ಸೈದಾಪುರ: ಮಕ್ಕಳಿಗೆ ಕೂಲಿ ಕೆಲಸಕ್ಕೆ ಹಚ್ಚದೆ ಶಾಲೆಗೆ ದಾಖಲಿಸಿ ಉತ್ತಮ ಶಿಕ್ಷಣ ನೀಡಿ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಪಾಲಕರ ಸಹಕಾರ ನೀಡಬೇಕು ಎಂದು ತಾಪಂ ಸದಸ್ಯ ಭಾಸ್ಕರರೆಡ್ಡಿ ಪಾಲಕರಲ್ಲಿ ಮನವಿ ಮಾಡಿದರು.
ಇಡ್ಲೂರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಸಿಡಿಎಫ್ ಇಲಾಖೆ ಮತ್ತು ಕಲಿಕಾ ಟಾಟಾ ಟ್ರಸ್ಟ್ ಆಶ್ರಯದಲ್ಲಿ ನಡೆದ ದಾಖಲಾತಿ ಆಂದೋಲನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಿಮ್ಮ ಮಕ್ಕಳನ್ನು ಅನ್ಯ ಕೆಲಸಕ್ಕೆ ಹಚ್ಚಿ ಅವರ ಭವಿಷ್ಯ ಹಾಳು ಮಾಡಿದಂತಾಗುತ್ತದೆ. ಅಲ್ಲದೇ ನಮ್ಮ ದೇಶದ ಅಭಿವೃದ್ಧಿ ಕುಠಿತವಾಗುತ್ತದೆ. ಆದ್ದರಿಂದ ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿ ಉತ್ತಮ ಶಿಕ್ಷಣ ಕೊಡಿಸಬೇಕು ಎಂದು ಪಾಲಕರಲ್ಲಿ ಮನವಿ ಮಾಡಿದರು.
ಶಾಲೆ ಮುಖ್ಯ ಶಿಕ್ಷಕ ಶಂಕ್ರಪ್ಪ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಕಾಲದಲ್ಲಿ ಮಕ್ಕಳಿಗೆ ಶಿಕ್ಷಣ ಅತ್ಯವಶ್ಯಕವಾಗಿದೆ. ಆದ್ದರಿಂದ ಪಾಲಕರು ತಮ್ಮ ಮಕ್ಕಳನ್ನು ಅನ್ಯ ಕೆಲಸಗಳಿಗೆ ಹಚ್ಚಲಾರದೆ ಶಾಲೆಯಲ್ಲಿ ದಾಖಲು ಮಾಡಬೇಕು ಎಂದು ಹೇಳಿದರು.
ಎಸ್‌ಡಿಎಂಸಿ ಉಪಾಧ್ಯಕ್ಷ ಅಂಜಪ್ಪ, ಕಲಿಕಾ ಟಾಟಾ ಟ್ರಸ್ಟ್ ಸಂಯೋಜಕ ವೆಂಕಟೇಶ ನಿಂಗಾಪೊಳ, ಶಿಕ್ಷಕರಾದ ಗುರುಸ್ವಾಮಿ, ಪರಶುರಾಮ, ಚನ್ನಮ್ಮ, ಶಿಕ್ಷಣ ಪ್ರೇಮಿ ಹುಸೇನಪ್ಪ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಗ್ರಾಮದ ಪಾಲಕರು ಹಾಗೂ ವಿದ್ಯಾರ್ಥಿಗಳು ಇದ್ದರು.