ಸೈದಾಪುರ: ಪ್ರಗತಿಗಾಗಿ ಮತ ನೀಡಿದ ಗುರುಮಠಕಲ್ ಮತಕ್ಷೇತ್ರದ ಜನರ ನಿರೀಕ್ಷೆಯಂತೆ ಸಮಗ್ರ ಅಭಿವೃದ್ಧಿಯೇ ತಮ್ಮ ಗುರಿ ಎಂದು ಶಾಸಕ ನಾಗನಗೌಡ ಕಂದಕೂರ ಹೇಳಿದರು.
ಕಡೇಚೂರಿನಲ್ಲಿ ಹಮ್ಮಿಕೊಂಡಿದ್ದ 2019-20ನೇ ಸಾಲಿನ ಕೆಕೆಆರ್‌ಡಿಬಿ ಮೈಕ್ರೋ(ನಾನ್ ಸೋಸಿಯಲ್) ಯೋಜನೆ ಅಡಿ 1 ಕೋಟಿ ರೂ. ವೆಚ್ಚದ ಕಣೇಕಲ್-ಕಡೇಚೂರು ನಡುವಿನ 1.3 ಕಿಮೀ ಹಾಗೂ ಯಾದಗಿರಿ-ರಾಯಚೂರು ಮುಖ್ಯ ರಸ್ತೆಯಿಂದ ಕಡೇಚೂರ ವರೆಗಿನ 75 ಲಕ್ಷ ರೂ.ವೆಚ್ಚದ ರಸ್ತೆ ಡಾಂಬರೀಕರಣ ಕಾಮಗಾರಿಗೆ ಬುಧವಾರ ಅಡಿಗಲ್ಲು ನೆರವೇರಿಸಿ ಅವರು ಮಾತನಾಡಿದರು.
ತಾವು ಶಾಸಕರಾಗುತ್ತಿದ್ದಂತೆ ರಾಜ್ಯದಲ್ಲಿ ಕುಮಾರಸ್ವಾಮಿ ಮುಖ್ಯಂತ್ರಿಯಾಗಿದ್ದು ಇಲ್ಲಿನ ಜನರ ಪುಣ್ಯ ಎಂದು ಭಾವಿಸುತ್ತೇನೆ. ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ಇತರ ಎಲ್ಲ ಕ್ಷೇತ್ರಗಳಿಗಿಂತಲೂ ಗುರುಮಠಕಲ್ ಕ್ಷೇತ್ರಕ್ಕೆ ಅತ್ಯಧಿ ಕ ಅನುದಾನ ನೀಡಿದ್ದಾರೆ. ಕ್ಷೇತ್ರದ ಸುಮಾರು 170 ಗ್ರಾಮಗಳಲ್ಲೂ ಪ್ರಗತಿ ಕಾರ್ಯಗಳು ಭರದಿಂದ ಸಾಗಿವೆ ಎಂದು ಹೇಳಿದರು.
ತಮಗೆ ಅಧಿ ಕಾರ ಸಿಕ್ಕಾಗೆಲ್ಲ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದೇನೆ. ಈ ಹಿಂದೆ ಜಿಪಂ ಸದಸ್ಯ, ಎಂಪಿಎಂಸಿ ಅಧ್ಯಕ್ಷರಾಗಿ ಜನಸಾಮಾನ್ಯರ ಸೇವೆ ಸಲ್ಲಿಸಿದ್ದೇನೆ. ಗುರುಮಠಕಲ್ ಮತಕ್ಷೇತ್ರದಲ್ಲಿಯೇ ಹುಟ್ಟಿ ಬೆಳೆದು ಶಾಸಕರಾದ ತಾವು, ಕ್ಷೇತ್ರದ ಪ್ರತಿ ಗ್ರಾಮೀಣ ಪ್ರದೇಶಗಳಿಗೂ ಮೂಲಭೂತ ಸೌಲಭ್ಯ ಕಲ್ಪಿಸಲಾಗುವುದು ಎಂದು ಹೇಳಿದರು.
ಕಡೇಚೂರಿನಲ್ಲಿ ಬಾಬುಜಗಜೀವನರಾಮ ಭವನಕ್ಕೆ 5 ಲಕ್ಷ ರೂ., ಬಸ್ ಶೆಲ್ಟರ್ ನಿರ್ಮಾಣ, ಮೌಲಾಲಿ ಸಾಹೇಬಸಾಬ ಅವರ ಮನೆ ವರೆಗೆ ಸಿಸಿ ರಸ್ತೆ ನಿರ್ಮಾಣ, ಹರಿಜನವಾಡದಲ್ಲಿ ಸಿಸಿ ರಸ್ತೆಗೆ 22 ಲಕ್ಷ ರೂ., ದುಪ್ಪಲ್ಲಿ ಹರಿಜನವಾಡದಲ್ಲಿ ಸಿಸಿ ರಸ್ತೆಗೆ 15 ಲಕ್ಷ ರೂ., ಬದ್ದೇಪಲ್ಲಿ ತಾಂಡಾದಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ 15 ಲಕ್ಷ ರೂ. ಮಂಜೂರಾಗಿದೆ. ಮಾರ್ಚ್ ಅಂತ್ಯದ ವೇಳೆಗೆ ಕಾಮಗಾರಿ ಮುಗಿಸುವಂತೆ ಸಂಬಂ ಧಿಸಿದ ಗುತ್ತಿಗೆದಾರ ಹಾಗೂ ಅಧಿಕಾರಿಗಳಿಗೆ ಸೂಚಿಸಿದರು.
ಜೆಡಿಎಸ್ ಹಿರಿಯ ಮುಖಂಡರಾದ ಬೂದಣ್ಣಗೌಡ ಯಡ್ಡಳ್ಳಿ, ಭೀಮರಾಯ ಗುತ್ತೇದಾರ ಬದ್ದೇಪಲ್ಲಿ, ಎಇಇ ಸಿ.ಎಂ. ಪಾಟೀಲ, ಆರ್.ಎಸ್. ಪಾಟೀಲ ಸಂಗವಾರ, ಮಾಜಿ ತಾಪಂ ಸದಸ್ಯೆ ಹಂಪಮ್ಮ ಸಜ್ಜನ, ಸೋಮನಾಥ ಅತ್ತುತ್ತಿ, ಗ್ರಾಪಂ ಅಧ್ಯಕ್ಷೆ ಭೀರಪ್ಪ ಪೂಜಾರಿ, ವೆಂಕಟರೆಡ್ಡಿಗೌಡ, ನರಸಪ್ಪ ಕವಡೆ, ಚಂದ್ರು ಯಾದವ, ರಾಮಣ್ಣ ಕೋಟಗೇರಾ, ಗುರುನಾಥರೆಡ್ಡಿ ರೊಟ್ನಡಗಿ ಡಿ. ತಾಯಪ್ಪ ಬದ್ದೇಪಲ್ಲಿ, ಡಾ| ಚಂದ್ರಶೇಖರ, ರಾಜೇಶ ಉಡುಪಿ, ಜಗದೀಶ ಕಲಾಲ, ವಾಬಣ್ಣ, ಸಾಬಣ್ಣ ಪೂಜಾರಿ ಇದ್ದರು.