Advertisement

ಮೊಸಳೆ ದಾಳಿಗೆ ಕುರಿಗಾಹಿ ಬಲಿ

10:15 AM Apr 29, 2019 | Naveen |

ಸೈದಾಪುರ: ಎರಡು ಮೊಸಳೆ ದಾಳಿಗೆ ಕುರಿಗಾಹಿಯೊಬ್ಬ ಮೃತಪಟ್ಟ ಘಟನೆ ಸಮೀಪದ ಗುಡೂರು ಭೀಮಾ ನದಿ ದಡದಲ್ಲಿ ರವಿವಾರ ಮಧ್ಯಾಹ್ನ ಸಂಭವಿಸಿದ್ದು, ಗ್ರಾಮಸ್ಥರಲ್ಲಿ ಆತಂಕ ಎದುರಾಗಿದೆ.

Advertisement

ಗುಡೂರಿನ ಬಸವಲಿಂಗಪ್ಪ (55) ಎಂಬಾತ ಮೃತಪಟ್ಟ ವ್ಯಕ್ತಿ. ಬಸವಲಿಂಗಪ್ಪ ದಿನನಿತ್ಯದಂತೆ ತನ್ನ 50 ಕುರಿಗಳನ್ನು ಮೇಯಿಸಲು ನದಿ ತೀರದ ಪ್ರದೇಶಕ್ಕೆ ಹೋಗಿದ್ದ. ರವಿವಾರ ಮಧ್ಯಾಹ್ನದ ವೇಳೆಗೆ ಕುರಿಗಳಿಗೆ ನೀರು ಕುಡಿಸಲು ಹೋದಾಗ ಈ ಘಟನೆ ಸಂಭವಿಸಿದೆ.

ಕುರಿಗಳಿಗೆ ನೀರುಣಿಸಿ ನಂತರ ಆತ ತನ್ನ ಜತೆಗಾರನೊಂದಿಗೆ ನದಿ ದಂಡೆಯಲ್ಲಿ ಕುಳಿತು ಊಟ ಮಾಡಿದ. ನಂತರ ನೀರು ಕುಡಿಯಲು ನದಿಗೆ ಇಳಿದ ವೇಳೆ ಎರಡು ಮೊಸಳೆಗಳು ಏಕಾಏಕಿ ದಾಳಿ ಮಾಡಿ ಆತನನ್ನು ಎಳೆದೋಯ್ದವು. ನಂತರ ಆತ ಮೊಸಳೆ ಜತೆ ಸತತ 10-15 ನಿಮಿಷ ಕಾದಾಡಿ ಪ್ರಾಣ ಉಳಿಸಿಕೊಳ್ಳಲು ಯತ್ನಿಸಿದ. ಇದನ್ನು ನೋಡಿದ ಆತನ ಇನ್ನೊಬ್ಬ ಸಹಚರ ವೃದ್ಧನಾದ ಪರಿಣಾಮ ಸಹಾಯ ಮಾಡಲು ಸಾಧ್ಯವಾಗಲಿಲ್ಲ. ಆತನ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಗ್ರಾಮಸ್ಥರು ಮತ್ತು ಸ್ಥಳೀಯ ಮೀನುಗಾರರು ಮೊಸಳೆಗಳಿಂದ ವ್ಯಕ್ತಿಯನ್ನು ಉಳಿಸಿಕೊಳ್ಳಲು ಯತ್ನಿಸಿದರು. ಅಷ್ಟರಲ್ಲಿಯೇ ಆತನ ಎಡಗೈ ಮತ್ತು ಬಲಗಾಲನ್ನು ಮೊಸಳೆಗಳು ತಿಂದಿದ್ದವು. ಪರಿಣಾಮ ಮೀನುಗಾರರು ಮಾಡಿದ ಪ್ರಯತ್ನ ಪ್ರಯೋಜವಾಗದೇ ಆತ ಮೃತಪಟ್ಟ ಎನ್ನಲಾಗಿದೆ.

ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಸೈದಾಪುರ ಠಾಣೆ ಪೊಲೀಸರು ಮಾಹಿತಿ ಸಂಗ್ರಹಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ನದಿಯಲ್ಲಿನ ಕೆಲವು ತಗ್ಗು ಭಾಗದಲ್ಲಿ ನೀರು ನಿಂತಿದೆ. ಅದೇ ನೀರು ಕುಡಿಯಲು ದನಕರುಗಳು ಮತ್ತು ಕುರಿಗಳು ನದಿಗೆ ತೆರಳುತ್ತವೆ. ಭೀಮಾನದಿಯಲ್ಲಿ ನೀರು ಕಡಿಮೆಯಾದ ಪರಿಣಾಮ ಹಲವು ಬಾರಿ ಮೊಸಳೆಗಳು ಗ್ರಾಮಸ್ಥರಿಗೆ ಕಾಣಿಸಿದ್ದವು ಎನ್ನಲಾಗಿದೆ. ಈ ವಿಷಯವನ್ನು ಅನೇಕ ಬಾರಿ ಅಧಿಕಾರಿಗಳಿಗೆ ತಿಳಿಸಿದ್ದರು. ಆದರೆ ಅಧಿಕಾರಿಗಳು ಯಾವುದೆ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ನಾಲ್ಕೈದು ಮೊಸಳೆಗಳಿರುವ ಶಂಕೆ
ಗುಡೂರು ಸಮೀಪದ ಭೀಮಾ ನದಿ ದಡದಲ್ಲಿ ಇಂದಿಗೂ ನಾಲ್ಕರಿಂದ ಐದು ಮೊಸಳೆಗಳು ಇವೆ ಎಂದು ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ. ಹಾಗಾಗಾಇ ಅರಣ್ಯಾಧಿಕಾರಿಗು ಎಚ್ಚೆತ್ತು ಅವುಗಳನ್ನು ನೀರು ಇರುವ ಕಡೆ ಸಾಗಿಸಬೇಕು ಹಾಗೂ ಇಲ್ಲಿ ಸೂಚನಾ ಫಲಕ ಹಾಕಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Advertisement

ನಾನು ಮತ್ತು ಬಸವಲಿಂಗಪ್ಪ ದಿನನಿತ್ಯ ಕುರಿಗಳನ್ನು ಮೇಯಿಸಲು ಹೋಗುತ್ತೇವೆ. ಎಂದಿನಂತೆ ರವಿವಾರ ಮಧ್ಯಾಹ್ನದ ವೇಳೆಗೆ ಕುರಿಗಳಿಗೆ ನೀರು ಕುಡಿಸಲು ಮತ್ತು ನಾವಿಬ್ಬರೂ ಊಟ ಮಾಡಲು ನದಿ ದಂಡೆಗೆ ಬಂದಿದ್ದೆವು. ಕುರಿಗಳು ನೀರು ಕುಡಿದು ದಡಕ್ಕೆ ಹೋದವು. ನಂತರ ನಾವು ಊಟ ಮುಗಿಸಿದೇವು. ಮೊದಲು ಬಸವಲಿಂಗಪ್ಪ ನೀರು ಕುಡಿಯಲು ತೆರಳಿದ. ಆ ವೇಳೆಗೆ ಏಕಕಾಲಕ್ಕೆ ಎರಡು ಮೊಸಳೆಗಳು ಅತನನ್ನು ಎಳೆದುಕೊಂಡು ಹೋದವು. ಇದರಿಂದ ಭಯಭೀತನಾದ ನಾನು ಗ್ರಾಮಸ್ಥರನ್ನು ಕರೆತರಲು ಗ್ರಾಮಕ್ಕೆ ತರಳಿದೆ. ನಾವು ಎಷ್ಟು ಪ್ರಯತ್ನಿಸಿದರೂ ಬಸವಲಿಂಗಪ್ಪನ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ.
•ನಿಂಗಪ್ಪ ಗೂಡೂರು,
ಮೃತ ಬಸವಲಿಂಗಪ್ಪನ ಸಹಚರ

ಈ ಭಾಗದಲ್ಲಿ ಮೊಸಳೆ ಇರುವುದು ನಮ್ಮ ಗಮನಕ್ಕೆ ಬಂದಿಲ್ಲ. ಈ ಘಟನೆ ಬಗ್ಗೆ ಮಾಹಿತಿ ನೀಡುವಂತೆ ಸ್ಥಳೀಯ ಅಧಿಕಾರಿಗೆ ಸೂಚಿಸಿದ್ದೇನೆ. ಮಾಹಿತಿ ಬಂದ ನಂತರ ಮೃತನ ಕುಟುಂಬಕ್ಕೆ ಸರಕಾರದಿಂದ ಸೂಕ್ತ ಪರಿಹಾರ ನೀಡಲು ಪ್ರಯತ್ನಿಸುತ್ತೇವೆ. ಅಲ್ಲದೇ ಅಲ್ಲಿರುವ ಮೊಸಳೆಗಳನ್ನು ಸ್ಥಳಾಂತರ ಮಾಡಲು ಕ್ರಮ ತೆಗೆದುಕೊಳ್ಳುತ್ತೇವೆ.
•ಬಸವರಾಜ,
ತಾಲೂಕು ಅರಣ್ಯ ಅಧಿಕಾರಿ ಯಾದಗಿರಿ

Advertisement

Udayavani is now on Telegram. Click here to join our channel and stay updated with the latest news.

Next