Advertisement

ಹರಿಹರದಲ್ಲಿ ಸಾಯ್‌ ಕಬಡ್ಡಿ ಕೋಚ್‌ ಆತ್ಮಹತ್ಯೆ

06:00 AM Oct 17, 2018 | Team Udayavani |

ಹರಿಹರ: ತಮ್ಮ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ದಾಖಲಾದ ಬೆನ್ನಲ್ಲೇ ಬೆಂಗಳೂರಿನ ಭಾರತೀಯ ಕ್ರೀಡಾಪ್ರಾಧಿಕಾರದ (ಸಾಯ್‌) ಕಬಡ್ಡಿ ತರಬೇತುದಾರ ರುದ್ರಪ್ಪ ವಿ. ಹೊಸಮನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದಾವಣಗೆರೆ ಜಿಲ್ಲೆಯ ಹರಿಹರದ ಎಸ್‌.ಎಂ. ಲಾಡ್ಜ್ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ತಡವಾಗಿ ಬೆಳಕಿಗೆ ಬಂದಿದೆ. ಅವರ ಸಾವಿಗೆ ಅವರ ವಿರುದ್ಧ ದಾಖಲಾದ ಲೈಂಗಿಕ ಕಿರುಕುಳದ ದೂರೇ ಕಾರಣ ಎನ್ನಲಾಗಿದೆ.

Advertisement

ನಡೆದಿದ್ದೇನು?: ಅ.12ರಂದು ಎಸ್‌.ಎಂ.ಲಾಡ್ಜ್ಗೆಬಂದು ಉಳಿದುಕೊಂಡಿದ್ದ ಹೊಸಮನಿ ಅ.13ರ ಮಧ್ಯಾಹ್ನದಿಂದ ತಮ್ಮ ರೂಮ್‌ ಬಾಗಿಲು ತೆರೆದಿರಲಿಲ್ಲ. ಅ.15ರಂದು ಕೊಠಡಿಯಿಂದ ದುರ್ವಾಸನೆ ಬರುವುದನ್ನು ಗಮನಿಸಿದ ಲಾಡ್ಜ್ ನವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಧ್ಯಾಹ್ನ 2 ಗಂಟೆ ವೇಳೆಗೆ ಪೊಲೀಸರು ಬಾಗಿಲು ತೆಗೆದು ನೋಡಿದಾಗ ರುದ್ರಪ್ಪ ಫ್ಯಾನ್‌ಗೆ ನೇಣು ಬಿಗಿದುಕೊಂಡಿರುವುದು ಕಂಡು ಬಂದಿದೆ. ಹೊಸಮನಿಯವರ ಅಣ್ಣ ರಟ್ಟಿಹಳ್ಳಿ ವಾಸಿ ಉಜ್ಜಿನಪ್ಪ ಹರಿಹರ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಬೆಂಗಳೂರಿನಲ್ಲಿ ಲೈಂಗಿಕ ಕಿರುಕುಳ ದೂರು
ಬೆಂಗಳೂರಿನ ನ್ಪೋರ್ಟ್ಸ್ ಅಥಾರಿಟಿ ಆಫ್‌ ಇಂಡಿಯಾ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿದ್ದ 13 ವರ್ಷದ ಖೋ ಖೋ ಆಟಗಾರ್ತಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂಬ ದೂರು ಅ.10ರಂದು ರುದ್ರಪ್ಪ ಹೊಸಮನಿ ವಿರುದ್ಧದಾಖಲಾಗಿತ್ತು. ಬೆಂಗಳೂರಿನ ಜ್ಞಾನಭಾರತಿ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ದೂರು ದಾಖಲಾಗಿತ್ತು. ಇದೇ ಕಾರಣಕ್ಕೆ ಸಾಯ್‌ ಮಹಾ ನಿರ್ದೇಶಕಿ ನೀಲಂ ಕಪೂರ್‌,ರುದ್ರಪ್ಪನ್ನು ಸೇವೆಯಿಂದ ಅಮಾನತುಗೊಳಿಸಿದ್ದರು. ಈ ಪ್ರಕರಣದ ವಿಚಾರಣೆಗೆ ದೆಹಲಿಯಲ್ಲಿರುವ ಸಾಯ್‌ ಮುಖ್ಯ ಕಚೇರಿಗೆ ತೆರಳಬೇಕೆಂದು ಕುಟುಂಬದವರಿಗೆ ತಿಳಿಸಿ ಅ.11ರಂದು ರುದ್ರಪ್ಪ ಮನೆಯಿಂದ ಹೊರಬಿದ್ದಿದ್ದರು. ಮಾರ್ಗ ಮಧ್ಯೆ ಅ.12ರಂದು ಹರಿಹರ ಎಸ್‌ಎಂ ಲಾಡ್ಜ್ನಲ್ಲಿ ಉಳಿದುಕೊಂಡಿದ್ದರು. 

ದೇಹದಾನ ಮಾಡಲು ಮರಣಪತ್ರದಲ್ಲಿ ಮನವಿ
ಹರಿಹರ ಲಾಡ್ಜ್ ಕೊಠಡಿಯಲ್ಲಿ ರುದ್ರಪ್ಪ ಬರೆದ ಎರಡು ಮರಣಪತ್ರಗಳು ದೊರೆತಿವೆ. ಬಿಳಿ ಹಾಳೆಯೊಂದರಲ್ಲಿ ಪತ್ನಿ ಹಾಗೂ ಪುತ್ರನಿಗೆ ಬರೆದಿರುವ ಮರಣಪತ್ರದಲ್ಲಿ ಏಳು ಮೊಬೈಲ್‌ ಸಂಖ್ಯೆಗಳಿವೆ. ಮರಣಪತ್ರ ಹೀಗಿದೆ: ನನ್ನ ಕ್ಷಮಿಸಿ. ನಿಮಗೆ ಬಹಳ ತೊಂದರೆ ಮಾಡಿದೆ. ಮೊಬೈಲ್‌ ಇಲ್ಲಾ, ನನ್ನ ಪರ್ಸ್‌ನಲ್ಲಿ ನಿಮ್ಮಿಬ್ಬರ ಫೋಟೂನು ಇಲ್ಲಾ. ಬಹಳ ಬಹಳ ನೋಡಬೇಕನಿಸಿತ್ತು. ರಾಕೇಶ ಅಮ್ಮನ ಕಾಳಜಿ ತಗೊ, ನಿನ್ನ ಕೆಲಸದಲ್ಲಿ ಇನ್ನೂ ವೇಗವಾಗಿ, ದೃಢವಾಗಿ ಮುಂದುವರೆ. ದೇವರು ಒಳ್ಳೆಯದು ಮಾಡುತ್ತಾನೆ. ನನ್ನ ಆತ್ಮೀಯ ಬಂಧುಗಳಿಗೆ ಹಾಗೂ ನನ್ನ ಆತ್ಮೀಯ ಎಲ್ಲ ಗೆಳೆಯರಿಗೆ ನನ್ನ ಧನ್ಯವಾದಗಳು. ದಯವಿಟ್ಟು ನಿಮಗೆ ತೊಂದರೆ ಆಗಿದೆ. ಕ್ಷಮಿಸಿ. ದಯವಿಟ್ಟು ನನ್ನ ದೇಹವನ್ನು ಯಾವುದಾದರು ಆಸ್ಪತ್ರೆಗೆ ದಾನಮಾಡಿ.

ರೈಲ್ವೆ ಟಿಕೆಟ್‌ನಲ್ಲೂ ವಿನಂತಿ
ತಮ್ಮೊಂದಿಗಿದ್ದ ರೈಲ್ವೆ ಟಿಕೆಟ್‌ ಮೇಲೆ ಸಾಯ್‌ ಮಹಾ ನಿರ್ದೇಶಕಿ ಹಾಗೂ ಸಹೋದ್ಯೋಗಿಗಳನ್ನು ಉದ್ದೇಶಿಸಿ, ನನ್ನ ಪುತ್ರ ಮತ್ತು ಪತ್ನಿ ಅಮಾಯಕರಿದ್ದಾರೆ. ದಯವಿಟ್ಟು ಅವರಿಗೆ ಸಹಾಯ ಮಾಡಿ ಎಂದು ಮನವಿ ಮಾಡಿದ್ದಾರೆ. ಅಲ್ಲದೇ ಅಮಾನತು ಪತ್ರದ ಮೇಲೆ ನನ್ನ ಜೀವನದಲ್ಲಿ ಯಾವುದೇ ಕೆಟ್ಟ ಉದ್ದೇಶವಿಲ್ಲ. ಕ್ಷಮಿಸಿ ಎಂದು ಬರೆಯಲಾಗಿದೆ. ಇನ್ನು ಆರು ತಿಂಗಳಲ್ಲೇ ನಿವೃತ್ತಿ ಆಗಬೇಕಿತ್ತು!
1959ರಲ್ಲಿ ಹಿರೇಕೆರೂರು ತಾಲೂಕಿನ ರಟ್ಟಿಹಳ್ಳಿಯಲ್ಲಿ ಜನಿಸಿದ್ದ ಹೊಸಮನಿ, 1983-84ರಲ್ಲಿ ನ್ಯಾಷನಲ್‌ ಇನ್ಸ್ಟಿಟ್ಯೂಟ್‌ ಆಫ್ ನ್ಪೋರ್ಟ್ಸ್ನಲ್ಲಿ (ಎನ್‌ಐಎಸ್‌), ಖೋಖೋ-ಕಬಡ್ಡಿಯಲ್ಲಿ ಡಿಪ್ಲೊಮಾ ತರಬೇತಿ ಪಡೆದಿದ್ದರು. ಅನಂತರ, 1985-86ನಲ್ಲಿ ಬೆಂಗಳೂರಿನ
ಕಂಠೀರವ ಕ್ರೀಡಾಂಗಣದಲ್ಲಿ ಖೋಖೋ ಕೋಚ್‌ ಆಗಿದ್ದರು. 1986ರಲ್ಲಿ ಸಾಯ್‌ನಲ್ಲಿ ಕೋಚ್‌ ಆಗಿ ನೇಮಕಗೊಂಡರು. ಕೇರಳದ ಪಾಲಕ್ಕಾಡ್‌ನ‌ಲ್ಲಿ ಮೊದಲು ಸೇವೆ ಆರಂಭಿಸಿದ್ದ ಅವರು, ಆನಂತರ ಪುಣೆ, ಔರಂಗಾಬಾದ್‌, ಧಾರವಾಡದಲ್ಲಿ ಸೇವೆ
ಸಲ್ಲಿಸಿದ್ದರು. 2016ರಲ್ಲಿ ಬೆಂಗಳೂರಿನ ಸಾಯ್‌ ಕೇಂದ್ರಕ್ಕೆ ವರ್ಗಾವಣೆಗೊಂಡಿದ್ದರು. 

Advertisement

ರುದ್ರಪ್ಪ ಸಹೋದ್ಯೋಗಿಗಳ ಪ್ರಕಾರ, ಕೇರಳದಲ್ಲಿ ಖೋಖೋ ಜನಪ್ರಿಯಗೊಳ್ಳಲು ಹೊಸಮನಿಯವರ ಪರಿಶ್ರಮ ದೊಡ್ಡದಿತ್ತು. ತಮ್ಮ ವೃತ್ತಿ ಜೀವನದಲ್ಲಿ ನೂರಾರು ರಾಷ್ಟ್ರಮಟ್ಟದ ಕ್ರೀಡಾಪಟುಗಳನ್ನು ರೂಪಿಸಿದ್ದ ಅವರಿಗೆ ಪುಣೆಯಲ್ಲಿ ದೊಡ್ಡ ಶಿಷ್ಯ ಬಳಗವಿದೆ. ಬೆಂಗಳೂರಿಗೆ ಕಬಡ್ಡಿ ಕೋಚ್‌ ಆಗಿ ಬಂದ ನಂತರ ಅವರು ಆಡಳಿತಾತ್ಮಕವಾಗಿ ಮಾಡಿದ ಅತ್ಯುತ್ತಮ ಕೆಲಸವೆಂದರೆ, ಕಳೆದ
20 ವರ್ಷಳಿಂದ ಅಕ್ಕಿತಿಮ್ಮನಹಳ್ಳಿಯಲ್ಲಿದ್ದ ಕಬಡ್ಡಿ ಕ್ರೀಡೆಯ ಆಡಳಿತ ಕಚೇರಿಯನ್ನು ಬೆಂಗಳೂರಿನ ಸಾಯ್‌ ಕೇಂದ್ರಕ್ಕೆ ವರ್ಗಾವಣೆ ಮಾಡಿಸಿದ್ದು. ಇದು ಅನೇಕ ಕಬಡ್ಡಿ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿಕೊಟ್ಟಿತು.

ಮುಂದಿನ ವರ್ಷ ಮೇನಲ್ಲಿ ನಿವೃತ್ತಿಯಾಗಬೇಕಿದ್ದ
ಅವರು ಸದಾ ಉತ್ಸಾಹಿ, ಸೃಜನಶೀಲರು. ಉತ್ತಮ ಛಾಯಾಗ್ರಾಹಕರೂ ಹೌದು. ಕನ್ನಡನಾಡ ನಾಡಿನ ಬಗ್ಗೆ ಅದಮ್ಯ ಪ್ರೀತಿ ಹೊಂದಿದ್ದ ಅವರು, ಕರ್ನಾಟಕಕ್ಕೆ ಬರುವ ಅ ನ್ಯ ರಾಜ್ಯಗಳ ಕೋಚ್‌ಗಳಿಗೆ ಕನ್ನಡದ ಬಗ್ಗೆ ಅಭಿಮಾನ ಮೂಡಿಸಲೆಂದೇ ವಿಶೇಷ ಸಾಕ್ಷ್ಯಚಿತ್ರ, ಬರಹಗಳನ್ನು ತಯಾರಿಸಿದ್ದರು. ಅವನ್ನು ಪ್ರತಿವರ್ಷ ಸಾಯ್‌ ಕೇಂದ್ರಗಳಲ್ಲಿ ನಡೆಯುವ ನ.1ರ ರಾಜ್ಯೋತ್ಸವ 
ಸಮಾರಂಭಗಳಲ್ಲಿ ಪ್ರದರ್ಶಿಸುತ್ತಿದ್ದರು. ಈ ಬಾರಿಯ ರಾಜ್ಯೋತ್ಸವಕ್ಕೂ ಇಂಥದ್ದೇ ತಯಾರಿಯಲ್ಲಿ ಅವರು ತೊಡಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next