ಬೆಂಗಳೂರು : ರಾಜ್ಯದಲ್ಲಿ ಕಾಣಿಸಿಕೊಂಡಿರುವ ಕೋವಿಡ್ ಎರಡನೇ ಅಲೆಯ ಬಿಸಿ ಕನ್ನಡ ಚಿತ್ರರಂಗಕ್ಕೆ ಮತ್ತೆ ತಟ್ಟಿದೆ. ಈಗಾಗಲೇ ಒಂದು ವರ್ಷಗಳ ಕಾಲ ವನವಾಸ ಅನುಭವಿಸಿರುವ ಚಂದನವನ ಇದೀಗ ಮತ್ತೊಂದು ಬಾರಿ ಸಂಕಷ್ಟಕ್ಕೆ ಸಿಲುಕಿದೆ.
ಕೋವಿಡ್ ಸೋಂಕಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಚಿತ್ರಮಂದಿರಗಳಲ್ಲಿ 50% ಭರ್ತಿ ಆದೇಶ ಕನ್ನಡದ ಸಿನಿಮಾಗಳಿಗೆ ಕಂಟಕವಾಗಿ ಪರಿಣಮಿಸಿದೆ. ಈ ನೂತನ ನೀತಿಯಿಂದ ಈಗಾಗಲೇ ಬಿಡುಗಡೆಯಾಗಿ ಅಮೋಘ ಪ್ರದರ್ಶನ ಕಾಣುತ್ತಿರುವ ‘ಯುವರತ್ನ’ ಸೇರಿದಂತೆ ಹಲವು ಸಿನಿಮಾಗಳಿಗೆ ಭಾರೀ ಹೊಡೆತ ನೀಡಿದೆ.
ಹೆಚ್ಚುತ್ತಿರುವ ಕೋವಿಡ್ ಪ್ರಕರಣ ಹಾಗೂ ಸರ್ಕಾರದ ನೂತನ ಮಾರ್ಗಸೂಚಿ ಪರಿಣಾಮ ಕನ್ನಡದ ಕೆಲವು ಸಿನಿಮಾಗಳ ಬಿಡುಗಡೆಗೆ ತಾತ್ಕಾಲಿಕ ಬ್ರೇಕ್ ಹಾಕುತ್ತಿವೆ. ಇವುಗಳ ಸಾಲಿಗೆ ಸಲಗ ಚಿತ್ರ ಸೇರಿಕೊಂಡಿದೆ.
ಹೌದು, ದುನಿಯಾ ವಿಜಯ್ ಮೊದಲ ಬಾರಿಗೆ ನಿರ್ದೇಶನ ಮಾಡಿ,ನಟಿಸಿರುವ ‘ಸಲಗ’ ಸಿನಿಮಾ ಇದೇ ಏಪ್ರಿಲ್ 14 ರಂದು ತೆರೆಗೆ ಬರಬೇಕಿತ್ತು. ಆದರೆ ಚಿತ್ರಮಂದಿರಗಳ ಮೇಲೆ ಹೇರಲಾಗಿರುವ ನಿರ್ಬಂಧದಿಂದಾಗಿ ಸಿನಿಮಾ ಬಿಡುಗಡೆಯನ್ನು ಮುಂದೂಡಿದೆ ಚಿತ್ರತಂಡ.
‘ಸಲಗ’ ಸಿನಿಮಾ ಬಿಡುಗಡೆಗೆ ಮುನ್ನಾ ಹೊಸಪೇಟೆಯಲ್ಲಿ ಅದ್ಧೂರಿಯಾಗಿ ಪ್ರೀ ರಿಲೀಸ್ ಕಾರ್ಯಕ್ರಮ ಆಯೋಜಿಸುವ ಯೋಜನೆಯನ್ನೂ ತಂಡ ಹಾಕಿಕೊಂಡಿತ್ತು, ಅದೂ ಸಹ ರದ್ದಾಗಿದೆ. ಸಿನಿಮಾವನ್ನು ಯಾವ ದಿನಾಂಕದಂದು ಬಿಡುಗಡೆ ಮಾಡಲಿದ್ದೇವೆ ಎಂಬುದನ್ನು ಚಿತ್ರತಂಡ ಇನ್ನೂ ಹೇಳಿಲ್ಲ.
ಇನ್ನು ‘ಸಲಗ’ ಸಿನಿಮಾ ನಂತರ ಸುದೀಪ್ ನಟನೆಯ ‘ಕೋಟಿಗೊಬ್ಬ 3’ ಆ ನಂತರ ಶಿವರಾಜ್ ಕುಮಾರ್ ನಟನೆಯ ‘ಭಜರಂಗಿ 2’ ಸಿನಿಮಾಗಳು ಸಹ ತೆರೆಗೆ ಬರಲು ಸಜ್ಜಾಗಿದ್ದವು. ಆದರೆ, ಸದ್ಯದ ಪರಿಸ್ಥಿತಿ ನೋಡಿದ್ರೆ ಈ ಸಿನಿಮಾಗಳ ಬಿಡುಗಡೆ ಕೂಡ ಮುಂದಕ್ಕೆ ಹೋಗಬಹುದು ಎನ್ನಲಾಗುತ್ತಿದೆ.