Advertisement

ಸೈನಾ ನೆಹ್ವಾಲ್‌ ಪಾಸಿಟಿವ್‌ ವರದಿ ಸುಳ್ಳು! : ಥಾಯ್ಲೆಂಡ್‌ ಕೂಟದಲ್ಲೊಂದು ಕೋವಿಡ್ ನಾಟಕ

10:49 PM Jan 12, 2021 | Team Udayavani |

ಬ್ಯಾಂಕಾಕ್‌: ಭಾರತದ ಬ್ಯಾಡ್ಮಿಂಟನ್‌ ಆಟಗಾರರೀಗ ಕೋವಿಡ್ ಆಘಾತಕ್ಕೆ ಸಿಲುಕಿರುವ ಸುದ್ದಿ ಮಂಗಳವಾರ ಸಂಜೆ ವೇಳೆ ಭಾರೀ ತಿರುವು ಪಡೆದುಕೊಂಡಿದೆ. ಥಾಯ್ಲೆಂಡ್‌ ಕೂಟದಲ್ಲಿ ಪಾಲ್ಗೊಳ್ಳಲು ಬ್ಯಾಂಕಾಕ್‌ಗೆ ಆಗಮಿಸಿರುವ ಸೈನಾ ನೆಹ್ವಾಲ್‌ ಮತ್ತು ಎಚ್‌.ಎಸ್‌. ಪ್ರಣಯ್‌ ಅವರಿಗೆ 3ನೇ ಪರೀಕ್ಷೆ ವೇಳೆ ಕೋವಿಡ್ ಪಾಸಿಟಿವ್‌ ದೃಢಪಟ್ಟಿದ್ದಾಗಿ ವರದಿಯಾಗಿತ್ತು. ಈ ಕಾರಣದಿಂದ ಸೈನಾ ಅವರ ಪತಿ ಪಾರುಪಳ್ಳಿ ಕಶ್ಯಪ್‌ ಅವರನ್ನೂ ಸಂಘಟಕರು ಕೂಟದಿಂದ ಹೊರಗಿರಿಸಿದ್ದಾರೆ ಎಂದು ತಿಳಿದು ಬಂದಿತ್ತು. ಇದೀಗ ಸೈನಾ ಮತ್ತು  ಪ್ರಣಯ್‌ ಅವರ ಪಾಸಿಟಿವ್‌ ವರದಿ ಸುಳ್ಳು ಎಂಬುದಾಗಿ ದೃಢಪಟ್ಟಿದೆ.

Advertisement

ವಿಶ್ವ ಬ್ಯಾಡ್ಮಿಂಟನ್‌ ಫೆಡರೇಶನ್‌ ಮೊದಲು ಇಂಥದೊಂದು ಆಘಾತಕಾರಿ ಸುದ್ದಿಯನ್ನು ಮಾಧ್ಯಮಗಳಿಗೆ ತಿಳಿಸಿತ್ತು. ಬಳಿಕ ಭಾರತೀಯ ಬ್ಯಾಡ್ಮಿಂಟನ್‌ ಅಸೋಸಿಯೇಶನ್‌, ಈ ಪಾಸಿಟಿವ್‌ ಸುದ್ದಿ ಸುಳ್ಳು ಎಂಬುದಾಗಿ ಸ್ಪಷ್ಟನೆ ನೀಡಿದೆ. ಸೈನಾಗೆ ಮೊದಲ ಸುತ್ತಿನ ವಾಕ್‌ ಓವರ್‌ ಲಭಿಸಿದ್ದು, ಅವರು ಬುಧವಾರ ಕಣಕ್ಕಿಳಿಯಲಿದ್ದಾರೆ ಎಂದು ತಿಳಿಸಿದೆ. ಇದೇ ವೇಳೆ ಸೈನಾ ಅವರ ಪತಿ ಪಿ. ಕಶ್ಯಪ್‌ ಕೂಡ ಬುಧವಾರ ಸ್ಪರ್ಧೆ ಆರಂಭಿಸಲಿದ್ದಾರೆ. ಸೆಲ್ಫ್ ಕ್ವಾರಂಟೈನ್‌ಗೆ ಸೂಚಿಸಲಾಗಿದ್ದ ಕಶ್ಯಪ್‌ ಅವರಿಗೂ ಮೊದಲ ಸುತ್ತಿನ ವಾಕ್‌ ಓವರ್‌ ನೀಡಲಾಗಿದೆ. ಕೋವಿಡ್ ನಿಯಮಾವಳಿ ಪ್ರಕಾರ ಸೈನಾ ಮತ್ತು ಪ್ರಣಯ್‌ ಬ್ಯಾಂಕಾಕ್‌ ಆಸ್ಪತ್ರೆಯಲ್ಲಿ 10 ದಿನಗಳ ಕ್ವಾರಂಟೈನ್‌ನಲ್ಲಿ ಇರಬೇಕಾಗುತ್ತದೆ ಎಂದು ವರದಿಯಾಗಿತ್ತು.

2ನೇ ಸಲ ಪಾಸಿಟಿವ್‌: ಸೈನಾ ನೆಹ್ವಾಲ್‌ ಮತ್ತು ಎಚ್‌.ಎಸ್‌. ಪ್ರಣಯ್‌ ಅವರಲ್ಲಿ ಕೋವಿಡ್ ಪಾಸಿಟಿವ್‌ ಕಂಡುಬಂದದ್ದು ಇದು ಎರಡನೇ ಸಲ ಎಂಬುದು ಆತಂಕಕ್ಕೆ ಕಾರಣವಾಗಿತ್ತು. ಇದಕ್ಕೂ ಮೊದಲು, ಕಳೆದ ತಿಂಗಳು ಶಟ್ಲರ್‌ ಗುರುಸಾಯಿದತ್‌ ಅವರ ವಿವಾಹದಲ್ಲಿ ಪಾಲ್ಗೊಂಡ ವೇಳೆ ಪಾಸಿಟಿವ್‌ ಕಂಡುಬಂದಿತ್ತು.

ಕೆ. ಶ್ರೀಕಾಂತ್‌ ಅಸಮಾಧಾನ: ಇದೇ ವೇಳೆ ಭಾರತದ ಸ್ಟಾರ್‌ ಆಟಗಾರ ಕೆ. ಶ್ರೀಕಾಂತ್‌ ಇಲ್ಲಿನ ಕೋವಿಡ್ ಟೆಸ್ಟ್‌ ಹಾಗೂ ವೈದ್ಯಕೀಯ ಸಿಬ್ಬಂದಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾನು 4 ಸಲ ಕೋವಿಡ್‌ ಪರೀಕ್ಷೆಗೆ ಒಳಗಾಗಿದ್ದು, ಏನೂ ಸ್ಪಷ್ಟವಾಗಿ ತಿಳಿಸಿಲ್ಲ. ಇಲ್ಲಿನ ವ್ಯವಸ್ಥೆಯೇ ಸರಿ ಇಲ್ಲ ಎಂದಿದ್ದಾರೆ. ಜತೆಗೆ ಮೂಗಿನಿಂದ ರಕ್ತಸ್ರಾವ ಆಗುತ್ತಿರುವ ಚಿತ್ರವೊಂದನ್ನು ಪೋಸ್ಟ್‌ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next