ಕೊಲಂಬೊ: ಶ್ರೀಲಂಕಾ ಕ್ರಿಕೆಟ್‌ನಲ್ಲಿ ವೇತನ ವಿವಾದವೊಂದು ಹುಟ್ಟಿಕೊಂಡಿದೆ. ಉಳಿದ ದೇಶಗಳಿಗೆ ಹೋಲಿಸಿದರೆ ತಮಗೆ ನೀಡುವ ವೇತನ ಕಡಿಮೆಯಾಯಿತು ಎಂದು ಬಂಡೆದ್ದ ಕ್ರಿಕೆಟಿಗರು, ಮಂಡಳಿಯ ಒಪ್ಪಂದ ಪತ್ರಕ್ಕೆ ಸಹಿ ಹಾಕಲು ನಿರಾಕರಿಸಿದ್ದಾರೆ.
ಟೆಸ್ಟ್ ನಾಯಕ ದಿಮುತ್ ಕರುಣರತ್ನೆ ಸೇರಿದಂತೆ ಹಿರಿಯ ಕ್ರಿಕೆಟಿಗರಾದ ದಿನೇಶ್ ಚಂಡಿಮಾಲ್, ಏಂಜೆಲೊ ಮ್ಯಾಥ್ಯೂಸ್ ಮೊದಲಾದವರು ಒಡಂಬಡಿಕೆಗೆ ಸಹಿ ಹಾಕುವುದಿಲ್ಲ ಎಂದು ಪಟ್ಟುಹಿಡಿದಿದ್ದಾರೆ. ನಿಜಕ್ಕೂ ಇದೊಂದು ಆಘಾತಕಾರಿ ಹಾಗೂ ನಿರಾಶಾದಾಯಕ ಬೆಳವಣಿಗೆ ಎಂದು ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ:ಸೈಬರ್ ದಾಳಿ: ಏರ್ ಇಂಡಿಯಾ ಸರ್ವರ್ ನಿಂದ 45 ಲಕ್ಷ ಪ್ರಯಾಣಿಕರ ವೈಯಕ್ತಿಕ ಮಾಹಿತಿ ಸೋರಿಕೆ!
ಜೂನ್ 3 ಗಡುವು: ಇದು ಶೀಘ್ರದಲ್ಲಿ ಇತ್ಯರ್ಥವಾಗದೇ ಹೋದರೆ ಮುಂಬರುವ ಭಾರತ ವಿರುದ್ಧದ ಸರಣಿಗೆ ಅಡಚಣೆಯಾಗುವ ಸಾಧ್ಯತೆ ಇದೆ. ಇಲ್ಲವೇ ಶ್ರೀಲಂಕಾ ಕೂಡ ದ್ವಿತೀಯ ದರ್ಜೆಯ ತಂಡವನ್ನೇ ಕಣಕ್ಕೆ ಇಳಿಸಬೇಕಾಗುತ್ತದೆ. ಸಹಿ ಹಾಕಲು ಜೂನ್ 3 ಅಂತಿಮ ದಿನವಾಗಿದೆ ಎಂದು ಶ್ರೀಲಂಕಾ ಮಂಡಳಿ ಸೂಚಿಸಿದೆ.
ಲಂಕಾ- ಭಾರತ ನಡುವೆಜುಲೈ 13ರಿಂದ 27ರವರೆಗೆ ಈ ಸರಣಿ ನಡೆಯಲಿದೆ. ಈ ಅವಧಿಯಲ್ಲಿ ಟೀಂ ಇಂಡಿಯಾ ಲಂಕಾ ವಿರುದ್ಧ ಮೂರು ಏಕದಿನ ಪಂದ್ಯಗಳು ಮತ್ತು ಮೂರು ಟಿ20 ಪಂದ್ಯಗಳನ್ನಾಡಲಿದೆ.