ಸಕಲೇಶಪುರ: ತಾಲೂಕಿನ ಉದೇವಾರ ಸುತ್ತಮುತ್ತ ದಾಂದಲೆ ನಡೆಸುತ್ತಿದ್ದ ಪುಂಡ ಕಾಡಾನೆಯೊಂದನ್ನು ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.
ಮಲೆನಾಡು ಭಾಗದಲ್ಲಿ ಕಾಡಾನೆ ಸಮಸ್ಯೆ ಮಿತಿ ಮೀರಿರುವುದರಿಂದ ಸರ್ಕಾರ 2 ಪುಂಡ ಕಾಡಾನೆಗಳನ್ನು ಹಿಡಿಯಲು ಹಾಗೂ 2 ಹೆಣ್ಣಾನೆಗಳಿಗೆ ಕಾಲರ್ ಐ.ಡಿ ಹಾಕಲು ಅರಣ್ಯ ಇಲಾಖೆಗೆ ಅನುಮತಿ ನೀಡಿದ ಹಿನ್ನೆಲೆಯಲ್ಲಿ 6ಸಾಕಾನೆಗಳು ಹಾಗೂ ಸುಮಾರು 50ಕ್ಕೂ ಹೆಚ್ಚು ಸಿಬ್ಬಂದಿಗಳೊಡನೆ ಅರಣ್ಯ ಇಲಾಖೆ ಬುಧವಾರ ಬೆಳಿಗ್ಗೆ 12 ಗಂಟೆಯಿಂದ ಕಾಡಾನೆ ಹಿಡಿಯುವ ಕಾರ್ಯಾಚರಣೆಯನ್ನು ಉದೇವಾರ ಸಮೀಪದ ಎಬಿಸಿ ಕಾಫಿ ತೋಟದಲ್ಲಿ ಆರಂಭಿಸಿತು.
ಕಾಲ್ನಡಿಗೆಯಲ್ಲಿ ಕಾಫಿತೋಟದೊಳಗೆ ತೆರಳಿದ ಅರವಳಿಕೆ ತಜ್ಞರಾದ ವೆಂಕಟೇಶ್ ,ಮುಜೀಬ್,ಅಕ್ರಂ ಹಾಗೂ ಅರಣ್ಯಾಧಿಕಾರಿಗಳ ತಂಡ ಮುಖ್ಯರಸ್ತೆಯಿಂದ ಸುಮಾರು ಎರಡು ಕಿ.ಮಿ ಒಳಗಿನ ಕಾಫಿ ತೋಟದ ರಸ್ತೆಯಲ್ಲಿ ಎದುರಾದ ಮಕಾನೆ ಕಾಡಾನೆಗೆ ವೆಂಕಟೇಶ್ ಸರಿಯಾಗಿ 12.57 ನಿುಷಕ್ಕೆ ಆರವಳಿಕೆ ಮದ್ದು ಹಾರಿಸಿದರು. ಇದರಿಂದ ಗಾಬರಿಗೊಂಡ ಮಕಾನ ಆನೆ ಸುಮಾರು 300 ಮೀಟರ್ ತೋಟದೋಳಗೆ ಸಾಗಿ ಪ್ರಜ್ಞಾಹೀನವಾಯಿತು. ಆದರೆ ಈ ಸಮಯದಲ್ಲಿ ಮಕಾನೆ ಕಾಡಾನೆಯನ್ನು ಇತರ ಕಾಡಾನೆಗಳು ಸುತ್ತುವರೆದಿದ್ದರಿಂದ ಕಾಡಾನೆ ಹಿಡಿಯುವ ಕಾರ್ಯಾಚರಣೆಗೆ ಅಡ್ಡಿಯುಂಟಾಯಿತು. ಇತರ ಸಾಕಾನೆಗಳು ಸಹ ಮದ ಏರಿದ ಮಕಾನ ಕಾಡಾನೆ ಸಮೀಪ ಹೋಗಲು ಹಿಂಜರಿದಿದ್ದು ಸಹ ಕಾರ್ಯಾಚರಣೆ ವಿಳಂಬವಾಗಲು ಕಾರಣವಾಯಿತು. ಅಂತಿಮವಾಗಿ ಮಕಾನ ಸಮೀಪ ಭೀಮ ಎಂಬ ಆನೆ ಹೋಗಿ ಪೈಪೋಟಿ ನಡೆಸಿತು. ಅಂತಿಮವಾಗಿ ಎರಡು ಕಾಲಿಗೆ ಹಗ್ಗ ಹಾಕಿ ಕಾಡಾನೆಯನ್ನು ಕಾಫಿ ತೋಟದಿಂದ ಹೊರತಂದು ಕಾಲರ್ ಐಡಿ ಆಳವಡಿಸಿ ಏಳುಗಂಟೆಗೆ ಹರಸಾಹಸ ಪಟ್ಟು ಕ್ರೇನ್ ಮೂಲಕ ಲಾರಿಗೆ ಹತ್ತಿಸಿ ನಾಗರಹೊಳೆ ಅಭಯಾರಣ್ಯಕ್ಕೆ ಸಾಗಿಸಲಾಯಿತು. ಕಾರ್ಯಾಚರಣೆಯಲ್ಲಿ ಸಾಕಾನೆಗಳಾದ ಭೀಮ, ಮಹೇಂದ್ರ, ಮಹಾರಾಷ್ಟ್ರ ಭೀಮ್, ಸುಗ್ರೀವ, ಧನಂಜಯ, ಹರ್ಷ, ಸೇರಿದಂತೆ ಸುಮಾರು 50ಕ್ಕೂ ಹೆಚ್ಚುಅರಣ್ಯ ಇಲಾಖೆ ಸಿಬ್ಬಂದಿಗಳು ಭಾಗಿಯಾಗಿದ್ದರು.
ಇದನ್ನೂ ಓದಿ : ಹೊಲದಲ್ಲಿ ಕೆಲಸ ಮಾಡುತ್ತಿದ್ದವರ ಮೇಲೆ ಮಾರಾಕಾಸ್ತ್ರದಿಂದ ದಾಳಿ, ಇಬ್ಬರ ಸ್ಥಿತಿ ಗಂಭೀರ