ಹುಬ್ಬಳ್ಳಿ: ಸಾಯಿ ಮಂದಿರದಲ್ಲಿ ಆಡಳಿತ ಮಂಡಳಿಯವರೇ ಲೂಟಿ ಮಾಡುತ್ತಿದ್ದು ನ್ಯಾಯ ಯಾರ ಬಳಿ ಕೇಳಬೇಕು. ಶ್ರೀ ಶಿರಡಿ ಸಾಯಿ ಮಂದಿರಕ್ಕೆ ಈ ಕೂಡಲೇ ಆಡಳಿತಾಧಿಕಾರಿ ನೇಮಕ ಮಾಡುವ ಮೂಲಕ ಸೂಕ್ತ ತನಿಖೆ ನಡೆಸಬೇಕು ಎಂದು ಶ್ರೀರಾಮ ಸೇನಾ ಸಂಸ್ಥಾಪಕ ಪ್ರಮೋದ ಮುತಾಲಿಕ ಒತ್ತಾಯಿಸಿದರು.
ಈ ಕುರಿತು ವಿವಿಧ ಸಂಘಟನೆಗಳ ಆಶ್ರಯದಲ್ಲಿ ಸೋಮವಾರ ಶ್ರೀ ಶಿರಡಿ ಸಾಯಿ ಬಾಬಾ ಮಂದಿರದ ಆಡಳಿತ ಮಂಡಳಿ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಾಯಿ ಮಂದಿರದಲ್ಲಿ ಕಳೆದ ಹಲವು ವರ್ಷಗಳಿಂದ ಭ್ರಷ್ಟಾಚಾರ ನಡೆಯುತ್ತಿದೆ.
ಈ ಹಿಂದೆ ದೇಣಿಗೆ ಪೆಟ್ಟಿಗೆಯಲ್ಲಿ ಕಳ್ಳತನ ಮಾಡುವಾಗ ಸಿಕ್ಕಿ ಬಿದ್ದು ಅಮಾನತುಗೊಂಡ ವ್ಯಕ್ತಿಯೇ ಇದೀಗ ಆಡಳಿತ ಮಂಡಳಿಯ ಅಧ್ಯಕ್ಷನಾಗಿರುವುದು ವಿಪರ್ಯಾಸದ ಸಂಗತಿ. ಅಂತಹ ಭ್ರಷ್ಟನನ್ನು ಕೂಡಲೇ ವಜಾಗೊಳಿಸಬೇಕು, ಐದು ದಿನಗಳಲ್ಲಿ ಮಂದಿರಕ್ಕೆ ಆಡಳಿತಾಧಿಕಾರಿ ನೇಮಿಸಬೇಕು ಎಂದು ಮುತಾಲಿಕ ಒತ್ತಾಯಿಸಿದರು.
ಶೋಭಾ ಸವದತ್ತಿ ಮಾತನಾಡಿ, ಶ್ರೀ ಶಿರಡಿ ಸಾಯಿ ಬಾಬಾ ಮಂದಿರದಲ್ಲಿ ಕೆಲಸ ಮಾಡುತ್ತಿದ್ದ ನನ್ನ ಪತಿ ಸಿದ್ದಪ್ಪ ಸವದತ್ತಿ ಅವರನ್ನು ಇತ್ತೀಚೆಗೆ ತೆಗೆದು ಹಾಕಿದ್ದರು. ಅದನ್ನು ಮನಸ್ಸಿಗೆ ಹಚ್ಚಿಕೊಂಡು ಅವರು ಕಳೆದ 15 ದಿನಗಳ ಹಿಂದೆ ಮೃತಪಟ್ಟಿದ್ದಾರೆ. ಎರಡು ಪುಟ್ಟ ಮಕ್ಕಳಿದ್ದು ಅವರನ್ನು ಸಾಕುವುದು ಕಷ್ಟವಾಗಿದೆ.
ಮಂದಿರದಿಂದ ಏನಾದರೂ ಸಹಾಯ, ಸಹಕಾರ ನೀಡಬೇಕೆಂದು ಶೋಭಾ ತಮ್ಮ ಅಳಲು ತೋಡಿಕೊಂಡರು. ಮಂದಿರದ ಅರ್ಚಕ ಪಾಂಡುರಂಗ ಮುನವಳ್ಳಿ ಮಾತನಾಡಿ, ತನ್ನನ್ನು ಕೆಲಸದಿಂದ ತೆಗೆದುಹಾಕಿದ್ದು, ಅಲ್ಲಿ ನಾಲ್ಕು ಜನ ಭಟ್ಟರನ್ನು ತಂದಿಟ್ಟುಕೊಂಡಿದ್ದಾರೆ. ಮಂದಿರದ ವ್ಯವಸ್ಥಾಪಕ ಪರಮ ಭ್ರಷ್ಟನಾಗಿದ್ದು, ಮೊದಲು ಅವರನ್ನು ಕೆಲಸದಿಂದ ತೆಗೆದು ಹಾಕಬೇಕು ಎಂದು ಒತ್ತಾಯಿಸಿದರು.
ಇದಕ್ಕೂ ಪೂರ್ವದಲ್ಲಿ ದಾಜೀಬಾನ ಪೇಟೆ ತುಳಜಾಭವಾನಿ ದೇವಸ್ಥಾನದಿಂದ ಪ್ರತಿಭಟನಾ ಮೆರವಣಿಗೆ ಮೂಲಕ ಆಗಮಿಸಿ ತಹಶೀಲ್ದಾರಗೆ ಮನವಿ ಸಲ್ಲಿಸಲಾಯಿತು. ಅನಿಲ ಮಿಸ್ಕಿನ್, ದೀಪಕ ಜಾಧವ, ಸೇರಿದಂತೆ ಮೊದಲಾದವರು ಇದ್ದರು.