ಬ್ಯಾಂಕಾಕ್: ಸಾತ್ವಿಕ್‌ಸಾಯಿರಾಜ್ ಮತ್ತು ಚಿರಾಗ್ ಶೆಟ್ಟಿ 3 ಗೇಮ್‌ಗಳ ಹೋರಾಟದಲ್ಲಿ ಕೊರಿ ಯದ ಎದುರಾಳಿಯನ್ನು ಮಣಿಸಿ ಥಾೖಲಂಡ್ ಓಪನ್ ಬ್ಯಾಡ್ಮಿಂಟನ್ ಕೂಟದ ಫೈನಲ್ ಹಂತಕ್ಕೇರಿತು. ಭಾರತೀಯ ತಂಡವೊಂದು ಪ್ರಶಸ್ತಿ ಸುತ್ತಿಗೇರಿರುವುದು ಇದೇ ಮೊದಲ ಸಲವಾಗಿದೆ.
ವಿಶ್ವದ 16ನೇ ರ್‍ಯಾಂಕಿನ ಸಾತ್ವಿಕ್‌ಸಾಯಿರಾಜ್-ಚಿರಾಗ್ 22-20, 22-24, 21-9 ಗೇಮ್‌ಗಳಿಂದ ಕೊರಿಯದ ಕೊ ಸಂಗ್ ಹ್ಯುನ್ ಮತ್ತು ಶಿನ್ ಬೇಕ್ ಚೋಲ್ ಅವರನ್ನು 63 ನಿಮಿಷಗಳ ಸೆಣಸಾಟದಲ್ಲಿ ಮಣಿಸಿದರು.
ಸಾತ್ವಿಕ್ ಸಾಯಿರಾಜ್ ಮತ್ತು ಚಿರಾಗ್ ಅವರಿಗಿದು 2019ನೇ ಋತುವಿನ ಮೊದಲ ಫೈನಲ್ ಆಗಿದೆ. ಅವರಿಬ್ಬರು 2018ರಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್ ನ ಪುರುಷರ ಡಬಲ್ಸ್ನಲ್ಲಿ ಬೆಳ್ಳಿ ಜಯಿಸಿದ್ದರು.
ರವಿವಾರ ನಡೆಯುವ ಫೈನಲ್ ಹೋರಾಟದಲ್ಲಿ ಶ್ರೇಯಾಂಕರಹಿತ ಆಟಗಾರರಾದ ಸಾಯಿರಾಜ್-ಚಿರಾಗ್ ಅವರು ಮೂರನೇ ಶ್ರೇಯಾಂಕದ ಚೀನದ ಲೀ ಜುನ್ ಹುಯಿ ಮತ್ತು ಲಿಯು ಯು ಚೆನ್ ಅವರ ಸವಾಲನ್ನು ಎದುರಿಸಲಿದ್ದಾರೆ.
ಮೊದಲೆರಡು ಗೇಮ್‌ಗಳಲ್ಲಿ ಉಭಯ ಆಟಗಾರರು ತೀವ್ರ ಪೈಪೋಟಿಯಿಂದ ಹೋರಾಡಿದ್ದರು. ಪ್ರತಿಯೊಂದು ಅಂಕಕ್ಕೂ ಕಠಿನ ಸ್ಪರ್ಧೆ ಎದುರಾಗಿತ್ತು. ಆದರೆ ನಿರ್ಣಾಯಕ ಗೇಮ್‌ನಲ್ಲಿ ಕೊರಿಯ ಆಟಗಾರರು ಬಹು ಬೇಗನೇ ಶರಣಾದರು.