ಬಡಗನ್ನೂರು: ಬಡಗನ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಡುವನ್ನೂರು ಗ್ರಾಮದ ಸಜಂಕಾಡಿ ಅರಣ್ಯ ಪ್ರದೇಶದಲ್ಲಿ ರಾತ್ರಿ ವೇಳೆ ನಿರಂತರ ಒಂದು ತಿಂಗಳಿಂದ ಗೋಣಿಕಟ್ಲೆ ಕೋಳಿ ಹಾಗೂ ಇತರ ತ್ಯಾಜ್ಯ ವಸ್ತುಗಳನ್ನು ರಸ್ತೆ ಬದಿಯಲ್ಲಿ ಎಸೆದು ಪರಿಸರ ನಾಶ ಮಾಡುವ ಕೃತ್ಯ ಕಿಡಿಗೇಡಿಗಳಿಂದ ನಡೆಯುತ್ತಲೇ ಇದೆ. ಇದರಿಂದ ಈ ಭಾಗದಲ್ಲಿ ದುರ್ವಾಸನೆಯಿಂದ ಜನರಿಗೆ ಮಾರಕ ರೋಗ ಹರಡುವ ಬಗ್ಗೆ ಭಯದ ಭೀತಿ ಹುಟ್ಟಿದೆ.
ಇಲ್ಲಿನ ಸುತ್ತ ಮುತ್ತಲಿನ ನಿವಾಸಿಗಳು ಸಂಪ್ಯ ಗ್ರಾಮಾಂತರ ಠಾಣೆ, ಈಶ್ವರಮಂಗಲ ಹೊರಠಾಣೆ, ಬಡಗನ್ನೂರು ಗ್ರಾ.ಪಂ.ಗೆ ಅರಣ್ಯ ಇಲಾಖೆ ಹಾಗೂ ಆರೋಗ್ಯ ಇಲಾಾಖೆ ಅಧಿಕಾರಿಗಳಿಗೆ ದೂರು ನೀಡಿದ್ದರೂ, ಇಲಾಖಾಧಿಕಾರಿಗಳಾಗಲಿ, ಜನ ಪ್ರತಿನಿಧಿಗಳಾಗಲಿ ಕ್ರಮ ಕೈಗೊಂಡಿಲ್ಲ.
ಮುುಂದಿನ ಮಳೆಗಾಲದಲ್ಲಿ ಇದೇ ರೀತಿ ಕೊಳೆತ ತ್ಯಾಜ್ಯವನ್ನು ಮೂಟೆಗಟ್ಟಲೆ ತಂದು ಎಸೆದರೆ ಮಳೆ ನೀರಿನ ಜತೆ ಎಲ್ಲೆಡೆ ತ್ಯಾಜ್ಯ ಹರಿದು ಡೆಂಗ್ಯೂ, ಚಿಕೂನ್ ಗುನ್ಯಾದಂತಹ ಭಯಾನಕ ರೋಗಗಳು ಹರಡುವ ಭೀತಿ ಉಂಟಾಗಿದೆ.
ಆದ್ದರಿಂದ ಆರೋಗ್ಯ ಸಂಬಂಧಿ ಸಮಸ್ಯೆ ಪ್ರಾರಂಭಗೊಳ್ಳುವ ಮೊದಲು ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಇತ್ತ ಗಮನಹರಿಸಿ ಕಿಡಿಗೇಡಿಗಳನ್ನು ಹಿಡಿದು ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಸುಳ್ಯ: ಅಯ್ಯನಕಟ್ಟೆಯಿಂದ ಬೇಂಗಮಲೆಯಾಗಿ ಸುಳ್ಯಕ್ಕೆ ಸಂಪರ್ಕ ರಸ್ತೆಯ ಕಳಂಜ ಗ್ರಾಮದ ಕೊಲ್ಲರ್ನೂಜಿ, ಅಮರಪಟ್ನೂರು ಗ್ರಾಮದ ಸುಲುಗೋಡು ಮತ್ತು ಬೇಂಗಮಲೆಯಲ್ಲಿ ದನದ ತಲೆ, ಕೈ ಕಾಲು ಸಹಿತ ತ್ಯಾಜ್ಯ ಎಸೆಯಲಾಗಿದೆ. ರಸ್ತೆಯುದ್ದಕ್ಕೂ ದುರ್ನಾತ ಬೀರುತ್ತಿದೆ.
ಈ ಪರಿಸರದಲ್ಲಿ ನಿರಂತರವಾಗಿ ಗ್ರಾಮಸ್ಥರು, ಸಂಘ-ಸಂಸ್ಥೆಗಳು, ಜನಪ್ರತಿನಿಧಿಗಳು ಸ್ವಚ್ಛತಾ ಕಾರ್ಯ ನಡೆಸುತ್ತಿದ್ದರೆ, ಅಪರಿಚಿತ ಕಿಡಿಗೇಡಿಗಳು ತ್ಯಾಜ್ಯ ಎಸೆದು ಪರಿಸರ ಮಲಿನಗೊಳಿಸುತ್ತಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.