ಸೈದಾಪುರ: ವಿವಾಹ ಹೆಸರಲ್ಲಿ ನಡೆಯುವ ದುಂದು ವೆಚ್ಚ ನಿಯಂತ್ರಣಕ್ಕೆ ಸಾಮೂಹಿಕ ವಿವಾಹಗಳು ಪೂರಕವಾಗಿವೆ ಎಂದು ನೆರಡಗಂ ಪಶ್ಚಿಮಾದ್ರಿ ಸಂಸ್ಥಾನ ವಿರಕ್ತ ಮಠದ ಪೀಠಾಧಿಪತಿ ಪಂಚಮ ಸಿದ್ಧಲಿಂಗ ಸ್ವಾಮೀಜಿ ತಿಳಿಸಿದರು.
ಸಮೀಪದ ನೆರಡಗಂ ಪಶ್ಚಿಮಾದ್ರಿ ಸಂಸ್ಥಾನ ವಿರಕ್ತ ಮಠದಲ್ಲಿ ಬಸವ ಜಯಂತಿ ಹಾಗೂ ಚತುರ್ಥ ಸಿದ್ದಲಿಂಗ ಸ್ವಾಮಿಗಳ ಪುಣ್ಯತಿಥಿಯ ದಶಮಾನೋತ್ಸವ ಕಾರ್ಯಕ್ರಮ ನಿಮಿತ್ತ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ಮದುವೆ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಸಾಲ ಮಾಡಿ ಹಣ ಖರ್ಚು ಮಾಡಲಾಗುತ್ತದೆ. ಆದರೆ ಇಂತಹ ಸಾಮೂಹಿಕ ವಿವಾಹದಲ್ಲಿ ಮದುವೆಯಾಗುವುದರಿಂದ ತಮ್ಮ ಮೇಲೆ ಬೀಳುವ ಆರ್ಥಿಕ ಹೊರೆ ಕಡಿಮೆಯಾಗುತ್ತದೆ ಎಂದರು.
ದಾಂಪತ್ಯ ಜೀವನಕ್ಕೆ ಕಾಲಿಟ್ಟ ನೂತನ ದಂಪತಿಗಳು ಕಷ್ಟಸುಖಗಳನ್ನು ಸಮನಾಗಿ ಸ್ವೀಕರಿಸಬೇಕು. ಪತಿ-ಪತ್ನಿ ಒಗ್ಗೂಡಿ ಸಿಹಿ-ಕಹಿಯ ಸಾಮರಸ್ಯ ಜೀವನ ನಡೆಸಬೇಕು. ಜತೆಗೆ ದಂಪತಿಗಳು ಆರತಿಗೊಂದು ಕೀರ್ತಿಗೊಂದು ಎಂಬಂತೆ ಎರಡು ಮಕ್ಕಳಿಗೆ ಸಾಕು ಮಾಡಬೇಕು ಎಂದು ಸಲಹೆ ನೀಡಿದರು.
ಮೇ 6ರಂದು ಶ್ರೀ ಮಠದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿದ್ದು, ಭಕ್ತರು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿದರು.
ಕಾರ್ಯಕ್ರಮದಲ್ಲಿ ಶಂಭುಲಿಂಗ ಸ್ವಾಮಿಗಳು ಕಲ್ಲೂರ, ಕ್ಷೀರಲಿಂಗ ಸ್ವಾಮಿಗಳು ಚೇಗುಂಟಾ, ಲಿಂಗಪ್ಪ ತಾತಾ ಗುರ‌್ಲಪಲ್ಲಿ, ಶಾಸಕ ಚಿಟ್ಟಂ ರಾಮಮೋಹನರೆಡ್ಡಿ, ಮಾರ್ಕೆಟ್ ಯಾರ್ಡ ಅಧ್ಯಕ್ಷ ಲಕ್ಷ್ಮೀಗೌಡ, ಕೊಂಡಯ್ಯ, ದೇವರ ಮಲ್ಲಪ್ಪ, ಜಗನಾಥರೆಡ್ಡಿ ಸೇರಿದಂತೆ ಶ್ರೀ ಮಠದ ಭಕ್ತಾದಿಗಳು ಇದ್ದರು.