ನಮ್ಮ ಶಾಲೆಯಲ್ಲಿ ಪ್ರತೀ ವರ್ಷ ಶಾಲಾ ಮಟ್ಟದಲ್ಲದೆ, ದಸರಾ, ಗಣೇಶ ಹಬ್ಬದ ಪ್ರಯುಕ್ತ ಆಯೋಜಿಸುವ ಆಟಗಳಲ್ಲಿ ಆಡಿದ್ದೇ ಆಡಿದ್ದು. ಜೊತೆಗೆ ಆಗ ಶಾಲೆಯಲ್ಲಿ ಓದಲೇಬೇಕು ಎನ್ನುವ ಒತ್ತಡವೇನೂ ಹೆಚ್ಚಿರಲಿಲ್ಲ. ನಮ್ಮ ಪಿ.ಟಿ ಮೇಷ್ಟ್ರು ಕೂಡಾ ಬಹಳ ಮೃದು ಸ್ವಭಾವದವರು. ಶಾಲೆಯಲ್ಲಿ ನಮಗೆ ಸಿಗುತ್ತಿದ್ದ ಮರ್ಯಾದೆ, ಗೌರವಗಳು ಕೆಲವೊಮ್ಮೆ ನಾವು ಅಹಂಕಾರದ ಹಾದಿ ಹಿಡಿಯಲು ಕಾರಣವಾದವು!.
ಆವತ್ತೂಂದು ದಿನ ಜಿಲ್ಲಾ ಮಟ್ಟದ ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದೆವು. ಮಳೆಗಾಲ ಬೇರೆ. ಮಲೆನಾಡಿನ ಮಳೆಗಾಲದ ವೈಖರಿಯನ್ನು ಹೆಚ್ಚೇನು ವಿವರಿಸಬೇಕಿಲ್ಲ. ಮೈದಾನಕ್ಕೆ ಧಾವಿಸುತ್ತಿರುವಂತೆ ವರುಣನ ಆರ್ಭಟ ಆರಂಭವಾಗಿತ್ತು. ಜಿಲ್ಲಾ ಮಟ್ಟದ ಕ್ರೀಡೆಯಾದ ಕಾರಣ, ಎದುರಾಳಿ ಸ್ಪರ್ಧಾಳುಗಳು ತಯಾರಿ ನಡೆಸುತ್ತಿದ್ದರು. ನಮ್ಮ ಊರಿನ ಜನರಿಗೆ ನಾವೇ ಸ್ಟಾರ್‌ಗಳು!. ಧ್ವನಿವರ್ಧಕದಿಂದ ಆಟ ಆರಂಭವಾಗುವ ಸೂಚನೆ ಕೇಳಿಬಂತು.
ಮಳೆಯಿಂದ ಸೃಷ್ಟಿಯಾಗಿದ್ದ ಕೆಸರನ್ನು ಲೆಕ್ಕಿಸದೆ, ತಮ್ಮ ತಮ್ಮ ತಂಡದ ಪರವಾಗಿ ನಿಂತುಕೊಳ್ಳುತ್ತಿದ್ದರು. ಅಂಕಣಕ್ಕೆ ಇಳಿಯುವ ಮುನ್ನವೇ ಪಿ.ಟಿ ಮೇಷ್ಟ್ರು ಒಳ್ಳೆ ಸಲಹೆಗಳನ್ನಿತ್ತು ಕಳುಹಿಸಿದರು. ಪ್ರೇಕ್ಷಕರ ನಿರೀಕ್ಷೆಯನ್ನು ಮೀರಿಸುವಂತೆ ಆಡಿ ಫೈನಲ್ ತಲುಪಿದ್ದೆವು. ಎರಡು ಬಲಿಷ್ಠ ತಂಡಗಳ ಹಣಾಹಣಿಯನ್ನು ನೋಡಲು ನೆರೆದಿದ್ದ ಜನರು ಅಪಾರ. ಗೆಲುವು ನಮ್ಮ ದೇ ಎನ್ನುವ ಭರವಸೆಯಿತ್ತು.
ಆದರೆ, ವಿಧಿಯಾಟವೇನೋ? ಕೊನೆಯ 5 ನಿಮಿಷದ ಆಟದಲ್ಲಿ ಬಾಕ್ಸಿಂದ ಹೊರಬಂದ ನನ್ನ ಕಾಲಿನ ಮೂಳೆ ಮುರಿಯಿತು.ತಕ್ಷಣಕ್ಕೆ ಆಟದ ಫಲಿತಾಂಶ ಕುರಿತು ಯೋಚಿಸದೆ, ನಮ್ಮ ಪಿ.ಟಿ ಮೇಷ್ಟ್ರು ನನ್ನನ್ನು ಎತ್ತಿಕೊಂಡೇ ಆ್ಯಂಬುಲೆನ್ಸ್ ಹತ್ತಿದ್ದರು. ಕೆಲವರು ನನ್ನನ್ನು ಹೊಗಳಿ ದುಃಖ ವ್ಯಕ್ತಪಡಿಸಿದ್ದರೆ, ಇನ್ನು ಕೆಲವರು ಆಟವನ್ನು ಹಾಳು ಮಾಡಿದ ಹೊಣೆಯನ್ನು ನನ್ನ ತಲೆಗೆ ಕಟ್ಟಿದ್ದರು.
ಅದ್ಯಾವುದಕ್ಕೂ ಲೆಕ್ಕಿಸದೆ, ಆಟ ಬಿಟ್ಟು, ಅಲ್ಲಿದ್ದ ಪಿ.ಟಿ ಮೇಷ್ಟ್ರು ಒಬ್ಬರು, ರಾತ್ರಿ ತನಕ ಆಸ್ಪತ್ರೆಯಲ್ಲಿದ್ದರು. ಆಮೇಲೆ ಬೆಳಗ್ಗೆ ಚಿಕಿತ್ಸೆ ಮುಗಿಸಿ, ಮನೆಗೆ ತಲುಪಿಸಿದ್ದರು. ಆವತ್ತು ಪಿ.ಟಿ ಮೇಷ್ಟ್ರು ಅಲ್ಲಿ ಇಲ್ಲದೇ ಇದ್ದಿದ್ದರೆ ನನ್ನ ಕತೆ ಬೇರೆಯೇ ಆಗುತ್ತಿತ್ತು. ಇವತ್ತು ಎಲ್ಲಿದ್ದಾರೋ ಗೊತ್ತಿಲ್ಲ. ಆದರೆ, ಅವರ ಸಹಾಯವನ್ನು ಎಂದಿಗೂ ಮರೆಯಲಾರೆ. ಥ್ಯಾಂಕ್ಯೂ ಸಾರ್
* ರಕೀಬ್, ಕುದುರೆಗುಂಡಿ