ಸೈದಾಪುರ: ಪಟ್ಟಣದ ಒಳ ರಸ್ತೆಗಳಲ್ಲಿ ಗಂಟೆಗಟ್ಟಲೆ ನಿಲ್ಲುವ ಭಾರೀ ವಾಹನಗಳಿಂದ ಸಾರ್ವಜನಿಕರ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗುತ್ತಿದೆ.
ಸುತ್ತಲಿನ ಹತ್ತಾರು ಗ್ರಾಮಗಳ ಶೈಕ್ಷಣಿಕ, ವ್ಯವಹಾರಿಕ ಕೇಂದ್ರವಾದ ಸೈದಾಪುರ ಪಟ್ಟಣಕ್ಕೆ ರೈಲು ಸಂಪರ್ಕವೂ ಇದೆ. ಪ್ರತಿ ನಿತ್ಯ ವಾಹನಗಳಲ್ಲಿ ಜನರು ಸಂಚರಿಸುತ್ತಾರೆ. ಆದರೆ ಪಟ್ಟಣದ ರೈಲು ನಿಲ್ದಾಣದಿಂದ ಎಂಪಿಎಸ್ ಶಾಲೆ ಹಾಗೂ ಬಸವೇಶ್ವರ ವೃತ್ತದಿಂದ ಕನಕ ವೃತ್ತದ ಮಧ್ಯದಲ್ಲಿ ಸಾಮಾಗ್ರಿ ತುಂಬಿದ ವಾಹನಗಳ ನಿಲುಗಡೆಯಿಂದ ಸಂಚಾರ ಸಮಸ್ಯೆ ಎದುರಾಗಿ ಪಾದಚಾರಿಗಳು ತೊಂದರೆ ಅನುಭವಿಸುತ್ತಿದ್ದಾರೆ.
ಸೈದಾಪುರ ಪಟ್ಟಣದ ಇಕ್ಕಟ್ಟಾದ ಒಳ ರಸ್ತೆಗಳಲ್ಲಿ ಲಾರಿಗಳನ್ನು ನಿಲ್ಲಿಸಿ ಸಾಮಗ್ರಿ ಖಾಲಿ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಸುಗಮ ವಾಹನ ಸಂಚಾರ ಸಾಧ್ಯವಾಗದ ಆಟೋ, ಟಂಟಂ ಸೇರಿದಂತೆ ಹತ್ತಾರು ದ್ವಿಚಕ್ರ ವಾಹನಗಳು ಸೇರಿ ದಟ್ಟಣೆ ಹೆಚ್ಚಾಗುತ್ತದೆ. ವಾಹನಗಳು ಹಿಂದೆ-ಮುಂದೆ ಹೋಗದೆ ರಸ್ತೆ ಮಧ್ಯೆ ನಿಲ್ಲುತ್ತವೆ. ಇನ್ನು ವಾಹನ ದಟ್ಟಣೆ ನಿಯಂತ್ರಿಸಲು ಪೊಲೀಸರ ಕೊರತೆ ಇರುವುದರಿಂದ ಸಾರ್ವಜನಿಕರ ತೊಂದರೆ ಸರ್ವೆ ಸಾಮಾನ್ಯವಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಾದರೂ ಸಂಬಂಧಿಸಿದ ಅಧಿಕಾರಿಗಳು ಭಾರೀ ಗಾತ್ರದ ವಾಹನಗಳಿಗೆ ಪಟ್ಟಣದ ಒಳ ರಸ್ತೆಗಳಲ್ಲಿ ಸಂಚರಿಸಲು ಸಮಯ ನಿಗದಿ ಮಾಡಿ ಸಾರ್ವಜನಿಕ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂಬುದು ಜನಸಾಮಾನ್ಯರ ಒತ್ತಾಸೆಯಾಗಿದೆ.
ಪೊಲೀಸ್ ಇಲಾಖೆ ಕೇವಲ ದಂಡಕ್ಕೆ ಸೀಮಿತ
ಪಟ್ಟಣದಲ್ಲಿ ಹಲವೆಡೆ ವಾಹನ ಸಂಚಾರದಿಂದ ಸಾರ್ವಜನಿಕರು ತೊಂದರೆ ಅನುಭವಿಸಿತಿದ್ದರೆ ಇನ್ನೊಂದಡೆ ಸ್ಥಳೀಯ ಪೊಲೀಸ್ ಅಧಿಕಾರಿಗಳು ಪಟ್ಟಣಕ್ಕೆ ಆಗಮಿಸುವ ಮತ್ತು ಹೊರ ಹೋಗುವ ವಾಹನಗಳಿಗೆ ಬಾರಿ ದಂಡ ವಿಧಿಸುತ್ತಿರುವುದಕ್ಕೆ ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪಟ್ಟಣದಲ್ಲಿ ಸುಗಮ ವಾಹನ ಸಂಚಾರ ಮತ್ತು ಪಾದಚಾರಿಗಳ ಬಗ್ಗೆ ಗಮನಹರಿಸದ ಪೊಲೀಸ್ ಇಲಾಖೆ ಕಾರ್ಯವೈಖರಿ ಬಗ್ಗೆ ಪಟ್ಟಣದ ಪ್ರಜ್ಞಾವಂತ ನಾಗರಿಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಪಟ್ಟಣದಲ್ಲಿ ಪದೇ ಪದೇ ಉಂಟಾಗುವ ಸಂಚಾರ ದಟ್ಟಣೆಗೆ ಈ ಹಿಂದಿನ ಪೊಲೀಸ್ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡಿದ್ದರು. ಅಲ್ಲದೇ ವಾಹನ ಸವಾರರು ಮತ್ತು ಪಾದಚಾರಿಗಳಿಗೆ ಅನುಕೂಲ ಮಾಡಿಕೊಟ್ಟಿದರು. ಆದರೆ ಈಗಿನ ಅಧಿಕಾರಿಗಳು ಕೇವಲ ದಂಡ ವಸೂಲಿ ಮಾಡುವುದರಲ್ಲಿ ಮಗ್ನವಾಗಿರುವುದು ಬೇಸರದ ಸಂಗತಿಯಾಗಿದೆ. ಮುಂದಿನ ದಿನಗಳಲ್ಲಿ ಪೊಲೀಸ್ ಅಧಿಕಾರಿಗಳು ಈ ಸಮಸ್ಯೆಗೆ ಸೂಕ್ತ ಕ್ರಮ ಕೈಗೊಂಡು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು.
ಶರಣಗೌಡ ಕ್ಯಾತ್ನಾಳ
ಜೆಡಿಎಸ್ ಯುವ ಮುಖಂಡ ಸೈದಾಪುರ