ಕೌಲಾಲಂಪುರ: ವರ್ಷಾರಂಭದ “ಮಲೇಷ್ಯಾ ಓಪನ್ ಬ್ಯಾಡ್ಮಿಂಟನ್’ ಪಂದ್ಯಾವಳಿಯಲ್ಲಿ ಭಾರತ ನಿರಾಶಾದಾಯಕ ಪ್ರದರ್ಶನ ನೀಡಿದೆ. ತಾರಾ ಆಟಗಾರರಾದ ಸೈನಾ ನೆಹ್ವಾಲ್, ಕೆ. ಶ್ರೀಕಾಂತ್, ಯುವ ಆಟಗಾರ್ತಿ ಆಕರ್ಷಿ ಕಶ್ಯಪ್ ಮೊದಲ ಸುತ್ತಿನಲ್ಲೇ ಆಘಾತಕಾರಿ ಸೋಲನುಭವಿಸಿ ಹೊರಬಿದ್ದಿದ್ದಾರೆ.
ಎರಡು ಬಾರಿಯ ಕಾಮನ್ವೆಲ್ತ್ ಗೇಮ್ಸ್ ಚಾಂಪಿಯನ್ ಸೈನಾ ನೆಹ್ವಾಲ್ 2022ರ ಋತುವಿನುದ್ದಕ್ಕೂ ಪರದಾಟ ನಡೆಸಿದ್ದರು. 2023ರಲ್ಲೂ ಇದೇ ಸಂಕಟ ಮುಂದುವರಿದಿದೆ. ಚೀನದ ಹಾನ್ ಯೆ ವಿರುದ್ಧ ಅವರು 12-21, 21-17, 12-21 ಆಂತರದ ಸೋಲನುಭವಿಸಿದರು. ಈ ಸೋಲಿನಿಂದಿಗೆ ಅವರ ವಿಶ್ವ ರ್‍ಯಾಂಕಿಂಗ್ 30ಕ್ಕೆ ಕುಸಿಯಿತು.
ಮಾಜಿ ನಂ.1 ಆಟಗಾರ ಕೆ. ಶ್ರೀಕಾಂತ್ ಜಪಾನ್‌ನ ಶ್ರೇಯಾಂಕ ರಹಿತ ಆಟಗಾರ ಕೆಂಟ ನಿಶಿಮೊಟೊ ಕೈಯಲ್ಲಿ 19-21, 14-21 ನೇರ ಗೇಮ್‌ಗಳ ಆಘಾತಕ್ಕೆ ಸಿಲುಕಿದರು. ಮೊದಲ ಗೇಮ್‌ನಲ್ಲಷ್ಟೇ ಶ್ರೀಕಾಂತ್ ಉತ್ತಮ ಹೋರಾಟ ಪ್ರದರ್ಶಿಸಿದರು.
ವನಿತಾ ಸಿಂಗಲ್ಸ್‌ನಲ್ಲಿ ಆಕರ್ಷಿ ಕಶ್ಯಪ್ ಚೈನೀಸ್ ತೈಪೆಯ ವೆನ್ ಚಿ ಸು ಅವರಿಗೆ 10-21, 8-21ರಿಂದ ಸುಲಭದಲ್ಲಿ ಶರಣಾದರು.