ಸೈದಾಪುರ: ಬಿಜೆಪಿ ಪಕ್ಷ ಸಂಘಟಿಸಿ ಗುರುಮಠಕಲ್‌ನ್ನು ಕಾಂಗ್ರೆಸ್ ಮುಕ್ತ ಮತಕ್ಷೇತ್ರವನ್ನಾಗಿ ಮಾಡಲು ಪ್ರಯತ್ನ ಮಾಡುತ್ತೇನೆ ಎಂದು ಅಂಬಿಗರ ಚೌಡಯ್ಯ ನಿಗಮದ ಅಧ್ಯಕ್ಷ ಬಾಬುರಾವ್ ಚಿಂಚನಸೂರ ಹೇಳಿದರು.
ಬಳಿಚಕ್ರ ಗ್ರಾಮದ ಮಾಜಿ ತಾಪಂ ಅಧ್ಯಕ್ಷ ಸಣ್ಣ ಹಣಮಂತಪ್ಪ ಬಳಿಚಕ್ರ ಸೇರಿದಂತೆ ಗುರುಮಠಕಲ್ ಮತಕ್ಷೇತ್ರದ ಬಸವರಾಜ ಬಾಗ್ಲಿ, ಶರಣಪ್ಪ ಮೋಟ್ನಳ್ಳಿ ಅವರನ್ನು ಯಾದಗಿರಿ ನಗರದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಅವರು ಮಾತನಾಡಿದರು.
ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರಕಾರವಿದೆ. ಇದರ ಸದುಪಯೋಗದೊಂದಿಗೆ ಈ ಭಾಗದ ಕೈಗಾರಿಕೆ, ಕೃಷಿ, ಉದ್ಯೋಗ ಸೇರಿದಂತೆ ಸಮಗ್ರ ಅಭಿವೃದ್ಧಿಗಾಗಿ ಪ್ರಯತ್ನ ಮಾಡುತ್ತೇನೆ ಎಂದರು.
ಈ ಭಾಗದ ಮುಖಂಡನಾಗಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ತನ್ನ ಅಸ್ತಿತ್ವ ಕಳೆದುಕೊಳ್ಳುವಂತೆ ಮಾಡುವಲ್ಲಿ ಪ್ರಯತ್ನ ಮಾಡಿದ್ದೇನೆ. ಇದು ರಾಷ್ಟ್ರ ಸೇರಿದಂತೆ ರಾಜ್ಯ ನಾಯಕರ ಮೇಲೆ ಪ್ರಭಾವ ಬೀರುವಂತಾಗಿದೆ. ಇದನ್ನು ಪರಿಗಣಿಸಿ ಪಕ್ಷ ನೀಡುವ ಅಧಿಕಾರ ಬಳಸಿಕೊಂಡು ಗಡಿ ಭಾಗದ ಅಭಿವೃದ್ಧಿಗೆ ಪ್ರಯತ್ನ ಮಾಡುತ್ತೇನೆ. ಪಕ್ಷ ಸಂಘಟನೆ ನನ್ನ ಪ್ರಮುಖ ಗುರಿಯಾಗಿದೆ ಎಂದು ಹೇಳಿದರು.
ಹಣಮಂತ ಮಡ್ಡಿ, ಚಂದ್ರಶೇಖರ ಕಾವಲಿ ಬಾಡಿಯಾಲ, ನಿರಂಜನ ವಕೀಲರು, ಶಿವಶಂಕರ ನೀಲಹಳ್ಳಿ, ವೀಣಾ ಸೇರಿದಂತೆ ಇತರರಿದ್ದರು.