ಶಹಾಪುರ: ಕೃಷಿ ವಿಸ್ತೀರ್ಣ ಸಿಬ್ಬಂದಿ ತಾಲೂಕಿನ ದೋರನಹಳ್ಳಿ ಮತ್ತು ಗೋಗಿ ಗ್ರಾಮದ ಹಲವು ರೈತರ ಜಮೀನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದ್ದು, ಸೈನಿಕ ಹುಳುವಿನ ಕಾಟದಿಂದ ಜೋಳ, ಮುಸುಕಿನ ಜೋಳ, ಗೋಧಿ ಮತ್ತು ಭತ್ತದ ಬೆಳೆ ಹಾನಿಗೊಳಗಾದ ಕುರಿತು ಮಾಹಿತಿ ನೀಡಿದ್ದಾರೆ. ಅಮೇರಿಕಾದಿಂದ ಆರ್ಮಿ ವರ್ಮ ಅಂದರೆ ಸೈನಿಕ ಎಂಬ ಹೆಸರಿನ ಒಂದು ಹುಳು ದೇಶಕ್ಕೆ ನುಗ್ಗಿದೆ. ಇದು ಮೊಟ್ಟ ಮೊದಲ ಬಾರಿಗೆ ರಾಜ್ಯದ ಶಿವಮೊಗ್ಗದಲ್ಲಿ ಮೇ. 2018ರಂದು ಕಂಡು ಬಂದಿರುವ ಬಗ್ಗೆ ವರದಿಯಾಗಿತ್ತು.
ಪ್ರಸ್ತುತ ಆ ಹುಳು ಇತರೆ ಜಿಲ್ಲೆಗಳಿಗೂ ಬಂದಿದೆ. ಈ ಹುಳುವಿನಿಂದ ಬಹು ಬೆಳೆಗಳಿಗೆ ಹಾನಿ ಉಂಟಾಗುತ್ತಿದೆ. ಶೇ. 80ರಷ್ಟು ಬೆಳೆಗಳು ಹಾನಿಯಾಗುತ್ತಿದೆ.
ಮುಖ್ಯವಾಗಿ ಮುಸಕಿನ ಜೋಳ, ಭತ್ತ, ಗೋದಿ ಮತ್ತು ಕಬ್ಬು ಈ ಬೆಳೆಗಳಲ್ಲಿ ಸೈನಿಕ ಹುಳು ಬಾಧೆ ಉಂಟು ಮಾಡುತ್ತಿದೆ. ಪ್ರಸ್ತುತ ಈ ಹುಳು ಯಾದಗಿರಿ ಜಿಲ್ಲೆಗೂ ಬಂದಿದೆ ಎಂದು ಭೀಮರಾಯನ ಗುಡಿಯಲ್ಲಿರುವ ಕೃಷಿ ವಿಸ್ತೀರ್ಣಾ ಶಿಕ್ಷಣ ಕೇಂದ್ರದ ವಿಸ್ತರಣಾ ಮುಂದಾಳು ತಿಳಿಸಿದ್ದಾರೆ.
ಸೈನಿಕ ಹುಳು ಇದಕ್ಕೆ ಆಂಗ್ಲ ಭಾಷೆಯಲ್ಲಿ ಆರ್ಮಿ ವರ್ಮ ಎನ್ನುತ್ತಾರೆ. ಇದು ಅಮೇರಿಕದ ಸ್ಥಳೀಯ ಹುಳುವಾಗಿದ್ದು, ಪ್ರಪಂಚದ ಎಲ್ಲ ದೇಶಗಳಿಗೆ ಪಸರಿಸಿಕೊಂಡಿದೆ. ನಮ್ಮ ದೇಶಕ್ಕೂ ವಲಸೆ ಬಂದಿದೆ.
ಪ್ರೌಢ ಕೀಟವು ಪ್ರತಿ ರಾತ್ರಿ 100 ಕೀ.ಮೀಟರ್ ದೂರ ಕ್ರಮಿಸುತ್ತದೆ, ತನ್ನ ಜೀವನಕಾಲದಲ್ಲಿ 2000 ಕೀ.ಮೀಟರ್ ದೂರ ಕ್ರಮಿಸುತ್ತದೆ. ಈಗ ನಮ್ಮ ಯಾದಗಿರಿ ಜಿಲ್ಲೆಯಲ್ಲಿ ಹಿಂಗಾರಿ ಜೋಳದ ಎಲ್ಲ ಪ್ರದೇಶಗಳಲ್ಲಿ ಕಂಡು ಬರುತ್ತಿದೆ. ರೈತರು ಬೆಳೆ ಹಾನಿ ತಡೆಗೆ ಚಿಂತಿತರಾಗಿದ್ದಾರೆ.
ಸೈನಿಕ ಎಂಬ ಅಮೇರಿಕ ಮೂಲದ ಹುಳು ಪ್ರಸ್ತುತ ಯಾದಗಿರಿ ಜಿಲ್ಲೆಗೂ ಆಗಮಿಸಿದ್ದು, ಬೆಳೆಗಳಿಗೆ ಮಾರಕವಾಗಿದೆ. ಜೋಳದ ಸುಳಿಯಲ್ಲಿ ಬಾಧೆ. ಗೋಗಿ, ದೋರನಹಳ್ಳಿ ಗ್ರಾಮದಲ್ಲಿಯೂ ಕ್ಷೇತ್ರ ವೀಕ್ಷಣೆ ನಡೆಸಿದ್ದು, ಇಲ್ಲಿಯೂ ಈ ಹುಳುವಿನಿಂದ ಬಾಧೆ ಕಂಡು ಬಂದಿದೆ. ರೈತರು ಎಚ್ಚರಿಕೆ ವಹಿಸಿ ನಿರ್ವಹಣೆ ಮಾಡಬೇಕು. ಶಿವಾನಂದ ಹೊನ್ನಾಳಿ, ವಿಸ್ತರಣಾ ಮುಂದಾಳು, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಭಿಮರಾಯನಗುಡಿ