ನಿಗಮದ ಖಾತೆಗೆ ಬಿಡುಗಡೆಯಾಗುವ ನಿರೀಕ್ಷೆ ಇದೆ ಎಂದು ಕೆಎಸ್‌ಆರ್‌ಟಿಸಿ ಹಿರಿಯ ಅಧಿಕಾರಿಯೊಬ್ಬರು ವಿಶ್ವಾಸ ವ್ಯಕ್ತಪಡಿಸುತ್ತಾರೆ.
ಈ ಸಂಬಂಧ ಈಗಾಗಲೇ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಹಣಕಾಸು ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ.
Advertisement
ತಿಂಗಳ ಕೊನೆಯ ವಾರದಲ್ಲಿ ಬಜೆಟ್‌ಗೆ ಅನುಮೋದನೆ ಸಿಕ್ಕಿದೆ. ಬೆನ್ನಲ್ಲೇ ಯೋಜನೆಗಳಿಗೆ ಹಣ ಬಿಡುಗಡೆ ಮಾಡುವ ಪ್ರಕ್ರಿಯೆ ಕೂಡ ಸರಕಾರದ ಮಟ್ಟದಲ್ಲಿ ತ್ವರಿತ ಗತಿಯಲ್ಲಿ ನಡೆದಿದೆ. ಸದ್ಯಕ್ಕೆ “ಶಕ್ತಿ’ ಯೋಜನೆ ಅಡಿ ಅನುದಾನ ಬಿಡುಗಡೆ ಆಗಿಲ್ಲ. ಆದರೆ ಶೀಘ್ರ ಬರಲಿದ್ದು, ಎಂದಿನಂತೆ ನೌಕರರಿಗೆ ವೇತನವೂ ಪಾವತಿ ಆಗಲಿದೆ.– ವಿ. ಅನ್ಶುಕುಮಾರ್, ವ್ಯವಸ್ಥಾಪಕ ನಿರ್ದೇಶಕರು, ಕೆಎಸ್‌ಆರ್‌ಟಿಸಿ. ಜುಲೈ 29ರ ಅಂತ್ಯಕ್ಕೆ
* 28.87 ಕೋಟಿ ಒಟ್ಟು 50 ದಿನಗಳಲ್ಲಿ ಸರಕಾರಿ ಬಸ್‌ಗಳಲ್ಲಿ ಪ್ರಯಾಣಿಸಿದ ಮಹಿಳೆಯರು
* 675 ಕೋಟಿ ರೂ. ಪ್ರಯಾಣಿಕರ ಟಿಕೆಟ್ ಮೊತ್ತ
* 255 ಕೋಟಿ ರೂ. ಕೆಎಸ್‌ಆರ್‌ಟಿಸಿಗೆ ಸರಕಾರದಿಂದ ಬರಬೇಕಾದ ಮೊತ್ತ
* 120.75 ಕೋಟಿ ರೂ. ಬಿಎಂಟಿಸಿಗೆ ಬರಬೇಕಾದ ಮೊತ್ತ
* 169 ಕೋಟಿ ರೂ. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ ಬರಬೇಕಾದ ಮೊತ್ತ
* 129.20 ಕೋ. ರೂ. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ ಬರಲಿರುವ ಅನುದಾನ ವಿಜಯಕುಮಾರ ಚಂದರಗಿ