Advertisement

ಸಖೀ ಒನ್‌ ಸ್ಟಾಪ್‌ ಸೆಂಟರ್‌ನ ಪ್ರಯತ್ನಕ್ಕೆ ಫ‌ಲ

09:58 AM Sep 04, 2022 | Team Udayavani |

ಉಡುಪಿ : ಪತಿಯ ಮರಣದ ದಿನವೇ ಪತ್ನಿ ಹಾಗೂ ಮಗುವನ್ನು ತಿರಸ್ಕರಿಸಿದ ಗಂಡನ ಕುಟುಂಬದ ಮನವೊಲಿಸುವಲ್ಲಿ ಉಡುಪಿಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಸಖೀ ಸೆಂಟರ್‌ನ ಸಿಬಂದಿ ಯಶಸ್ವಿಯಾಗಿದ್ದಾರೆ.

Advertisement

ಸಾವನಪ್ಪಿರುವ ಪತಿ ಅಯ್ಯಪ್ಪ ಅವರ ಮನೆಮಂದಿ ಶುಕ್ರವಾರ ಉಡುಪಿಗೆ ಬಂದು ಕಾನೂನು ಪ್ರಕ್ರಿಯೆ ನಡೆಸಿ ಸಂತ್ರಸ್ತೆ ಗೀತಾ ಹಾಗೂ ಆಕೆಯ 1 ತಿಂಗಳ ಮಗುವನ್ನು ಕರೆದೊಯ್ದಿದ್ದಾರೆ.

ಏನಿದು ಪ್ರಕರಣ?
ಉಡುಪಿಯಲ್ಲಿ ಹಲವಾರು ವರ್ಷಗಳಿಂದ ಮೆಕ್ಯಾನಿಕ್‌ ಆಗಿ ಕೆಲಸ ಮಾಡುತ್ತಿದ್ದ ಬಾದಾಮಿಯ ಅಯ್ಯಪ್ಪ (28) ಆ. 25ರಂದು ಹೃದಯಾಘಾತದಿಂದ ಮೃತಪಟ್ಟಿದ್ದರು. ಪ್ರೇಮ ವಿವಾಹದ ನೆಪವೊಡ್ಡಿ ಅವರ 20 ದಿನಗಳ ಮಗು ಹಾಗೂ ಬಾಣಂತಿ ಪತ್ನಿಯನ್ನು ಗಂಡನ ಕುಟುಂಬ ತಿರಸ್ಕರಿಸಿತ್ತು. ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರು ಅಯ್ಯಪ್ಪ ಅವರ ಪತ್ನಿ ಗೀತಾ ಹಾಗೂ 20 ದಿನಗಳ ಮಗುವನ್ನು ಉಡುಪಿಯ ಸಖೀ ಒನ್‌ ಸ್ಟಾಪ್‌ ಸೆಂಟರ್‌ಗೆ ದಾಖಲಿಸಿ, ಸಂತ್ರಸ್ತೆಗೆ ನ್ಯಾಯ ದೊರಕಿಸುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ಮನವಿ ಮಾಡಿದ್ದರು.

ಫ‌ಲಿಸಿದ ಸಂಧಾನ
ಪತ್ನಿ ಗೀತಾ ಹಾಗೂ ಆಕೆಯ ಮಗುವನ್ನು ಬಿಟ್ಟು, ಪತಿ ಮನೆಯವರ ಕೋರಿಕೆಯಂತೆ ಅಯ್ಯಪ್ಪ ಅವರ ಮೃತ ದೇಹವನ್ನು ಅವರ ಹುಟ್ಟೂರು ಬಾದಾಮಿಗೆ ಕಳುಹಿಸಲಾಗಿತ್ತು. ಇತ್ತ ಅಗಲಿದ ಗಂಡನ ಅಂತ್ಯಕ್ರಿಯೆಗೂ ಹೋಗಲಾಗದೆ ಅತ್ತ ತವರು ಮನೆ ಹಾಗೂ ಗಂಡನ ಕುಟುಂಬದಿಂದ ತಿರಸ್ಕರಿಸಲ್ಪಟ್ಟ ಗೀತಾ ಅಘಾತ ಸ್ಥಿತಿಯಲ್ಲಿದ್ದರು. ಹೀಗಾಗಿ ಅವರಿಗೆ ಪ್ರೀತಿಯ ಸಾಂತ್ವನ ಹಾಗೂ ಆರೈಕೆಯ ಆವಶ್ಯಕತೆಯಿತ್ತು. ಇದನ್ನು ಗಮನಿಸಿದ ಸಖೀ ಒನ್‌ ಸ್ಟಾಪ್‌ ಸೆಂಟರ್‌ನವರು ಗೀತಾ ಅವರನ್ನು ಚೆನ್ನಾಗಿ ನೋಡಿಕೊಂಡು ಧೈರ್ಯ ತುಂಬಿದರು. ತವರು ಮನೆಯವರ ಸ್ಪಂದನೆ ಇಲ್ಲದಿರುವುದರಿಂದ ಗಂಡನ ಕಡೆಯವರೊಂದಿಗೆ ನಿರಂತರ ಮಾತುಕತೆ ನಡೆಸಿ ಕೊನೆಗೂ ಅವರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಶುಕ್ರವಾರ ಉಡುಪಿ ಸಖೀ ಸ್ಟಾಪ್‌ ಸೆಂಟರ್‌ಗೆ ತಮ್ಮ ಊರಿನ ಮುಖಂಡರ ಜತೆಗೆ ಆಗಮಿಸಿದ ಅಯ್ಯಪ್ಪನ ಮನೆ ಮಂದಿ ಗೀತಾ ಹಾಗೂ ಮಗುವನ್ನು ಸ್ವೀಕರಿಸಲು
ಒಪ್ಪಿದ್ದಾರೆ. ಪ್ರೀತಿಯಿಂದ ನೋಡಿಕೊಳ್ಳುವುದಾ ಗಿಯೂ ಆಕೆ, ಮಗುವಿನ ಜವಾಬ್ದಾರಿಯನ್ನು ವಹಿಸಿ ಕೊಳ್ಳುವ ಬಗ್ಗೆ ಭರವಸೆಯನ್ನೂ ನೀಡಿದ್ದಾರೆ. ಗೀತಾ ಇನ್ನೂ ಚಿಕ್ಕ ವಯಸ್ಸಿನವಳಾಗಿರುವುದರಿಂದ ಆಕೆ ಮರು ಮದುವೆಯಾಗಲು ಇಚ್ಛಿಸಿದಲ್ಲಿ ಅದಕ್ಕೂ ಪ್ರೋತ್ಸಾಹ ನೀಡುವುದಾಗಿ ತಿಳಿಸಿದ್ದಾರೆ. ಉಡುಪಿ ಮಹಿಳಾ ಠಾಣೆಯ ಸಿಬಂದಿಯ ಸಮಕ್ಷಮದಲ್ಲಿ ಕಾನೂನು ಪ್ರಕ್ರಿಯೆ ನಡೆಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next