Advertisement

ಬಹುಗ್ರಾಮ ಕುಡಿಯುವ ನೀರಿನ ಯೋಜನೆ ವಿಫಲ

10:58 AM Jun 22, 2019 | Naveen |

ಭೀಮಣ್ಣ ಬಿ. ವಡವಟ್
ಸೈದಾಪುರ:
ಗುರುಮಠಕಲ್ ತಾಲೂಕಿನ ಚಂಡರಕಿ ಗ್ರಾಮಕ್ಕೆ ಆಗಮಿಸುವ ಮುಂಖ್ಯಮಂತ್ರಿ ಕುಮಾರಸ್ವಾಮಿ ಅವರು ಬಹು ದಿನಗಳಿಂದ ನೆನೆಗುದಿಗೆ ಬಿದ್ದ ಆನೂರ ಕೆ ಮತ್ತು ಗೊಂದಡಗಿಯ ರಾಜೀವ ಗಾಂಧಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಬಗ್ಗೆ ಗಮನ ಹರಿಸಿ 18 ಗ್ರಾಮಗಳಿಗೆ ನೀರು ಒದಗಿಸುತ್ತಾರೆ ಎಂಬ ಪ್ರಶ್ನೆ ಸ್ಥಳೀಯರಲ್ಲಿ ಕಾಡುತ್ತಿದೆ.

Advertisement

ಸೈದಾಪುರ ಸೇರಿದಂತೆ ಹಲವು ಗ್ರಾಮಗಳ ಪಕ್ಕದಲ್ಲೇ ಭಿಮಾ ನದಿ ಇದ್ದರೂ ಕುಡಿಯುವ ನೀರಿಗಾಗಿ ಜನ ಪರದಾಡುವಂತಹ ದುಸ್ಥಿತಿ ನಿರ್ಮಾಣವಾಗಿದೆ. ಸೈದಾಪುರ ಸಮೀಪದ ಭೀಮಾ ನದಿ ತೀರದ ಜನತೆಗೆ ಕುಡಿಯುವ ನೀರನ್ನು ಸರಬರಾಜು ಮಾಡವ ಉದ್ದೇಶದಿಂದ ರಾಜೀವ ಗಾಂಧಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಾರಿ ಮಾಡಲಾಯಿತು.

ಇದಕ್ಕಾಗಿ ಒಂದಕ್ಕೆ ಸುಮಾರು 3.25 ಕೋಟಿಯಂತೆ ಆನೂರ ಕೆ ಹಾಗೂ ಗೊಂದಡಗಿಯಲ್ಲಿನ ಪ್ರತ್ಯೇಕ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಆದರೂ ಉದ್ಘಾಟನೆ ಮುಂಚೆ ಅದು ಹಾಳಾಗಿ ಸುಮಾರು 6.50 ಕೋಟಿ ರೂಪಾಯಿ ಸರ್ಕಾರದ ಹಣ ನೀರಿಗೆ ಎಸೆದಂತಾಗಿದೆ.

ಆನೂರ ಕೆ ಕುಡಿಯುವ ನೀರಿನ ಯೋಜನೆಯಿಂದ 9 ಗ್ರಾಮ ಹಾಗೂ ಗೊಂದಡಗಿಯ ಯೋಜನೆಯಿಂದ 9 ಗ್ರಾಮಗಳು ಸೇರಿದಂತೆ ಸುತ್ತಲಿನ 18 ಗ್ರಾಮಗಳಿಗೆ ಶಾಸ್ವತ ನೀರುಣಿಸುವುದು ರಾಜೀವ ಗಾಂಧಿ ಕುಡಿಯುವ ನೀರು ಸರಬರಾಜು ಯೋಜನೆ ಉದ್ದೇಶವಾಗಿತ್ತು. ಆದರೆ ಸುಮಾರು ಐದಾರು ವರ್ಷಗಳಾದರೂ ಈವರೆಗೆ ಜನತೆಗೆ ನೀರು ತಲುಪಿಲ್ಲ. ಬದಲಾಗಿ ನೀರು ಸರಬರಾಜಿಗೆ ಅಳವಡಿಸಲಾದ ಪೈಪ್‌ಗ್ಳು ಒಡೆದಿವೆ. ಹೀಗಾಗಿ ನೂತನ ಪೈಪ್‌ಲೈನ್‌ ವ್ಯವಸ್ಥೆ ಕಲ್ಪಿಸುವವರೆಗೂ ನೀರು ಸರಬರಾಜು ಸಾಧ್ಯವಿಲ್ಲ. ರಾಜೀವ ಗಾಂಧಿ ಬಹುಗ್ರಾಮ ಕುಡಿಯುವ ನೀರು ಯೋಜನೆ ಅಡಿಯಲ್ಲಿ ಸಾವೂರ, ಹೆಗ್ಗಣಗೇರಾ, ಕ್ಯಾತ್ನಾಳ, ಇಂದಿರಾ ನಗರ, ಸೈದಾಪುರ, ರಾಚನಹಳ್ಳಿ, ರಾಂಪೂರು, ಗೊಂದಡಗಿ, ಮುನಗಾಲ, ಭೀಮನಹಳ್ಳಿ, ಕೊಂಡಾಪುರ, ಗೂಡೂರು, ಬಾಡಿಯಾಲ, ಶೆಟ್ಟಿಹಳ್ಳಿ, ಕಡೇಚೂರ, ಮಾವಿನಹಳ್ಳಿ ಸೆರಿದಂತೆ ಒಟ್ಟು 18 ಗ್ರಾಮಗಳಿಗೆ ಶುದ್ಧ ನೀರುಣಿಸಲು ಉದ್ದೇಶಿಸಲಾಗಿತ್ತು. ಆದರೆ ಯೋಜನೆ ವಿಫಲತೆಯಿಂದ ಈ ಎಲ್ಲಾ ಗ್ರಾಮಗಳಲ್ಲಿ ನೀರಿನ ಪೂರೈಕೆ ಅಸಮರ್ಪಕವಾಗಿದೆ. ಈ ಯೋಜನೆಯಡಿ ವಿವಿಧ ಗ್ರಾಮಗಳಲ್ಲಿ ನಿರ್ಮಿಸಲಾದ ನೀರಿನ ಟ್ಯಾಂಕಗಳು ನೀರಿಲ್ಲದೆ ಉಪಯೋಗಕ್ಕೆ ಬಾರದಂತಾಗಿವೆ.

ಜಿಲ್ಲೆಗೆ ಆಗಮಿಸುವ ನಾಡಿನ ಮುಖ್ಯಮಂತ್ರಿ ಸೈದಾಪುರ ಸಮೀಪದ ಆನೂರ ಬಿ ಮತ್ತು ಗೊಂದಡಗಿ ಬಹುಗ್ರಾಮ ಕುಡಿಯುವ ನೀರು ಯೋಜನೆ ನಿರ್ಲಕ್ಷ್ಯಕ್ಕೆ ಕಾರಣರಾದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಜತೆಗೆ ಶಿಘ್ರದಲ್ಲಿ ಈ ಯೋಜನೆ ಪ್ರಾರಂಭಿಸಿ 18 ಗ್ರಾಮಗಳಿಗೆ ನೀರು ಒದಗಿಸಬೇಕು.
• ಶರಣು ಬಿ. ಗದ್ದುಗೆ,
ಉ.ಕ ಕರವೇ ಅಧ್ಯಕ್ಷ

Advertisement

ರಾಜೀವ ಗಾಂಧಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮೂಲಕ ಸರಕಾರದ ಹಣವನ್ನು ಲೂಟಿ ಮಾಡಲಾಗಿದೆ. ಜನತೆಗೆ ನೀರುಣಿಸುವ ಮೊದಲೇ ಹಾಳಾದ ಇಲ್ಲಿನ ಪೈಪ್‌ಲೈನ್‌ ವ್ಯವಸ್ಥೆ ಕಳಪೆ ಕಾಮಗಾರಿಗೆ ಸೂಕ್ತ ನಿದರ್ಶನವಾಗಿದೆ. ಸುಮಾರು ಐದಾರು ವರ್ಷಗಳಾದರೂ ಜನತೆಗೆ ಶಾಸ್ವತ ಕುಡಿಯುವ ನೀರು ಇಲ್ಲದಂತಾಗಿರುವುದು ಬೇಸರದ ಸಂಗತಿಯಾಗಿದೆ.
• ಸಿದ್ದಪ್ಪ ಪೂಜಾರಿ,
ಸ್ವಾಮಿ ವಿವೇಕಾನಂದ ತರುಣ ಸಂಘದ ಬದ್ದೇಪಲ್ಲಿ ಉಪಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next