Advertisement
ಈವರೆಗೆ ಏಶ್ಯಾಡ್ ಬ್ಯಾಡ್ಮಿಂಟನ್ ವನಿತಾ ಸಿಂಗಲ್ಸ್‌ನಲ್ಲಿ ವೈಯಕ್ತಿಕ ಪದಕ ಗೆಲ್ಲದ ಭಾರತಕ್ಕೆ ಸಿಂಧು-ಸೈನಾ ಆಶಾಕಿರಣವಾಗಿ ಗೋಚರಿಸಿದ್ದರು.
Related Articles
ಸೋಮವಾರ ನಡೆದ ಸೆಮಿಫೈನಲ್ ಹಣಾಹಣಿಯಲ್ಲಿ ವಿಶ್ವದ 3ನೇ ಶ್ರೇಯಾಂಕಿತೆ ಸಿಂಧು ಜಪಾನ್‌ನ ಅಕಾನೆ ಯಮಾಗುಚಿ ಅವರನ್ನು 21-17, 15-21, 21-10 ಗೇಮ್‌ಗಳಿಂದ ಸೋಲಿಸುವಲ್ಲಿ ಯಶಸ್ವಿಯಾದರು. ಇದು ಪ್ರಸಕ್ತ ಏಶ್ಯಾಡ್‌ನಲ್ಲಿ ಯಮಾಗುಚಿ ವಿರುದ್ಧ ಸಿಂಧು ಸಾಧಿಸಿದ 2ನೇ ಗೆಲುವು. ಇದಕ್ಕೂ ಮುನ್ನ ತಂಡ ಸ್ಪರ್ಧೆಯಲ್ಲೂ ಸಿಂಧು ಯಮಾಗುಚಿಗೆ ಸೋಲುಣಿಸಿದ್ದರು.
Advertisement
ಆರಂಭದಲ್ಲಿ ಕೆಲವು ತಪ್ಪುಗಳನ್ನು ಮಾಡಿದ ಸಿಂಧು ಬಳಿಕ ಎಚ್ಚೆತ್ತುಗೊಂಡು ಪಂದ್ಯದಲ್ಲಿ ಹಿಡಿತ ಸಾಧಿಸತೊಡಗಿದರು. ಯಮಾಗುಚಿ ಆಕ್ರಮಣ ಆಟಕ್ಕೆ ಇಳಿದರೂ, ಪ್ರತಿದಾಳಿ ನಡೆಸಿದ ಸಿಂಧು ಮೊದಲ ಗೇಮ್‌ನಲ್ಲಿ 11-8 ಅಂಕಗಳ ಮುನ್ನಡೆ ಕಾಯ್ದುಕೊಂಡರು. ವಿವಿಧ ಸ್ಟ್ರೋಕ್‌ಗಳನ್ನು ಬಳಸಿ ಪ್ರತಿಸ್ಪರ್ಧಿಗೆ ತಪ್ಪು ಮಾಡುವಂತೆ ಪ್ರೇರೇಪಿಸಿದರು. ಈ ಮೂಲಕ ಮೊದಲ ಗೇಮ್ ಸಿಂಧು ಪಾಲಾಯಿತು.
2ನೇ ಗೇಮ್‌ನ ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡಿದ್ದ ಸಿಂಧು, ಸಣ್ಣ ತಪ್ಪುಗಳನ್ನು ಮಾಡಿ ಹಿನ್ನಡೆ ಅನುಭವಿಸಿದರು. ಯಮಾಗುಚಿ ತಿರುಗಿ ಬಿದ್ದರು. ನಿರ್ಣಾಯಕ ಗೇಮ್‌ನಲ್ಲಿ 7-3 ಅಂಕಗಳಿಂದ ಮುನ್ನಡೆಯತೊಡಗಿದ ಸಿಂಧು ಜಪಾನೀ ಆಟಗಾರ್ತಿ ಮೇಲೆ ಸವಾರಿ ಮಾಡುವಲ್ಲಿ ಯಶಸ್ವಿಯಾದರು. ನಿರೀಕ್ಷೆಗೂ ಸುಲಭದಲ್ಲಿ ಗೆಲುವು ಸಾಧಿಸಿದರು. ಇವರಿಬ್ಬರ ಕಾದಾಟ 65 ನಿಮಿಷಗಳ ಕಾಲ ನಡೆಯಿತು.
ಎಡವಿದ ಸೈನಾ ಮತ್ತೂಂದು ಸೆಮಿಫೈನಲ್ ಪಂದ್ಯದಲ್ಲಿ 10ನೇ ಶ್ರೇಯಾಂಕಿ ಸೈನಾ ನೆಹ್ವಾಲ್‌ಗೆ ವಿಶ್ವದ ನಂ.1 ಆಟಗಾರ್ತಿ, ಚೈನೀಸ್ ತೈಪೆಯ ತೈ ಜು ಯಿಂಗ್ ಕೈಯಿಂದ ಪಾರಾಗಿ ಬರಲು ಸಾಧ್ಯವಾಗಲಿಲ್ಲ. 17-21, 14-21 ಅಂತರದ ಸೋಲನುಭವಿಸಿ ಕಂಚಿನ ಪದಕಕ್ಕೆ ತೃಪ್ತಿಪಟ್ಟರು. ಇದು ತೈ ಜು ಯಿಂಗ್ ವಿರುದ್ಧ ಸೈನಾ ಅನುಭವಿಸಿದ ಸತತ 10ನೇ ಸೋಲಾಗಿದೆ. ಈ ವರ್ಷ ಅನುಭವಿಸಿದ 4ನೇ ಸೋಲು. ಸೈನಾಗೆ ಸೋಲುಣಿಸಿದ ತೈ ಜು ಯಿಂಗ್ ವಿರುದ್ಧ ಸಿಂಧು ಸೇಡು ತೀರಿಸಿಕೊಳ್ಳುವರೇ ಎಂಬುದು ಮಂಗಳವಾರದ ಕುತೂಹಲ. ಇದು 3 ಏಶ್ಯನ್ ಗೇಮ್ಸ್‌ನಲ್ಲಿ ಸೈನಾ ನೆಹ್ವಾಲ್ ಗೆದ್ದ ಮೊದಲ ಪದಕ. ಕಳೆದೆರಡು ಸಲ ಅವರು ಕ್ವಾರ್ಟರ್ ಫೈನಲ್‌ನಲ್ಲೇ ಸೋಲನುಭವಿಸಿ ಪದಕದಿಂದ ದೂರಾಗಿದ್ದರು. ಫೈನಲ್ ಪಂದ್ಯ 50-50
ತೈ ಜು ಯಿಂಗ್ ಓರ್ವ ಪರಿಪೂರ್ಣ ಆಟಗಾರ್ತಿ. ಇಷ್ಟು ಸಲ ಎದುರಿಸಿದರೂ ಆಕೆಯನ್ನು ಅರ್ಥೈಸಿಕೊಳ್ಳಲಾಗಿಲ್ಲ. ನಾನು ಇನ್ನೇನು ಆಕೆಯ ಆಟವನ್ನು ಅರಿತುಕೊಂಡೆ ಎನ್ನುವಷ್ಟರಲ್ಲಿ ಜು ಯಿಂಗ್ ಇನ್ನೊಂದು ಹೊಸ ಶಾಟ್‌ನೊಂದಿಗೆ ಸವಾಲೊಡ್ಡುತ್ತಿದ್ದರು. ನಾನು ಉತ್ತಮ ಆಟವನ್ನೇ ಆಡಿದೆ. ಆದರೆ ಆಕೆಯ ಆಟ ಅತ್ಯುತ್ತಮ ಮಟ್ಟದಲ್ಲಿತ್ತು. ನಾನು ಬಹಳ ಗೊಂದಲಕ್ಕೊಳಗಾದೆ. ಫೈನಲ್ ಪಂದ್ಯ 50-50 ಎಂದು ಹೇಳಬಹುದು. ಆದರೆ ಸಿಂಧು ಬಹಳ ಉದ್ದ ಇರುವುದರಿಂದ ಕೌಂಟರ್ ಅವಕಾಶಗಳು ಹೆಚ್ಚಿವೆ.
-ಸೈನಾ ನೆಹ್ವಾಲ್