Advertisement

ಜೀರ್ಣೋದ್ಧಾರಕ್ಕಾಗಿ ಕಾದಿದೆ ಪುಣ್ಯ ಕ್ಷೇತ್ರ

10:58 AM Jul 25, 2019 | Naveen |

ಭೀಮಣ್ಣ ವಡವಟ್ಟ
ಸೈದಾಪುರ:
ಎಷ್ಟೋ ಪ್ರಾಚೀನ ಪುಣ್ಯಕ್ಷೇತ್ರಗಳು, ತಪೋಭೂಮಿಗಳು ನಿರ್ವಹಣೆ ಕೊರತೆಯಿಂದ ಹಾಳಾಗುತ್ತಿವೆ. ಬೋರಬಂಡಾ ಗ್ರಾಮದ ಹೊರ ವಲಯದಲ್ಲಿರುವ ಸಿದ್ಧಲಿಂಗ ಸ್ವಾಮೀಜಿ ತಪೋಗೈದ ಸ್ಥಳ ಹಾಗೂ ದಾಸೋಹ ಕೇಂದ್ರ ಸಂಪೂರ್ಣ ಶಿಥಿಲಗೊಂಡಿದೆ.

Advertisement

ಪ್ರಥಮ ಸಿದ್ಧಲಿಂಗ ಸ್ವಾಮೀಜಿ ಸುದೀರ್ಘ‌ 12 ವರ್ಷಗಳ ಕಾಲ ತಪಸ್ಸನ್ನಾಚರಿಸಿದ ಈ ಕ್ಷೇತ್ರ ಹಾಳು ಬಿದ್ದಿದೆ. ಸುಮಾರು ಮೂರು ಶತಮಾನಗಳ ಹಿಂದೆಯೇ ಗಿರಿನಾಡಿನ ಜನತೆಗೆ ಜ್ಞಾನದಾಸೋಹ-ಅನ್ನದಾಸೋಹಗೈದ ಪುಣ್ಯಕ್ಷೇತ್ರವನ್ನು ಪ್ರವಾಸಿ ತಾಣವನ್ನಾಗಿ ಮಾರ್ಪಡಿಸಬೇಕೆಂಬುದು ಭಕ್ತರ ಬಯಕೆಯಾಗಿದೆ.

ಬತ್ತದ ಬಾವಿ: ಬೋರಬಂಡಾ ಗ್ರಾಮದಲ್ಲಿ ಕಳೆದ ನಾಲ್ಕು ಶತಮಾನಗಳ ಹಿಂದೆ ನಿರ್ಮಿಸಲಾದ ಐತಿಹಾಸಿಕ ಬಾವಿ ಯೊಂದಿದ್ದು, ಸುಮಾರು ಎಂಟು ಗುಂಟೆ ವ್ಯಾಪ್ತಿಯಲ್ಲಿ ಇದನ್ನು ನಿರ್ಮಿಸಲಾಗಿದೆ.ಇದು ಬೃಹದಾಕಾರ ಕಲ್ಲುಗಳಿಂದ ನಿರ್ಮಿಸಲಾಗಿದೆ. ಸುಮಾರು 50 ಅಡಿಗಳಷ್ಟು ಆಳ ಹೊಂದಿದ್ದು, ಎಷ್ಟೇ ಬರ ಆವರಿಸಿದರೂ ಬತ್ತಿದ ಉದಾಹರಣೆ ಇಲ್ಲವೇ ಇಲ್ಲ ಎನ್ನುತ್ತಾರೆ ಸ್ಥಳೀಯರು.

ಇತಿಹಾಸ: ಬೋರಬಂಡಾದ ಗುಡ್ಡದ ಬಂಡೆಯೊಂದರ ಕೆಳಗೆ ಅನುಷ್ಠಾನ ಕುಳಿತಿದ್ದ ಸಿದ್ಧಲಿಂಗ ಸ್ವಾಮಿಗಳನ್ನು ಕಾಕಲವಾರ ಸಂಸ್ಥಾನದ ಒಡೆಯ ಲಕ್ಷ್ಮಣಪ್ಪ ದೊರೆ ಭೇಟಿ ಮಾಡಿ ಸಂತಾನ ಭಾಗ್ಯ ಕೊಡುವಂತೆ ಬೇಡಿಕೊಳ್ಳುತ್ತಾನೆ. ಶ್ರೀಗಳ ಆಶೀರ್ವಾದದಂತೆ ರಾಜ ದಂಪತಿಗೆ ಮಕ್ಕಳಾಗುತ್ತವೆ. ಇದರಿಂದ ಸಂತಸಗೊಂಡ ಲಕ್ಷ್ಮಣಪ್ಪ ದೊರೆ ಬೋರಬಂಡಾ ಗುಡ್ಡಗಾಡಿನ ಸುಮಾರು 1600 ಎಕರೆ ಭೂ ಪ್ರದೇಶವನ್ನು ಶ್ರೀ ಮಠಕ್ಕೆ ದಾನವಾಗಿ ಕೊಡುತ್ತಾನೆ. ಆದರೆ ನಂತರದಲ್ಲಿ ಈ ಭೂ ಪ್ರದೇಶ ಸ್ಥಳೀಯ ಜನರ ಪಾಲಾಗಿದ್ದು, ಇದೀಗ ಅಲ್ಪಸ್ವಲ್ಪ ಮಾತ್ರ ಉಳಿದು ಕೊಂಡಿದೆ.

ಬೋರಬಂಡಾ ನಮ್ಮ ಶ್ರೀ ಮಠದ ಸಿದ್ಧಲಿಂಗ ಸ್ವಾಮಿಗಳು ಅನುಷ್ಠಾನ ಮಾಡಿರುವ ಸ್ಥಳವಾಗಿದ್ದು, ಅಲ್ಲಿ ನಿರ್ಮಿಸಲಾದ ಬಾವಿ ಐತಿಹಾಸಿಕ ಸಂಪತ್ತು. ಪೂಜ್ಯರ ಅನುಷ್ಠಾನ ಸ್ಥಳ, ಅನ್ನದಾಸೋಹ ಕೇಂದ್ರ ಅಭಿವೃದ್ಧಿ ಪಡಿಸುವ ಮೂಲಕ ಪ್ರವಾಸಿಗರಿಗೆ, ಭಕ್ತರಿಗೆ ಅನುಲಕೂಲವಾಗಬೇಕು. ಇದಕ್ಕೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಹಕಾರ ಅತ್ಯವಶ್ಯ.
ಪಂಚಮ ಸಿದ್ಧಲಿಂಗ ಸ್ವಾಮೀಜಿ, ವಿರಕ್ತಮಠ

Advertisement

ಯಾದಗಿರಿಯಿಂದ ಗುರುಮಠಕಲ್ ಮಾರ್ಗ ನಡುವೆ ಇರುವ ಬೋರಬಂಡಾದ ಸಿದ್ಧಲಿಂಗ ಸ್ವಾಮಿಗಳ ತಪೋಸ್ಥಳ ಅಭಿವೃದ್ಧಿ ಪಡಿಸುವ ಜವಾಬ್ದಾರಿ ಸ್ಥಳೀಯ ಗುರುಮಠಕಲ್ ಶಾಸಕ ನಾಗನಗೌಡ ಕಂದಕೂರ ಅವರ ಮೇಲಿದೆ. ಹೆದ್ದಾರಿ ಪಕ್ಕದಲ್ಲೇ ಇರುವ ಈ ಪುಣ್ಯಸ್ಥಳ ಅಭಿವೃದ್ಧಿ ಪಡಿಸಿದರೆ ಪ್ರಯಾಣಿಕರಿಗೆ, ಭಕ್ತರಿಗೆ, ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next