Advertisement

“ಸಲಾಂ ಬಾಂಬೆ”…ರಾಷ್ಟ್ರಪ್ರಶಸ್ತಿ ವಿಜೇತ ನಟ ಈಗ ಬೆಂಗಳೂರಲ್ಲಿ ಆಟೋ ಚಾಲಕ

08:55 AM Sep 19, 2019 | Suhan S |

1988 ರ ಕಾಲಘಟ್ಟ. ಬಾಲಿವುಡ್ ನಲ್ಲಿ ಅಮಿತಾಭ್ ಬಚ್ಚನ್, ಸಂಜಯ್ ದತ್,ಅನಿಲ್ ಕಪೂರ್ ರಂತಹ ಸ್ಟಾರ್ ನಟರ ಚಿತ್ರಗಳು ಒಂದರ ಮೇಲೊಂದರಂತೆ ಯಶಸ್ಸುಗಳಿಸುತ್ತಿದ್ದ ಕಾಲಘಟ್ಟ. ಅನಿಲ್ ಕಪೂರ್ ಅಭಿನಯದ ‘ತೇಜಾಬ್’, ನಟ ಅಮೀರ್ ಖಾನ್ ಅಭಿನಯದ ‘ಕಯಾಮತ್ ಸೆ ಕಯಾಮತ್ ತಕ್’  ಹೀಗೆ ಸಾಲು ಸಾಲು ಹಿಟ್ ಚಿತ್ರಗಳನ್ನು ನೀಡಿ ಬಾಲಿವುಡ್ ಎವರ್ ಗ್ರೀನ್ ಕಾಲಘಟ್ಟದಲ್ಲಿ ಮೆರೆದ 80 ರ ದಶಕ ಅದು.

Advertisement

ಅದೇ ಸಮಯದಲ್ಲಿ  ನಿರ್ದೇಶಕಿ‌  ಮೀರಾ ನಾಯರ್ ‘ಸಲಾಂ ಬಾಂಬೆ’ ಎನ್ನುವ ಚಿತ್ರ ಇಡೀ ಬಾಂಬೆಯಲ್ಲಿ ಸಂಚಲನ ಸೃಷ್ಟಿಸುತ್ತದೆ. ನಾನಾ ಪಾಟೇಕರ್,ಇರ್ಫಾನ್ ಖಾನ್ ಜೊತೆಗೆ ತೆರೆಯ ಮೇಲೆ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡ 12 ವರ್ಷದ ಬಾಲಕ ಶಫೀಕ್ ಸೈಯದ್ ಎನ್ನುವ ಒಬ್ಬ ಸ್ಲಂ ಹುಡುಗ ತನ್ನ ನಟನೆಯಿಂದ ಬಾಲಿವುಡ್ ನಲ್ಲಿ ಗುರುತಿಸಿಕೊಂಡು ರಾಷ್ಟ್ರ ಪ್ರಶಸ್ತಿಗಳಿಸಿಕೊಳ್ಳುತ್ತಾನೆ.

1976 ರ ಜನವರಿ 1 ರಂದು ಹುಟ್ಟಿದ ಶಫೀಕ್ ಆಟ ಅಂದರೆ ಸ್ಲಂಗಳಲ್ಲಿ ತನ್ನ ಸ್ನೇಹಿತರೊಟ್ಟಿಗೆ ಸುತ್ತುವುದು ಅಷ್ಟೇ ಆಗಿತ್ತು. ಆಗಾಗ ಸಿನಿಮಾಗಳನ್ನು ನೋಡುತ್ತಿದ್ದ ಶಫೀಕ್ ಒಂದು ದಿನ ತನ್ನ ಮನೆಯ ಪರಿಸ್ಥಿತಿ, ಸ್ಲಂ,ಎಲ್ಲವನ್ನೂ ನೋಡಿ ಬೇಸರ ಬಂದು ಯಾರಿಗೂ ಹೇಳದೇ ಮುಂಬಯಿಗೆ ಓಡಿ ಹೋಗುವ ಯೋಚನೆ ಬರುತ್ತದೆ. ಶಫೀಕ್ ತನ್ನ ಕೆಲ ಸ್ನೇಹಿತರ ಜೊತೆ ಮುಂಬಯಿ ಹೇಗಿರುತ್ತದೆ ಅನ್ನುವ ಕುತೂಹಲದಿಂದ ರೈಲಿನಲ್ಲಿ ಪ್ರಯಾಣ ಬೆಳೆಸುತ್ತಾರೆ. ಟಿಕೆಟ್ ಕೊಳ್ಳಲು ಹಣ ಇಲ್ಲ. ಯಾರಾದ್ರೂ ಬಂದರೆ ಶೌಚಾಲಯದ ಕೊಠಡಿಯಲ್ಲಿ ನಿಂತು, ಟಿಕೆಟ್ ಪಡೆಯಲು ಬರುವ ಕಲೆಕ್ಟರ್ ನಿಂದ ಬಚಾವ್ ಆಗುತ್ತಾ ಹೇಗೂ ಅಪರಿಚಿತ ಬಾಂಬೆಯನ್ನು ಪರಿಚಯ ಮಾಡಿಕೊಳ್ಳಲು ಹೊರಡುತ್ತಾರೆ. ಮನೆ ಬಿಟ್ಟು ಬಂದಾಗ ಶಫೀಕ್ 12 ವರ್ಷದ ಹುಡುಗ. ಹೊಸ ನಗರದ ದಾರಿ, ವ್ಯಕ್ತಿಗಳ ಗುರುತು ಯಾರು ಇಲ್ಲದೆ ಇದ್ದಾಗ, ಹೊಟ್ಟೆ ಹಸಿವಿನಲ್ಲೇ ಬೀದಿ ಬದಿಯಲ್ಲಿ ಇರುವ ಪಾದಚಾರಿಗಳು ಹೋಗುವ ಚರ್ಚ್ ಗೇಟ್  ರಸ್ತೆ ವೊಂದರ ಬಳಿ ಮಲಗಿಕೊಂಡು ರಾತ್ರಿ ಕಳೆಯುತ್ತಾರೆ.

ಅದೃಷ್ಟ ಬದಲಾಯಿಸಿದ ಅಪರಿಚಿತೆ :

ಶಫೀಕ್ ರಸ್ತೆ ಬದಿಯಲ್ಲಿ ಇದ್ದಾಗ ಅಲ್ಲೊಂದು ದಿನ ಒಬ್ಬಳು‌ ಮಹಿಳೆ ಆತನನ್ನು ಕರೆದು ಮಾತನಾಡಿಸುತ್ತಾರೆ. ತಾನು ಶೀಫ್ರದಲ್ಲೇ ನಟನ‌ ಕಾರ್ಯಾಗಾರವನ್ನು ನಡೆಸಲಿದ್ದೇನೆ. ಅದಕ್ಕಾಗಿ ನಿಮ್ಮಂತಹ ಬೀದಿ ಬದಿಯ ಮಕ್ಕಳು ಬೇಕಾಗಿದ್ದಾರೆ. ನಾನು ನಿನಗೆ ದಿನಕ್ಕೆ 20 ರೂಪಾಯಿ ಹಾಗೂ ಊಟ ತಿಂಡಿಯನ್ನು ಕೊಡುತ್ತೇನೆ ಅನ್ನುತ್ತಾರೆ. ಇದೇ ವೇಳೆಯಲ್ಲಿ ಶಫೀಕ್ ಸ್ನೇಹಿತ ಹೆದರಿಕೊಂಡು ಓಡಿ ಹೋಗುತ್ತಾನೆ. ಶಫೀಕ್ ದಿನಕ್ಕೆ 20 ರೂಪಾಯಿ ಜೊತೆಗೆ ಊಟ ತಿಂಡಿಯೂ ದೊರೆಯುವುದರಿಂದ ಆಯಿತು ಅನ್ನುತ್ತಾರೆ. ಪ್ರತಿದಿನ ಕಾರ್ಯಗಾರಕ್ಕೆ ಬರಬೇಕೆಂದು ಹೇಳಿದ ಆ ಮಹಿಳೆ ಶಫೀಕ್ ಬದುಕು ಬದಲಾಯಿಸಿದ ಮೊದಲ ವ್ಯಕ್ತಿ.

Advertisement

ಶಫೀಕ್ ನಂತೆ ಬೀದಿ ಬದಿಯ ಹತ್ತಾರು ಹುಡುಗರು ನಟನ ಕಾರ್ಯಗಾರಕ್ಕೆ ಬಂದಿರುತ್ತಾರೆ. ‌ಮೀರ ನಾಯರ್‌ ತನ್ನ ಮೊದಲ ಚಲನಚಿತ್ರವನ್ನು  ಬೀದಿ ಬದಿ ಹುಡುಗರ ಜೀವನ ಕಥೆಯನ್ನು ಇಟ್ಟುಕೊಂಡು ಮಾಡಲು ಹೊರಟಾಗ ನಟನೆಯ ತರಬೇತಿಯನ್ನು ಪಡೆದು ಒಂದು ತಿಂಗಳು ಅಷ್ಟನೇ ಕಳೆದ ಶಫೀಕ್ ಅವರನ್ನು ತನ್ನ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಆಯ್ಕೆ ಮಾಡಿಕೊಳ್ಳುತ್ತಾರೆ. 52 ದಿನಗಳು ನಾವು ಚಿತ್ರದ ಚಿತ್ರೀಕರಣ ಮಾಡುತ್ತೇವೆ ಜತಗೆ 15 ಸಾವಿರ ರೂಪಾಯಿಯನ್ನು ಕೊಡುತ್ತೇವೆ ಎಂದಾಗ ಶಫೀಕ್ ಸೈಯದ್ ಎನ್ನುವ 12 ರ ಹುಡುಗನಿಗೆ ಅಚ್ಚರಿಯ ಜೊತೆ ಆನಂದವೂ ಆಯಿತು. ಶಫೀಕ್ ಒಪ್ಪುತ್ತಾನೆ. ಚಿತ್ರೀಕರಣ ಪ್ರಾರಂಭವಾಗುತ್ತದೆ.

ಸಲಾಂ ಬಾಂಬೆಯಲ್ಲಿ ಚಿಪ್ರೌ ಆದ ಶಫೀಕ್ :

1988 ರಲ್ಲಿ ಮೀರಾ ನಾಯರ್ ಸಲಾಂ ಬಾಂಬೆ ಅನ್ನುವ ಚಿತ್ರ ನಿರ್ಮಿಸುತ್ತಾರೆ. ಬಾಲಿವುಡ್ ದಿಗ್ಗಜರಾದ ನಾನಾ ಪಾಟೇಕರ್,  ಬಾಲಿವುಡ್ ನ  ಅದ್ಭುತ ‌ನಟ ಇರ್ಫಾನ್ ಖಾನ್‌ ಅವರು ಮೊದಲು ನಟಿಸಿದ ಚಿತ್ರ ಸಲಾಂ ಬಾಂಬೆ.

ಬೀದಿ ಬದಿಯ ಹುಡುಗ ಕೃಷ್ಣ  ತನ್ನ ಅಣ್ಣನ ಬೈಕ್  ಅನ್ನು ಹಾಳು ಮಾಡಿದ ಕಾರಣಕ್ಕೆ ಆತನ‌ ತಾಯಿ ಅವನನ್ನು ಮೋಟಾರು ಬೈಕಿನ ರಿಪೇರಿಗಾಗಿ ಹಣ ತರಲು ಮನೆಯ ಹೊರಗೆ ಹಾಕುತ್ತಾಳೆ. 11 ವರ್ಷದ ಪುಟ್ಟ ಹುಡುಗ ಬಾಂಬೆಯ ರೈಲ್ವೆ ಸ್ಟೇಷನ್ ಹಾಗೂ  ವೇಶ್ಯೆರು ಇರುವ ರೆಡ್ ಲೈಟ್ ಪ್ರದೇಶಗಳಲ್ಲಿ ವಡಪಾವ್ ಹಾಗೂ ಚಹಾ ಮಾರುವ ಕಾಯಕವನ್ನು ಮಾಡುತ್ತಾನೆ. ಹೀಗೆಯೇ ಸಾಗುವ ಕಥೆ ಮುಂದೆ ಮಾದಕ ದ್ರವ್ಯ,ದಂಧೆ ಎಲ್ಲದರ ಕರಾಳ ಮುಖವನ್ನು ಒಬ್ಬ ಹುಡುಗನ ‌ಮೂಲಕ ತೆರೆದುಕೊಳ್ಳುತ್ತದೆ. ಸಲಾಂ ಬಾಂಬೆ ಚಿತ್ರ ಆ ವರ್ಷದ‌ ಬಾಲಿವುಡ್ ಚಿತ್ರಗಳಲ್ಲಿ ಗಮನಾರ್ಹವಾದ ಚಿತ್ರವಾಗುತ್ತದೆ. ಶಫೀಕ್ ರ ಚಿಪ್ರೌ ಪಾತ್ರವನ್ನು ಬಾಲಿವುಡ್ ಕೊಂಡಾಡುತ್ತದೆ.

 

ಮನೆಯಿಂದ ಓಡಿದಾತ ರಾಷ್ಟ್ರ ಪ್ರಶಸ್ತಿ ಪಡೆದ :

ಸಲಾಂ ಬಾಂಬೆಯಲ್ಲಿ ಬಾಲ ನಟನಾಗಿ ಶಫೀಕ್ ಅಭಿನಯ ಎಲ್ಲಿಯವರೆಗೆ ಪ್ರಸಿದ್ಧಿಗಳಿಸುತ್ತದೆ ಅಂದರೆ,1989 ರಲ್ಲಿ 36 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಅತ್ಯುತ್ತಮ ಬಾಲನಟನೆಂಬ ಪ್ರಶಸ್ತಿ ಕಿರೀಟವನ್ನು ಶಫೀಕ್ ಪಡೆದುಕೊಳ್ಳುತ್ತಾರೆ. ರಾಷ್ಟಪತಿಯಿಂದ ಚಿನ್ನದ ಪದಕವನ್ನು ಕೊರಳಿಗೆ ಹಾಕಿಕೊಂಡಾಗ ಶಫೀಕ್ 12 ರ ಬಾಲಕನಷ್ಟೆ.

1993 ರಲ್ಲಿ ‘ಪತಾಂಗ್ ‘ ಚಿತ್ರದ ಶಫೀಕ್ ಮತ್ತೆ ಕಾಣಿಸಿಕೊಳ್ಳುತ್ತಾರೆ. ಚಿತ್ರ ಒಂದಿಷ್ಟು ಹೆಸರುಗಳಿಸುತ್ತದೆ. ಜೊತೆಗೆ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ಪಡೆದುಕೊಳ್ಳುತ್ತದೆ.‌ಅಷ್ಟೇ ಅಲ್ಲಿಂದ ಶಫೀಕ್ ನಟನ ಕಲೆಗೆ ಯಾವ ಅವಕಾಶದ ಬಾಗಿಲು ತೆರೆದುಕೊಳ್ಳಲ್ಲ‌ ಅನ್ನುವುದು ದುರಂತ.

 

ಸೋಲಿನ ಮೇಲೆ ಬರೆ :

ಶಫೀಕ್  ಸೈಯದ್ 1994 ರ ವೇಳೆಯಲ್ಲಿ ಅವಕಾಶಗಳು ಇಲ್ಲದೆ ಬೆಂಗಳೂರಿಗೆ ಬಂದು ಆಟೋ ರಿಕ್ಷಾ ಓಡಿಸಲು ಆರಂಭಿಸುತ್ತಾರೆ. ತಾನೊಬ್ಬ ರಾಷ್ಟ್ರ ಪ್ರಶಸ್ತಿ ಗೆದ್ದ ನಟನೆಂಬ ಹೆಮ್ಮೆ ಜೊತೆಗೆ ಅವಕಾಶ ಇಲ್ಲ‌ ಅನ್ನೋ ಕೂಗು ಎರಡೂ ಶಫೀಕ್ ಅವರನ್ನು ಚಿಂತೆಗೀಡು ಮಾಡುತ್ತದೆ. ಇಂಥ ಪರಿಸ್ಥಿತಿಯಲ್ಲಿ ಶಫೀಕ್ ಅವರ ಜೀವನದಲ್ಲಿ ಕರಾಳ ಘಟನೆಯೊಂದು ನಡೆಯುತ್ತದೆ.

1999 ರಲ್ಲಿ ಬೆಂಗಳೂರಿನ‌ ಯಲಚನಹಳ್ಳಿಯಲ್ಲಿ ಶಫೀಕ್ ಅವರ ಆಟೋ  ಮಧ್ಯ ವಯಸ್ಕ ಮಹಿಳೆಯೊಬ್ಬರಿಗೆ ಡಿಕ್ಕಿ ಹೊಡೆದು ಆಕೆ ಮೃತ‌ ಪಡುತ್ತಾಳೆ. ‌ಈ ಪ್ರಕರಣದಲ್ಲಿ ಶಫೀಕ್ ಅವರಿಗೆ ಮೂರು ದಿನ‌ ಜೈಲು ಶಿಕ್ಷೆ ಆಗುತ್ತದೆ. ಸಿಹಿ ತಿಂದ ನಾಲಗೆ ಹೆಚ್ಚು ಕಾಲ ಸಿಹಿ ಆಗಿಯೇ ಇರದು, ಅನ್ನುವ ಹಾಗೆ ಶಫೀಕ್ ಜೀವನವೂ ಹೀಗೆಯೇ ಆಯಿತು. ಸೋಲು ಬಂತು, ಕುಗ್ಗಿಸಿ ಹೋಯಿತು. ಏನೇ ಆದರೂ ಶಫೀಕ್ ಮತ್ತೆ ಬೆಳ್ಳಿ ಪರದೆಯಲ್ಲಿ ಕಾಣಿಸಿಕೊಳ್ಳಲೇ ಇಲ್ಲ. ಇವೆಲ್ಲದರ ಮಧ್ಯ ಜೀವನದಲ್ಲಿ ಜಿಗುಪ್ಸೆ ಹುಟ್ಟಿ ಶಫೀಕ್  ಮೂರು ಬಾರಿ ಸಾಯುವ ನಿರ್ಧಾರವನ್ನು ಮಾಡಿರುತ್ತಾರೆ.

ಬದುಕು ಕಲಿಸಿದ ಪಾಠ : ಶಫೀಕ್ ಸಲಾಂ ಬಾಂಬೆ ಚಿಪ್ರೌ ಆಗಿ ಮತ್ತೆ ತೆರೆಯ ಮೇಲೆ ಮಿಂಚಲೇ ಇಲ್ಲ. ಹೊಟ್ಟೆ ತುಂಬಿಸಲು ಶಫೀಕ್ ದಿನಕ್ಕೆ 150 ರೂಪಾಯಿಗಳನ್ನು ದುಡಿದು ಆಟೊ ಓಡಿಸುವ ಕಾಯಕವನ್ನು ಮಾಡುತ್ತಾರೆ. 2012 ರ ಹೊತ್ತಿನಲ್ಲಿ ಕನ್ನಡ ಧಾರವಾಹಿಗಳಲ್ಲಿ ಲೈಟ್ ಬಾಯ್ ಆಗಿ 200-300 ರೂಪಾಯಿಯನ್ನು ದುಡಿಯುತ್ತಾರೆ. ಅದೃಷ್ಟ ಕೊಟ್ಟ ಬದುಕು ಶಫೀಕ್ ನಿಂದ ಎಲ್ಲವನ್ನೂ ಕಿತ್ತುಕೊಂಡು ಬದುಕು ಕಾಣಿಸುವ ನಾನಾ ಮಾರ್ಗದಲ್ಲಿ ಒಂಟಿ ಪಯಣಿಗನಾಗಿ ನಡೆಯುವಂತೆ ಮಾಡುತ್ತದೆ.

ಏಳು ಬೀಳಿನ ನಡುವೆ ಸಾಗುತ್ತಿದೆ ಜೀವನ : ಶಫೀಕ್ ನಾಲ್ಕು ಮಕ್ಕಳ ತಂದೆ. ತನ್ನ ಮಕ್ಕಳನ್ನು ಒಳ್ಳೆಯ ವಿದ್ಯಾವಂತರನ್ನಾಗಿ ಮಾಡುವ ಕನಸು ಪ್ರತಿ ತಂದೆಯಂತೆ ಶಫೀಕ್ ಅವರಿಗೂ ಇದೆ. ಅದಕ್ಕಾಗಿ ಒಳ್ಳೆ ವಿದ್ಯೆಯನ್ನು ಮಕ್ಕಳಿಗೆ ನೀಡುತ್ತಿದ್ದಾರೆ.

ಎಲ್ಲಾ ಕಡೆ ತನ್ನನ್ನು ಸಲಾಂ ಬಾಂಬೆಯ ಹುಡುಗನೆಂದು ಗುರುತಿಸದೆ ಇದ್ರು ತಾನು ಚಲಾಯಿಸುವ ಆಟೋದಲ್ಲಿ ಶಫೀಕ್ ಇಂದಿಗೂ ತಾನು ನಟಿಸಿದ ಚಿತ್ರದ ಪೋಸ್ಟರ್ ಅನ್ನು ಹಾಕಿಕೊಂಡಿದ್ದಾರೆ.

ಶಫೀಕ್ ಅವರು 180 ಪುಟದ ಸ್ಕ್ರಿಪ್ಟ್ ಅನ್ನು ಬರೆದ್ದಿಟ್ಟು ಕೊಂಡಿದ್ದಾರೆ. ಅದಕ್ಕೆ  “ ಸಲಾಂ ಬಾಂಬೆಯ ನಂತರ” ಎಂದು ಟೈಟಲ್ ಕೊಟ್ಟಿದ್ದಾರೆ. ಅದನ್ನು ಯಾರಾದ್ರೂ ಓದಿ ನೋಡಿ ಚಿತ್ರ ನಿರ್ಮಿಸಿದ್ರೆ ಅದನ್ನು ಕೊಡುತ್ತೇನೆ ಎನ್ನುತ್ತಾರೆ ಶಫೀಕ್.

ಅಂದಹಾಗೆ ಸಲಾಂ ಬಾಂಬೆ 2013 ರಲ್ಲಿ ಮರು ಬಿಡುಗಡೆ ಆಗಿತ್ತು. ಎಷ್ಟು ತಡವಾಗಿ ಮರು ಬಿಡುಗಡೆ ಆಯಿತೋ ಅಷ್ಟೇ ಬೇಗ ಥಿಯೇಟರ್ ನಿಂದ ಚಿತ್ರ ಕಣ್ಮರೆ ಆಗುತ್ತದೆ.

 

-ಸುಹಾನ್ ಶೇಕ್

Advertisement

Udayavani is now on Telegram. Click here to join our channel and stay updated with the latest news.

Next