Advertisement

ನಾಳೆಯಿಂದ ಜಿಲ್ಲೆಯಲ್ಲಿ “ಸಖೀ’ಕೇಂದ್ರ ಆರಂಭ

05:09 PM Nov 30, 2019 | Suhan S |

ತುಮಕೂರು: ಸರ್ಕಾರ ಏನೇ ಬಿಗಿಯಾಗಿರುವ ಕಾನೂನುಗಳನ್ನು ಜಾರಿಗೆ ತರುತ್ತಿದ್ದರೂ, ಮಹಿಳೆಯ ಮತ್ತು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯಪ್ರಕರಣಗಳು ಹೆಚ್ಚುತ್ತಲೇ ಇವೆ.

Advertisement

ಮಹಿಳೆ ಮತ್ತು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ, ಕೌಟುಂಬಿಕ ದೌರ್ಜನ್ಯ, ಅತ್ಯಾಚಾರಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವುದು ಸರ್ವೆ ಸಾಮಾನ್ಯವಾಗಿದೆ. ಈ ದೌರ್ಜನ್ಯ ಪ್ರಕರಣಗಳಲ್ಲಿ ತೊಂದರೆ ಗೊಳಗಾದ ಮಹಿಳೆಯರು ಮತ್ತು ಮಕ್ಕಳಿಗೆ ರಕ್ಷಣೆ ನೀಡಲು ರಾಜ್ಯ ಸರ್ಕಾರ ಗೆಳತಿ ಯೋಜನೆಯನ್ನು ಈವರೆಗೆ ಅನುಷ್ಠಾನಕ್ಕೆ ತಂದಿತ್ತು, ಈಗ ಈ ಯೋಜನೆಯನ್ನು ಕೇಂದ್ರಸರ್ಕಾರ ವಿಸ್ತಾರಗೊಳಿಸಿ ಸಖೀ ಯೋಜನೆಯನ್ನು ಅನುಷ್ಠಾನಗೊಳಿಸಲು ನ.16 ರಂದು ಆದೇಶ ಹೊರಡಿಸಿದೆ.

ಈ ಆದೇಶ ಬರುತ್ತಲೇ ತುಮಕೂರು ಜಿಲ್ಲೆಯಲ್ಲಿ ಸಖೀ ಕೆಂದ್ರ ಆರಂಭಿಸಲು ಜಿಲ್ಲಾಧಿಕಾರಿ ಡಾ.ಕೆ ರಾಕೇಶ್‌ಕುಮಾರ್‌ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಮಹಿಳೆ ಮತ್ತು ಮಕ್ಕಳ ಮೇಲೆ ದೌರ್ಜನ್ಯಗಳಲ್ಲಿ ನೊಂದವರಿಗೆ ಸೂಕ್ತ ರಕ್ಷಣೆ ನೀಡಲು ಸಖೀ ಕೇಂದ್ರ ಆರಂಭಿಸಲು ಸಿದ್ಧತೆ ನಡೆಸಿ ಡಿ.1ರಂದು ಈ ಕೇಂದ್ರವನ್ನು ಆರಂಭಿಸಲು ತಯಾರಿ ನಡೆದಿದೆ.

ಸಖೀ ಕೇಂದ್ರ ಎಲ್ಲಿ ಸ್ಥಾಪನೆ: ತುಮಕೂರಿನ ಜಿಲ್ಲಾಸ್ಪತ್ರೆಯ ಮೊದಲ ಮಹಡಿಯಲ್ಲಿರುವ ಗೆಳತಿ ಕೇಂದ್ರ ದಲ್ಲಿ ಸಖೀ ಕೇಂದ್ರವು ಆರಂಭವಾಗಲಿದೆ. ದೌರ್ಜನ್ಯಕ್ಕೊಳಗಾದ ಮಹಿಳೆ ಮತ್ತು ಮಕ್ಕಳಿಗೆ ಒಂದೇ ಸೂರಿನಡಿ ಸೌಲಭ್ಯ ಕಲ್ಪಿಸುವ ಯೋಜನೆ ಇದಾಗಿದ್ದು, ಈ ಕೇಂದ್ರದಲ್ಲಿ ಒಬ್ಬರು ಆಡಳಿತಾಧಿಕಾರಿ, ಒಬ್ಬರು ಸಮಾಲೋಚಕರು, ಇಬ್ಬರು ಸಮಾಜ ಕಾರ್ಯ ಕರ್ತರು, ಇಬ್ಬರು ಮಹಿಳಾ ಪೊಲೀಸರು, ಇಬ್ಬರು ಕಾನೂನು ಸಲಹೆಗಾರರು ಕೆಲಸ ನಿರ್ವಹಿಸಲಿದ್ದಾರೆ.

ಇದರ ನಿರ್ವಹಣೆ ನೋಡಿಕೊಳ್ಳಲು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಉಸ್ತುವಾರಿ ಸಮಿತಿ ಇರುತ್ತದೆ. ಈ ಸಮಿತಿಯಲ್ಲಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ,ಜಿಲ್ಲಾ ಶಸ್ತ್ರ ಚಿಕಿತ್ಸಕರು, ಸ್ವಯಂ ಸೇವಾ ಸಂಸ್ಥೆಯ ಪ್ರತಿನಿಧಿಗಳು ಇರುತ್ತಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಸದಸ್ಯ, ಕಾರ್ಯ ದರ್ಶಿಗಳಾಗಿರುತ್ತಾರೆ.

Advertisement

ಸಖೀ(ಒಎನ್‌ಸಿ ಸೆಂಟರ್‌)ಯಲ್ಲಿ ಸಿಗುವ ಸೌಲಭ್ಯ ಗಳು: ಮಹಿಳೆ ಮತ್ತು ಮಕ್ಕಳ ಮೇಲೆ ದೌರ್ಜನ್ಯ ನಡೆದಾಗ ಅವರಿಗೆ ಮುಂದೆ ಏನು ಮಾಡಬೇಕು ಎನ್ನುವುದು ತೋಚದ ಸ್ಥಿತಿ ಇರುತ್ತದೆ. ಇಂಥ ಸಂದರ್ಭದಲ್ಲಿ ಸಖೀ ಕೇಂದ್ರಕ್ಕೆ ಬಂದರೆ ಅಲ್ಲಿ ನೊಂದವರಿಗೆ ನೆರವಿನ ಹಸ್ತ ದೊರಕುತ್ತದೆ. ದೌರ್ಜನ್ಯ ಕ್ಕೊಳಗಾದ ಮಹಿಳೆ ಮತ್ತು ಮಕ್ಕಳಿಗೆ ತಕ್ಷಣವೇ ಸೂಕ್ತ ಚಿಕಿತ್ಸೆ ನೀಡಲಾಗುವುದು. ವೈದ್ಯಕೀಯ ಸೇವೆಯ ನಂತರ ಅಲ್ಲಿಯೇ ಪೊಲೀಸ್‌ ನೆರವು ದೊರಕುವುದು, ಅದೇ ಕೇಂದ್ರದಲ್ಲಿ ಕಾನೂನು ನೆರವು, ಆಪ್ತ ಸಮಾ ಲೋಚನೆಯು ನಡೆಯಲಿದೆ. ಈ ಯೋಜನೆಯು ದೇಶಾದ್ಯಂತ ಅನುಷ್ಠಾನಗೊಳ್ಳುತ್ತಿದ್ದು, ಇದಕ್ಕೆ ತಗಲುವ ವೆಚ್ಚವನ್ನು ಕೇಂದ್ರ ಸರ್ಕಾರವೇ ಭರಿಸಲಿದೆ.

ಸಖೀ ಕೇಂದ್ರಕ್ಕೆ 38 ಲಕ್ಷಕ್ಕೆ ಪ್ರಸ್ತಾವನೆ: ಜಿಲ್ಲೆಯಲ್ಲಿ ಸಖೀ ಕೇಂದ್ರವನ್ನು ಆರಂಭಿಸಲು ಅಗತ್ಯವಿರುವ ವಾರ್ಡ್‌,ಆಪ್ತ ಸಮಾಲೋಚನಾ ಕೊಠಡಿ ಇತರೆ ಸೌಲಭ್ಯಗಳನ್ನು ಕೇಂದ್ರದಲ್ಲಿ ಕಲ್ಪಿಸಲು 38 ಲಕ್ಷ ಅನುದಾನಕ್ಕಾಗಿ ಕೇಂದ್ರ ಸರ್ಕಾರಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಪ್ರಸ್ತಾವನೆ ಸಲ್ಲಿಸಲಾಗಿದೆ.

ಜಿಲ್ಲೆಯಲ್ಲಿ ಮಹಿಳೆ ಮತ್ತು ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ತಡೆಯಲು ಅಗತ್ಯ ಕ್ರಮ ಕೈಗೊಳ್ಳಬೇಕು, ಈ ಬಗ್ಗೆ ಮಕ್ಕಳಿಗೆ ಮತ್ತು ಪೋಷಕರಿಗೆ ಅರಿವುಮೂಡಿಸುವ ಕಾರ್ಯಕ್ರಮಗಳನ್ನು ಹೆಚ್ಚುಮಾಡಬೇಕು. ಶಾಲಾ, ಕಾಲೇಜುಗಳಲ್ಲಿ ಹೆಚ್ಚು ಜಾಗೃತಿ ಮೂಡಿಸಲು ಅಗತ್ಯ ಕ್ರಮಕೈಗೊಂಡಿದ್ದೇವೆ. ದೌರ್ಜನ್ಯಕ್ಕೊಳಗಾದ ಮಹಿಳೆ ಮತ್ತು ಮಕ್ಕಳಿಗೆ ಸೂಕ್ತ ವೈದ್ಯಕೀಯ, ರಕ್ಷಣೆ, ಕಾನೂನು ಮತ್ತು ಸಮಾಲೋಚನೆ ಒಂದೇ ಸೂರಿನಡಿ ಸಖೀ ಕೇಂದ್ರ ತುಮಕೂರಿನಲ್ಲೂಆರಂಭವಾಗುತ್ತಿದೆ, ಅದಕ್ಕೆ ಎಲ್ಲಾ ರೀತಿಯ ಸಿದ್ಧತೆ ಆಗಿದೆ. ಡಾ. ಕೆ.ರಾಕೇಶ್‌ಕುಮಾರ್‌, ಜಿಲ್ಲಾಧಿಕಾರಿ

 

-ಚಿ.ನಿ ಪುರುಷೋತ್ತಮ್‌

Advertisement

Udayavani is now on Telegram. Click here to join our channel and stay updated with the latest news.

Next