ಬಂಟ್ವಾಳ: ಸಜೀಪಪಡು ಗ್ರಾಮದ ಸೇನರಬೆಟ್ಟುನಲ್ಲಿ ಮಹಿಳೆಯೊಬ್ಬರು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದ್ದು, ಪ್ರಸ್ತುತ ಸಾವಿನ ಕುರಿತು ಸಂಶಯ ವ್ಯಕ್ತಪಡಿಸಿರುವ ಮಹಿಳೆಯ ಪತಿ, ಆತ್ಮಹತ್ಯೆಗೆ ಪ್ರೇರಣೆಯಾದ ವಿಚಾರದ ಕುರಿತು ತನಿಖೆ ನಡೆಸುವಂತೆ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ಸೇನರಬೆಟ್ಟು ನಿವಾಸಿ ಸತೀಶ್ ಪಿ. ಅವರ ಪತ್ನಿ ಬೀನಾ ಸಿ. ಅವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆಯ ಸಂದರ್ಭ ಮಹಿಳೆಯ ಕಿವಿಯಲ್ಲಿ ಇಯರ್ ಫೋನ್ ಇದ್ದು, ಆಕೆಯ ಮೊಬೈಲ್ ಕೆಳಗಡೆ ಬಿದ್ದುಕೊಂಡಿತ್ತು. ಹೀಗಾಗಿ ಅದು ವ್ಯವಸ್ಥಿತ ಸಂಚು ಎಂಬ ಸಂಶಯ ಮೂಡುತ್ತಿದೆ.
ಮಂಗಳೂರಿನಲ್ಲಿ ಕೆಲಸಕ್ಕಿದ್ದ ತಾನು ವಾರಕ್ಕೊಮ್ಮೆ ಮನೆಗೆ ಹೋಗುತ್ತಿದ್ದೆ. ಈ ವೇಳೆ ಯುವಕನೋರ್ವ ಮನೆಗೆ ಬಂದು ಹೋಗುತ್ತಿದ್ದು, ಆತನೇ ಕಿರುಕುಳ ನೀಡಿ ಆತ್ಮಹತ್ಯೆಗೆ ಪ್ರೇರಣೆ ನೀಡಿದ್ದಾನೆ. ಜತೆಗೆ ಘಟನೆಯ ಕೆಲವು ದಿನಗಳ ಹಿಂದೆ ತನ್ನ ಪತ್ನಿಯ ತಾಯಿಗೆ ಕರೆ ಮಾಡಿ ಬೀನಾ ಆತ್ಮಹತ್ಯೆಗೆ ಯತ್ನಿಸಿರುವುದಾಗಿ ಹೇಳಿದ್ದ. ಈ ವೇಳೆ ಆಕೆಯನ್ನು ವಿಚಾರಿಸಿದಾಗ ಯುವಕ ಕಿರುಕುಳ ನೀಡುವ ವಿಚಾರವನ್ನು ತಾಯಿಯ ಬಳಿ ಹೇಳಿಕೊಂಡಿದ್ದಳು. ಘಟನೆ ನಡೆದ ದಿನವೂ ತನ್ನ ಪತ್ನಿಯ ತಾಯಿಗೆ ಕರೆ ಮಾಡಿ ಬೀನಾ ಆತ್ಮಹತ್ಯೆಯ ವಿಚಾರ ಹೇಳಿದ್ದಾನೆ ಎಂದು ಮೃತ ಮಹಿಳೆಯ ಪತಿ ಸತೀಶ್ ಅವರು ಎಸ್‌ಪಿಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ.