ಸೈದಾಪುರ: ಜಿಲ್ಲೆಯ ಸೈದಾಪುರ ಮತ್ತು ಗುರುಮಠಕಲ್ ವ್ಯಾಪ್ತಿಯ ಗಡಿ ಭಾಗದ ಗ್ರಾಮಗಳಲ್ಲಿ ತೆಲುಗು ಭಾಷೆ ಪ್ರಭಾವ ಮತ್ತು ಸರಕಾರದ ದಿವ್ಯ ನಿರ್ಲಕ್ಷ್ಯ ಇಲ್ಲಿನ ಕನ್ನಡಿಗರು ಅನಿವಾರ್ಯವಾಗಿ ತೆಲುಗು ಭಾಷೆ ಮತ್ತು ಪ್ರದೇಶ ಅವಲಂಬಿತರಾಗುವಂತೆ ಮಾಡಿದೆ.
ಕನ್ನಡ ಭಾಷೆ, ನೆಲ, ಜಲ ರಕ್ಷಣೆಗೆ ಮತ್ತು ಅಭಿವೃದ್ಧಿಗೆ ಬದ್ಧ ಎಂದು ಕನ್ನಡ ರಾಜ್ಯೋತ್ಸವ ದಿನದಂದು ಕೂಗಿ ಮರುದಿನವೇ ಅದನ್ನು ಮರೆತು ನಿರ್ಲಕ್ಷ್ಯ ಮಾಡುತ್ತಿರುವ ಪರಿಣಾಮ ಗಡಿ ಭಾಗದದಲ್ಲಿ ಕನ್ನಡ ಮತ್ತು ಕನ್ನಡಿಗರ ಪರಿಸ್ಥಿತಿ ಶೋಚನಿಯ ಸ್ಥಿತಿಗೆ ತಲುಪಿದೆ.
ಇದರಿಂದಾಗಿ ಗಡಿ ಭಾಗದ ಗ್ರಾಮಗಳ ಜನರು ದಿನನಿತ್ಯದ ವ್ಯಾಪಾರ ಮತ್ತು ಶಿಕ್ಷಣಕ್ಕೆ ತೆಲಂಗಾಣದ ನಾರಾಯಣಪೇಟ, ಮಕ್ತಲ್, ಮೆಹಬೂಬನಗರ ಸೇರಿದಂತೆ ಇತರ ನಗರಗಳ ಮೇಲೆ ಅವಲಂಬಿತರಾಗಿದ್ದಾರೆ. ಗಡಿ ಭಾಗದ ಗ್ರಾಮಗಳಲ್ಲಿ ಬಹುತೇಕ ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿಂದ ಶೈಕ್ಷಣಿಕ ಮಟ್ಟ ಕುಸಿಯುತ್ತಿದೆ. ಜಿಲ್ಲೆಯ ರಾಜಕಾರಣಿಗಳು ಮತ್ತು ಅಧಿಕಾರಿಗಳಿಗೆ ತಿಳಿದರೂ ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ.
ಇದರ ಪರಿಣಾಮ ತೆಲಂಗಾಣದ ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಇಲ್ಲಿಯ ಮಕ್ಕಳನ್ನು ಕಳುಹಿಸಲಾಗುತ್ತಿದೆ. ಗಡಿ ಭಾಗದ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ, ಶುದ್ಧ ನೀರು ಮತ್ತು ವಿದ್ಯುತ್ ಸೇರಿದಂತೆ ಅನೇಕ ಸಮಸ್ಯೆಗಳನ್ನು ಇಲ್ಲಿನ ಗ್ರಾಮಸ್ಥರು ಎದುರಿಸುತ್ತಿದ್ದಾರೆ.
ಗಡಿ ಗ್ರಾಮಗಳು ಅಭಿವೃದ್ಧಿಯಾಗಬೇಕಾದರೆ ಮೊದಲು ಕರ್ನಾಟಕ ಮತ್ತು ತೆಲಂಗಾಣ ಗಡಿ ವಿವಾದ ಬಗೆಹರಿಸಬೇಕು. ಇದರ ಬಗ್ಗೆ ರಾಜಕಾರಣಿಗಳು, ಅಧಿಕಾರಿಗಳು ಮತ್ತು ಕನ್ನಡ ಪರ ಹೋರಾಟಗಾರರು ಹೆಚ್ಚೆತ್ತುಕೊಳ್ಳುವುದು ಅನಿವಾರ್ಯವಾಗಿದೆ. ಸರ್ಕಾರ ಮುಂದಾಳತ್ವ ವಹಿಸಿ ಅತಿ ಶೀಘ್ರದಲ್ಲಿ ಸಮಸ್ಯೆ ಬಗೆಹರಿಸಬೇಕು ಎಂಬ ಆಗ್ರಹ ಕೇಳಿ ಬಂದಿದೆ.