Advertisement

Bellary ಜೈಲಿನಿಂದ ಪೆರೋಲ್ ರಜೆಗೆ ಬಂದು ವಾಪಸ್ ತೆರಳದ ಸಜಾಬಂಧಿ ಪುನಃ ಬಂಧನ

10:13 PM Aug 01, 2024 | Team Udayavani |

ಬಳ್ಳಾರಿ: ಪತ್ನಿಯನ್ನು ಕೊಂದು ಜೈಲು ಸೇರಿ, ಪೆರೋಲ್ ಮೇಲೆ ಹೊರಬಂದು ವಾಪಸ್ ಹೋಗದೆ, ಪರಾರಿಯಾಗಿದ್ದ ಸಜಾಬಂದಿಯೊಬ್ಬ ಐದು ವರ್ಷಗಳ ಬಳಿಕ ಪತ್ತೆಹಚ್ಚಿ ಜೈಲುಗೆ ಕಳುಹಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Advertisement

ಜಿಲ್ಲೆಯ ಸಿರುಗುಪ್ಪ ಜಿಲ್ಲೆಯ ಉತ್ತನೂರು ಗ್ರಾಮದ ನಾಗೇಶ ಅಲಿಯಾಸ್ ನಾಗಪ್ಪ ಪರಾರಿಯಾಗಿದ್ದ ಸಜಾಬಂದಿಯಾಗಿದ್ದಾನೆ. ಅಡುಗೆ ಮಾಡಲು ಮಸಾಲೆ ಕೊಡಿಸುವುದಾಗಿ ತೆಕ್ಕಲಕೋಟೆ ಪಟ್ಟಣದ ಎಪಿಎಂಸಿ ಬಳಿಗೆ ಪತ್ನಿ ಮಾರೆಳನ್ನು ಕರೆತಂದಿದ್ದ ಪತಿ ನಾಗೇಶ, ಅಲ್ಲಿ ಪತ್ನಿಯೊಂದಿಗೆ ಜಗಳ ಮಾಡಿ ಕಲ್ಲಿನಿಂದ ತಲೆ, ಎಡ ಮತ್ತು ಬಲ ಒಣಕಾಲುಗಳಿಗೆ ಒಡೆದು ಕೊಲೆ ಮಾಡಿದ್ದನು. ಈ ಕುರಿತು ತೆಕ್ಕಲಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದೋಷಾರೋಪ ಪಟ್ಟಿ ಸಲ್ಲಿಸಿದ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದ ನ್ಯಾಯಾಲಯವು 2013 ಅಕ್ಟೋಬರ್ 30 ರಂದು ಆರೋಪಿ ನಾಗೇಶ ಅಲಿಯಾಸ್ ನಾಗಪ್ಪನಿಗೆ ಜೀವಾವಧಿ ಶಿಕ್ಷೆಯೊಂದಿಗೆ 55 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದು, ಬಳ್ಳಾರಿಯ ಕೇಂದ್ರ ಕಾರಾಗೃಹದಲ್ಲಿ ಸಜಾಬಂಧಿಯಾಗಿ ಜೈಲುವಾಸಿಯಾಗಿದ್ದನು.

ಆದರೆ, ತಾಯಿ ನರಸಮ್ಮಳ ಅನಾರೋಗ್ಯದ ಸಲುವಾಗಿ ಕಳೆದ 2020 ಜನವರಿ20 ರಿಂದ 15 ದಿನಗಳ ಕಾಲ ಪೆರೋಲ್ ರಜೆ ಮೇಲೆ ಜೈಲಿನಿಂದ ಹೊರಗಡೆ ಬಂದಿದ್ದ ಸಜಾಕೈದಿ ನಾಗೇಶನು, 15ದಿನಗಳ ಬಳಿಕ 2020 ಫೆ. 5 ರಂದು ವಾಪಸ್ ಕೇಂದ್ರ ಕಾರಾಗೃಹಕ್ಕೆ ಹೋಗಿ ಶರಣಾಗತನಾಗದೆ ಪರಾರಿಯಾಗಿದ್ದನು.

ಈ ಕುರಿತು ಕೇಂದ್ರ ಕಾರಾಗೃಹದ ಅಧೀಕ್ಷಕರು ಗಾಂಧಿನಗರ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿತ್ತು.

ತಲೆಮರೆಸಿಕೊಂಡಿದ್ದ ಸಜಾಬಂಧಿಯ ಪತ್ತೆಗೆ, ಇರುವಿಕೆ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿದಲ್ಲಿ 1 ಲಕ್ಷರೂ. ಬಹುಮಾನ ನೀಡುವ ಬಗ್ಗೆಯೂ ಬಳ್ಳಾರಿ ವಲಯದ ಅಂದಿನ ಐಜಿಪಿಯವರು ಘೋಷಣೆ ಮಾಡಿದ್ದರು. ಆದರೂ, ಪತ್ತೆಯಾಗಿರಲಿಲ್ಲ.

Advertisement

ಇದೀಗ ಬಳ್ಳಾರಿ ಜಿಲ್ಲೆಯ ನೂತನ ಎಸ್‌ಪಿ ಡಾ. ವಿ.ಜೆ.ಶೋಭಾರಾಣಿ ಅವರ ಮಾರ್ಗದರ್ಶನದಲ್ಲಿ ಸಿರುಗುಪ್ಪ ಉಪವಿಭಾಗದ ಡಿವೈಎಸ್‌ಪಿ ವೆಂಕಟೇಶ್ ನೇತೃತ್ವದಲ್ಲಿ ತೆಕ್ಕಲಕೋಟೆ ಠಾಣೆ ಸಿಪಿಐ ಸುಂದರೇಶ್ ಕೆ. ಹೊಳೆಣ್ಣವರ್, ಸಿರಿಗೇರಿ ಠಾಣೆ ಪಿಎಸ್‌ಐ ಶ್ರೀನಿವಾಸ್ ಮತ್ತು ಸಿಬ್ಬಂದಿಗಳನ್ನು ಒಳಗೊಂಡ ತಂಡ ಕಾರ್ಯಾಚರಣೆ ನಡೆಸಿ, ತೆಕ್ಕಲಕೋಟೆ ಪಟ್ಟಣದ ಶ್ರೀ ಕಾಳಿಕಾದೇವಿ ದೇವಸ್ಥಾನದ ಬಳಿ ಇರುವ ಬ್ರಿಡ್ಜ್ ಹತ್ತಿರ ಪರಾರಿಯಲ್ಲಿದ್ದ ಸಜಾಬಂಧಿ ಕೊರಚರ ನಾಗೇಶ್ ಅಲಿಯಾಸ್ ನಾಗಪ್ಪ, ನಾಗೇಶ್ ಕುಮಾರ್, ಅಬ್ರಾಮನ್‌ನನ್ನು ಮರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಎಸ್‌ಪಿ ಡಾ. ವಿ.ಜೆ.ಶೋಭಾರಾಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಂಡದ ಅಧಿಕಾರಿ, ಸಿಬ್ಬಂದಿಗಳ ಕಾರ್ಯಾಚರಣೆಗೆ ಪ್ರಶಂಸೆ ವ್ಯಕ್ತಪಡಿಸಿ, ನಗದು ಬಹುಮಾನ ಘೋಷಣೆ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next