Advertisement

ಕೇಂದ್ರ ಸರಕಾರದ ಮಾತು ಕೇಳಿದ್ದರೆ ಸಜ್ಜದ್‌ರನ್ನು ಸಿಎಂ ಮಾಡಬೇಕಿತ್ತು!

09:49 AM Nov 28, 2018 | Harsha Rao |

ಜಮ್ಮು: ಪೀಪಲ್ಸ್‌ ಕಾನ್ಫರೆನ್ಸ್‌ ಮುಖಂಡ ಸಜ್ಜದ್‌ ಲೋನ್‌ಗೆ ಸರಕಾರ ರಚನೆಗೆ ಅವಕಾಶ ಕೊಡಬೇಕೆಂದು ಕೇಂದ್ರ ಸರಕಾರ ಬಯಸಿತ್ತು ಎಂದು ಹೇಳುವ ಮೂಲಕ ಜಮ್ಮು ಕಾಶ್ಮೀರ ರಾಜ್ಯಪಾಲ ಸತ್ಯಪಾಲ್‌ ಮಲಿಕ್‌ ವಿವಾದ ಸೃಷ್ಟಿಸಿದ್ದಾರೆ. ಇತ್ತೀಚೆಗಷ್ಟೇ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಹಾಗೂ ಲೋನ್‌ ಸರಕಾರ‌ ರಚನೆಗೆ ಅವಕಾಶ ಕೋರಿದ್ದರು. ಈ ಹಿನ್ನೆಲೆಯಲ್ಲಿ ಶಾಸಕರ ಕುದುರೆ ವ್ಯಾಪಾರ ನಡೆಯುವ ಸಾಧ್ಯತೆಯಿದೆ ಎಂಬ ಕಾರಣಕ್ಕೆ ರಾಜ್ಯಪಾಲರು ವಿಧಾನಸಭೆ ವಿಸರ್ಜನೆ ಮಾಡಿದ್ದರು. ಈ ಬಗ್ಗೆ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಮಾತನಾಡಿದ ಅವರು, ಯಾವುದೇ ಒಂದು ಪಕ್ಷಕ್ಕೆ ನಾನು ನನ್ನ ನಿಲುವನ್ನು ತೋರಿಸಿಕೊಂಡಿಲ್ಲ. ಅಪ್ರಾಮಾಣಿಕ ವ್ಯಕ್ತಿ ಎಂದು ಇತಿಹಾಸ ದಲ್ಲಿ ದಾಖಲಾಗಲು ಬಯಸುವುದಿಲ್ಲ ಎಂದಿದ್ದಾರೆ. ನಂತರ ತಮ್ಮ ಮಾತನ್ನು ಸಮರ್ಥಿಸಿಕೊಂಡ ಮಲಿಕ್‌, ಸಜ್ಜದ್‌ ಲೋನ್‌ ಬಳಿ ಶಾಸಕರ ಬಲವಿತ್ತು. ಖಂಡಿತವಾಗಿಯೂ ಕೇಂದ್ರ ಸರಕಾರ‌ ಅವರನ್ನು ಬೆಂಬಲಿಸುತ್ತಿತ್ತು ಎಂದಿದ್ದಾರೆ.

Advertisement

ಈ ಹೇಳಿಕೆಗೆ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರಕಾರದ ಸೂಚನೆ ತಿರಸ್ಕರಿಸಿದ ರಾಜ್ಯಪಾಲರ ಧೈರ್ಯವನ್ನು ಮೆಚ್ಚುತ್ತೇನೆ ಎಂದು ಟ್ವೀಟ್‌ ಮಾಡಿದ್ದಾರೆ. ಅಷ್ಟೇ ಅಲ್ಲ, ನ್ಯಾಷನಲ್‌ ಕಾನ್ಫರೆನ್ಸ್‌ನ ಒಮರ್‌ ಅಬ್ದುಲ್ಲಾ ಕೂಡ ರಾಜ್ಯಪಾಲರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಧಾನಸಭೆ ವಿಸರ್ಜನೆ ಆದೇಶ ಹೊರಡಿಸಿದ್ದಾಗ ಈ ಇಬ್ಬರೂ ರಾಜ್ಯಪಾಲರ ವಿರುದ್ಧ ವಾಗ್ಧಾಳಿ ನಡೆಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next