ಸಕಲೇಶಪುರ: ಹಾಡಹಗಲೆ ತಾಲೂಕಿನ ಮಠಸಾಗರ ಗ್ರಾಮದಲ್ಲಿ ಒಂಟಿ ಸಲಗ ಪ್ರತ್ಯಕ್ಷವಾಗಿ ಗ್ರಾಮಸ್ಥರು ಭಯಭೀತರಾಗಿರುವ ಘಟನೆ ನಡೆದಿದೆ.
ತಾಲೂಕಿನ ಮಠಸಾಗರ ಗ್ರಾಮದಲ್ಲಿ ಬುಧವಾರ ಮುಂಜಾನೆ ಕಾಡಾನೆಯೊಂದು ಗ್ರಾಮದ ಕಾಂಕ್ರೀಟ್ ರಸ್ತೆಯಲ್ಲಿ ಹಾದು ಹೋಗಿದ್ದು ಭಯಭೀತಗೊಳಿಸಿರುತ್ತದೆ. ಕಳೆದ ವಾರವಷ್ಟೇ ಇದೆ ಗ್ರಾಪಂ ವ್ಯಾಪ್ತಿಯಲ್ಲಿ ಅಸ್ತಿಕಭಟ್ ಮೇಲೆ ದಾಳಿ ನಡೆದಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದರು. ಈಗ ಗ್ರಾಮದ ಸುತ್ತಮುತ್ತಲೆ ಕಾಡಾನೆಗಳು ಬೀಡು ಬಿಟ್ಟಿದ್ದು ಜನರಿಗೆ ಏನು ಮಾಡುವುದು ಎಂದು ತೋಚದಂತಾಗಿದೆ.
ಕಾಡಾನೆಗಳು ತಂಡ ತಂಡವಾಗಿ ಸಂಚರಿಸುತ್ತಿದ್ದು ಅಪಾರ ಪ್ರಮಾಣದ ಭತ್ತ, ಕಾಫಿ , ಬಾಳೆ, ಅಡಕೆ ಬೆಳೆಗಳು ನಾಶಗೊಂಡಿವೆ.
ಮಠಸಾಗರದಲ್ಲಿ ಒಂಟಿಸಲಗ ಸಂಚರಿಸುತ್ತಿದ್ದು ಬಾಳ್ಳುಪೇಟೆ ಸಮೀಪದ ಜಮ್ಮನಹಳ್ಳಿಯ ನಲಪಾಡ್ ಪ್ಲಾಂಟೇಷನ್‌ನಲ್ಲಿ ಅಪಾರ ಪ್ರಮಾಣದ ಬೆಳೆ ಕಾಡಾನೆ ಗುಂಪೊಂದರ ದಾಳಿಯಿಂದ ನಾಶಗೊಂಡಿದೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೊಲ್ಲಹಳ್ಳಿ ಸಲೀಂ ಮಾತನಾಡಿ, ಕೂಡಲೆ ಕಾಡಾನೆ ಸ್ಥಳಾಂತರ ಕಾರ್ಯವನ್ನು ಸರ್ಕಾರ ಆರಂಭಿಸದಿದ್ದರೆ ಮತ್ತಷ್ಟು ಸಾವು ನೋವುಗಳು ಉಂಟಾಗುತ್ತದೆ. ಸರ್ಕಾರ ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕಬೇಕೆಂದು ಆಗ್ರಹಿಸಿದರು.