ಸೈದಾಪುರ: ಗ್ರಾಮೀಣ ಭಾಗದ ಬಹುತೇಕ ರೈತರು ತಮ್ಮೂರಿನ ಕೆರೆಗಳ ಹೂಳು ತೆಗೆಸುವಂತೆ ಭಾರತೀಯ ಜೈನ ಸಂಘಟನೆಗೆ ಒತ್ತಾಯಿಸುತ್ತಿದ್ದಾರೆ ಎಂದು ಬಿಜೆಎಸ್ ಕಾರ್ಯಕಾರಣಿ ಸದಸ್ಯ ಶರಣೀಕ ಕುಮಾರ ದೋಖಾ ಹೇಳಿದರು.
ರಾಂಪುರ ಕೆ., ಬಾಲಚೇಡ, ಬದ್ದೇಪಲ್ಲಿ ಹಾಗೂ ದುಪ್ಪಲ್ಲಿ ಕೆರೆಗೆ ಬುಧವಾರ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, ಭಾರತೀಯ ಜೈನ ಸಂಘಟನೆ ರಾಜ್ಯ ಸರಕಾರ ಸಹಯೋಗದೊಂದಿಗೆ ಹಮ್ಮಿಕೊಂಡಿರುವ ಕೆರೆ ಹೂಳೆತ್ತುವ ಕಾರ್ಯವನ್ನು ರೈತರು ಮೆಚ್ಚಿಕೊಂಡಿದ್ದಾರೆ. ಕೆರೆ ಹೂಳು ತೆಗೆಯುವ ಯೋಜನೆ ರಾಜ್ಯದಲ್ಲಿ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳಲಾಗಿದೆ. ಹೂಳು ತೆಗೆಯುವುದರಿಂದ ಕೆರೆಯಲ್ಲಿ ಹೆಚ್ಚಿನ ನೀರು ಸಂಗ್ರಹದ ಜತೆಗೆ ಭೂಮಿ ಅಂತರ್ಜಲ ಮಟ್ಟ ಸುಧಾರಣೆಯಾಗಲಿದೆ. ಹೂಳನ್ನು ರೈತರು ತಮ್ಮ ಹೊಲಗದ್ದೆಗಳಿಗೆ ಹಾಕಿಸಿಕೊಂಡು ಮಣ್ಣಿನ
ಫಲವತ್ತತೆ ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತದೆ. ಇದನ್ನು ತಿಳಿದ ಗ್ರಾಮೀಣ ಭಾಗದ ಬಹುತೇಕ ರೈತರು ದೂರವಾಣಿ ಕರೆ ಮಾಡುತ್ತಿದ್ದಾರೆ. ಅಲ್ಲದೇ ಪ್ರತ್ಯೇಕವಾಗಿ ಭೇಟಿ ನೀಡಿ ತಮ್ಮೂರಿನ
ಕೆರೆಗಳ ಹೂಳು ತೆಗೆಸುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಹೇಳಿದರು.
ಬಸವರಾಜಯ್ಯ ಸ್ವಾಮಿ ಬದ್ದೇಪಲ್ಲಿ, ಚಂದ್ರಶೇಖರ ವಾರದ, ಮಹಿಪಾಲರೆಡ್ಡಿ ದುಪ್ಪಲ್ಲಿ, ಕೈಲಾಸ ಆಸ್ಪಲ್ಲಿ, ಮಹಿಮೂದ್ ಬಡಿಗೇರ, ಭೀಮಶಪ್ಪ, ಭೀಮಣ್ಣ, ನರಸೇಗೌಡ, ಯಾಮರೆಡ್ಡಿ ದುಪ್ಪಲ್ಲಿ, ವೆಂಕಟೇಶ, ಹಣಮಂತ, ರವಿ, ಮರೆಪ್ಪ, ಸಾಬಣ್ಣ, ಭೀರಪ್ಪ, ಮಾಳಪ್ಪ, ಭೀಮಶಪ್ಪ, ಖಾಜಾಹುಸೇನ್, ಶಂಕ್ರಪ್ಪ, ತಿಪ್ಪಣ್ಣ ಇದ್ದರು.
ಬಿಜೆಎಸ್‌ನವರು ಸರಕಾರದ ಸಂಯುಕ್ತಾಶ್ರದಲ್ಲಿ ಕೆರೆ ಹೂಳೆತ್ತುವ ಕಾರ್ಯಕ್ಕೆ ಮುಂದಾಗಿರುವುದು ಸಕಾಲವಾಗಿದೆ. ಬೇಸಿಗೆ ಕಾಲದಲ್ಲಿ ರೈತರಿಗೆ ಹೆಚ್ಚಿನ ಕೆಲಸವಿರುವುದಿಲ್ಲ. ಜತೆಗೆ ಹೂಳನ್ನು ತಮ್ಮ ಹೊಲಗದ್ದೆಯಲ್ಲಿ ಹಾಕಿಸುವುದು ತೀರ ಸುಲಭ. ಆಕಸ್ಮಾತ್ ಮಳೆ ಬಂದರೆ ಇತ್ತ ಕೆರೆ ಹೂಳು ತೆಗೆಯಲು ಆಗುವುದಿಲ್ಲ. ಅತ್ತ ಹೊಲಕ್ಕೆ
ಹೋಗಲು ರಸ್ತೆಯೂ ಇರುವುದಿಲ್ಲ. ಹೀಗಾಗಿ ರೈತರ ಹಿತಕ್ಕಾಗಿ ಚುನಾವಣೆ ನೀತಿ ಸಂಹಿತೆ ಅಡ್ಡ ತರದೆ ಪಕ್ಷಾತೀತವಾಗಿ ದೇಶದ ಬೆನ್ನಲೆಬು ಆಗಿರುವ ಅನ್ನದಾತನಿಗೆ ಸಹಕಾರ ನೀಡಬೇಕಾಗಿದೆ ಎಂದು ರಾಂಪುರು ಕೆ., ಬಾಲಚೇಡ, ಬದ್ದೇಪಲ್ಲಿ ಹಾಗೂ ದುಪ್ಪಲ್ಲಿ ಗ್ರಾಮಗಳ ರೈತರು ಒತ್ತಾಯಿಸಿದರು.
ನಾವು ಅತ್ಯಂತ ಪಾರದರ್ಶಕವಾಗಿ ಕೆರೆ ಹೂಳೆತ್ತುವ ಕೆಲಸ ಮಾಡುತ್ತಿದ್ದೇವೆ ಇದರಲ್ಲಿ ಯಾರೊಬ್ಬರ ಹಸ್ತಕ್ಷೇಪ ಇರುವುದಿಲ್ಲ. ಕೆರೆ ಹೂಳು ತೆಗೆಯುವ ಹಿಟಾಚಿ, ಜೆಸಿಬಿಯಂತ್ರಗಳ ಬಾಡಿಗೆಯನ್ನು ಬಿಜೆಎಸ್ ನೀಡಿದರೆ ಅವುಗಳಿಗೆ ಬೇಕಾದ ಇಂಧನವನ್ನು ರಾಜ್ಯ ಸರಕಾರ ನೀಡುತ್ತದೆ. ರೈತರು ಟ್ರ್ಯಾಕ್ಟರ್‌ಗಳ ಮೂಲಕ ತಮ್ಮ ಜಮೀನುಗಳಿಗೆ ಕೊಂಡೊಯ್ಯುತ್ತಾರೆ. ಇದರಿಂದ ಅಂತರ್ಜಲ ಮಟ್ಟ ಸುಧಾರಣೆ ಜತೆಗೆ ಮಣ್ಣಿನ ಫಲವತ್ತತೆ ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತದೆ.