Advertisement
ಕಾಲೇಜು ಶಿಕ್ಷಣ ಮುಗಿಯುವ ಮುನ್ನವೆ ಎ.ಪಿ. ಗೋವಿಂದ ಭಟ್ಟರನ್ನು ಮದುವೆಯಾಗಿ ಪುತ್ತೂರಿಗೆ ಬಂದರು. ಗೋವಿಂದ ಭಟ್ಟರು ಅಧ್ಯಾಪನ ವೃತ್ತಿ ತ್ಯಜಿಸಿ ಕೃಷಿಯನ್ನೇ ಕಾಯಕ ಮಾಡಿಕೊಂಡಿದ್ದರು. ಕಲೆ, ಸಾಹಿತ್ಯ ಬರವಣಿಗೆಯ ಬಗ್ಗೆ ಪ್ರೀತಿಯಿದ್ದವರು. ಅವರೊಡನೆ ಸಂಸಾರದ ನೌಕೆಯನ್ನು ಸಾಗಿಸುತ್ತ ಮಾಲತಿ ಸಾಹಿತ್ಯ ಕೃಷಿ ಮಾಡಿದರು. 1967ರಲ್ಲಿ ಆರಂಭವಾದ ಅವರ ಬರವಣಿಗೆ ಈಗಲೂ ನಿರಂತರವಾಗಿ ಮುಂದುವರಿಯುತ್ತಿದೆ. ಅವರು ಮಾತಿಗೆ ಸಿಕ್ಕಾಗ, ತಮ್ಮ ಬದುಕು ಸಾಗಿಬಂದ ದಾರಿಯನ್ನು ನೆನಪಿಸಿಕೊಂಡರು..
.
ನಿಮ್ಮ ಸಾಹಿತ್ಯ ಕೃಷಿ ಬಾಲ್ಯದಲ್ಲಿಯೇ ಆರಂಭವಾಯಿತಲ್ಲ ?
ಹೌದು, ಅಪ್ಪ ಗಣೇಶ ಭಟ್ಟರು ಖಾದಿ ಗ್ರಾಮೋದ್ಯೋಗ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರಾಗಿದ್ದು ವೃತ್ತಿ ಬದುಕಿನಲ್ಲಿ ಊರಿಂದ ಊರಿಗೆ ವರ್ಗಾವಣೆ ಅನಿವಾರ್ಯವಾಗಿತ್ತು. ಅಮ್ಮ ಕಾವೇರಿ 4ನೆಯ ತರಗತಿ ಓದಿದ್ದರು. ಆರು ಗಂಡು ಮಕ್ಕಳು, ಇಬ್ಬರು ಹೆಣ್ಣುಮಕ್ಕಳ ಕುಟುಂಬ ನಮ್ಮದು. ಮನೆಯಲ್ಲಿ ಓದುವ ಹುಚ್ಚು ಸ್ವಲ್ಪ ಹೆಚ್ಚೇ ಇತ್ತು. ಅ. ನ. ಕೃಷ್ಣರಾವ್., ತ. ರಾ. ಸುಬ್ಬರಾವ್ ಕಾದಂಬರಿಗಳನ್ನು ಹೆಚ್ಚು ಓದುತ್ತಿದ್ದೆವು. ಹೀಗೆ ಓದುವುದಕ್ಕೆ ಅಮ್ಮನೂ ಪ್ರೋತ್ಸಾಹ ನೀಡುತ್ತಿದ್ದರು. ಹೈಸ್ಕೂಲು ತರಗತಿಯಲ್ಲಿ ಕೃಷ್ಣಮೂರ್ತಿ ಪುರಾಣಿಕರ ಭಾಗೀರಥಿ ಕಾದಂಬರಿ ಓದಿ ತೋರಗಲ್ ಟೀಚರ್ ಕೈಯಲ್ಲಿ ಸಿಕ್ಕಿ ಹಾಕಿಕೊಂಡೆ. ಪುಸ್ತಕ ಮರಳಿಸುವಾಗ “ಏನಾದ್ರೂ ಬರಿ’ ಎಂದು ಅವರು ಪ್ರೇರೇಪಿಸಿದರು. ವಿದ್ಯಾರ್ಥಿ ಬದುಕಿನಲ್ಲಿ ಮೊದಲು ಬರೆದ ಬರಹ ಹುಲಿ ಕೊಂದ ಧೀರ. ಕರ್ಮವೀರ ಪತ್ರಿಕೆಯಲ್ಲಿ ಪ್ರಕಟಗೊಂಡಾಗ ಎಂಟು ರೂಪಾಯಿ ಸಂಭಾವನೆ ಪಡೆದೆ.
68ನೆಯ ವಯಸ್ಸಿನಲ್ಲಿ ನಾನು ಡಿಪ್ಲೊಮಾ ಪದವಿಯನ್ನು ಮುಕ್ತ ವಿವಿಯಿಂದ ಪಡೆದೆ. ಪದವಿಗೆ ಆಯ್ಕೆ ಮಾಡಿಕೊಂಡ ವಿಷಯ “ಕಾದಂಬರಿಗಳ ರಚನಾತ್ಮಕ ಶಿಲ್ಪ’. ಅನಿಶ್ಚಯ ಕಾದಂಬರಿಗೆ ಉತ್ತಮ ಮಹಿಳಾ ಕಾದಂಬರಿಯೆಂದು “ಕರ್ನಾಟಕ ಸಾಹಿತ್ಯ ಪರಿಷತ್ತಿನ ಬಹುಮಾನ’ ಮತ್ತು “ತಮ್ಮನರಾವ್ ಅಮ್ಮಿನಬಾವಿ ಸ್ಮಾರಕ ಗ್ರಂಥ ಬಹುಮಾನ’ವೂ ಲಭಿಸಿದೆ. ಆಧುನಿಕತೆಯ ಪ್ರವೇಶಕ್ಕೆ ಮೊದಲು ಹಳ್ಳಿಗಳು ಹೇಗಿದ್ದವು, ವೈದಿಕ ಮನೆತನದ ತಲೆತಲಾಂತರಗಳಿಂದ ಮೌಲ್ಯಗಳ ಸ್ಥಿತ್ಯಂತರಗಳೇನು, ವಿಭಕ್ತ ಕುಟುಂಬಗಳಾಗಿ ಒಡೆಯುವ ಅವಿಭಕ್ತ ಪರಿಕಲ್ಪನೆ, ನಗರಜೀವನದತ್ತ ಮುಖಮಾಡಿರುವ ಹೊಸ ಪೀಳಿಗೆಯ ಗೊಂದಲ, ಕೃಷಿ ಸಂಸ್ಕೃತಿಯ ಸನಾತನ ಪರಂಪರೆಯಿಂದ ವಿಮುಖರಾಗುವ ವಿದ್ಯಾವಂತ ವರ್ಗ, ಅವರ ಎಡಬಿಡಂಗಿತನ ಪ್ರಜ್ಞಾಪೂರ್ವಕವಾಗಿ ಅವರು ಕಾಯ್ದುಕೊಳ್ಳುವ ಪ್ರತ್ಯೇಕತೆ- ಈ ಎಲ್ಲ ಅಂಶಗಳು ನನ್ನನ್ನು ಬಹುವಾಗಿ ಕಾಡಿವೆ. ಇವೇ ವಿಚಾರಗಳು ನನ್ನ ಬರಹದಲ್ಲಿಯೂ ಪ್ರತಿಫಲಿಸಿರಬಹುದು. ಜೊತೆಗೆ ಹೀಗೆ ಕಾಡಿದ ವಿಚಾರಗಳ ಬಗ್ಗೆ ಯೋಚಿಸುತ್ತ, ಆ ಬಗ್ಗೆ ಬರೆಯುತ್ತ ಇದ್ದುದರಿಂದ ಅವು ನನ್ನ ಅರಿವನ್ನೂ ಹೆಚ್ಚಿಸಿವೆ.
Related Articles
Advertisement
ಸಾಹಿತ್ಯ ಕಾರ್ಯಕ್ರಮ, ಸಮ್ಮೇಳನಗಳಿಗೆ ತೆರಳುವ ಉತ್ಸಾಹ ನನ್ನ ಪತಿಗೂ ಇದ್ದುದರಿಂದ ಸಾಹಿತ್ಯ ಸಂವಾದ ಹೆಚ್ಚು ಕಷ್ಟವಾಗಲಿಲ್ಲ. ಇತ್ತೀಚೆಗೆ ಹೈದರಾಬಾದಿನಲ್ಲಿ ನನ್ನ ಬರಹಗಳ ಬಗೆಗಿನ ವಿಚಾರಸಂಕಿರಣ ನಡೆಯಿತು. ನೇಪಾಳ ಪ್ರವಾಸಕ್ಕೂ ಹೋಗಿದ್ದೆ. ವರ್ಷ 75 ಆದರೂ ಕಲಿಯುವುದು ಬೇಕಾದಷ್ಟು ಇದೆ ಎಂದು ಅನಿಸುತ್ತಿದೆ. ಆದ್ದರಿಂದಲೇ ನೇಪಾಳ ಪ್ರವಾಸದ ಕುರಿತು ಬರೆಯುವ ಉತ್ಸಾಹ ಮೂಡಿದೆ.
ಜಗತ್ತನ್ನು ಆಳುವುದು ಪ್ರೀತಿ ಮತ್ತು ಮನುಷ್ಯತ್ವದ ಮಾನವೀಯತೆ ಮಾತ್ರ ಅಲ್ಲವೆ? ನಾನು ಶ್ರೀಮಾತೆ ಶಾರದಾ ದೇವಿಯವರ ಜೀವನಚರಿತ್ರೆ ಬರೆದಾಗ ನನಗೆ ಈ ಮಾತು ಬಹಳ ನಿಜವೆನಿಸಿತು. ಆ ಬರಹದ ನಂತರ ನನಗೆ ಆದ ಅನುಭೂತಿಗಳು ದಿವ್ಯ ಮತ್ತು ಪ್ರಶಾಂತವಾದುದು.
ನಗರದಿಂದ ಹಳ್ಳಿಗೆ ಪಯಣಿಸಿದಿರಿ. ಹೇಗೆ ಹೊಂದಿಕೊಂಡಿರಿ?ನಾನು ಧಾರವಾಡದಲ್ಲಿ ಬರೆಯುತ್ತಿದ್ದಾಗ, ಸಿನಿಮಾ‰ ನಾಟಕಗಳ ಹುಚ್ಚು ವಿಪರೀತವಿದ್ದ ಕಾಲವದು. ತಮ್ಮ ಸುಬ್ರಾಯ ಭಟ್ ಒಳ್ಳೆಯ ನಟ. ನಾಟಕಗಳ ಪ್ರದರ್ಶನದಲ್ಲಿ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದ್ದ. ಅವನೊಂದಿಗೆ ಕ್ರಿಯಾಶೀಲವಾಗಿ ಕೆಲಸ ಮಾಡಿದ ಅನುಭವವಿತ್ತು. ಇಷ್ಟು ಚಟುವಟಿಕೆಯಿಂದಿದ್ದು ಒಮ್ಮೆಲೆ ಹಳ್ಳಿಗೆ ಬಂದಾಗ ಇಲ್ಲಿ ಅತ್ತೆ-ಮಾವ ಇದ್ದ ಕೂಡುಕುಟುಂಬದ ಮನೆ ಹೊಸದಾಗಿ ಕಂಡಿತು. ಅಗಾಧವಾದ ಒಂಟಿತನ ಕಾಡಿತ್ತು. ಎಲ್ಲಿಗೂ ಹೋಗಲು ಸಾಧ್ಯವಿಲ್ಲ, ಹಿರಿಯರಲ್ಲಿ ಏನಾದರೂ ಕೇಳಲೂ ಧೈರ್ಯವಿಲ್ಲದ ಆ ದಿನಗಳಲ್ಲಿ ಬರವಣಿಗೆಯೇ ಹೆಚ್ಚು ಇಷ್ಟವಾಯಿತು. ಕೈತುಂಬಾ ಕೃಷಿ ಕೆಲಸಗಳಿದ್ದವು. ಮಧ್ಯಾಹ್ನದ ಹೊತ್ತು ರಾತ್ರಿ ಹೊತ್ತು ಬಿಡುವು ಮಾಡಿಕೊಂಡು ಬರೆಯುತ್ತಿದ್ದೆ. ಹಾಗೆ ಬರೆದ ಕತೆ-ಲೇಖನಗಳು ಅಂದಿನ ಪತ್ರಿಕೆಗಳಾದ ನವಭಾರತ, ಪ್ರಜಾಮತ, ಕರ್ಮವೀರ, ಸಂಯುಕ್ತ ಕರ್ನಾಟಕ, ದಿನವಾಣಿ ಪತ್ರಿಕೆಗಳಲ್ಲಿ ಪ್ರಕಟವಾದವು. ನಿಯತ ಕಾಲಿಕೆಗಳು ನಡೆಸಿದ ಸ್ಪರ್ಧೆಗಳು ಬರೆಯುವ ಹುರುಪನ್ನು ಹೆಚ್ಚಿಸಿದವು. ಗ¨ªೆಯ ಕೆಲಸ, ಹಟ್ಟಿಯ ದನಕರುಗಳು, ಹಾಲಿನ ಡೈರಿ ಕೆಲಸ, ತೋಟದ ಅಡಿಕೆ ಕಾಯಕದ ನಡುವೆ ಅಡುಗೆ ಮನೆಯಲ್ಲಿ ದಿನವಿಡೀ ದುಡಿಮೆ. ಈ ದುಡಿಮೆಯ ಅಗ್ಗಿಷ್ಟಿಕೆಯಲ್ಲಿ ಹೊತ್ತು ಹೊತ್ತಿಗೆ ಮಾಡಬೇಕಾದ ಕೆಲಸಗಳ ಒತ್ತಡದ ನಡುವೆ ಬರಹ ನನಗಿಷ್ಟದ ಕಾಯಕ. ಚಿಮಿಣಿ ದೀಪವಿಟ್ಟು ರಾತ್ರಿ ದೀರ್ಘಕಾಲ ಕುಳಿತು ಬರೆಯುತ್ತಿದ್ದೆ. ಈ ಎಲ್ಲ ಅನುಭವಗಳೂ ನನಗೆ ಇಂದು ಸಂತೃಪ್ತಿಯನ್ನು ಕೊಟ್ಟಿವೆ. ನಿಮ್ಮ ಬರಹಗಳಿಗೆ ಅನೇಕ ಮನ್ನಣೆಯೂ ದೊರೆತಿದೆ…
2018ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದೆ. ಕರಾವಳಿ ಲೇಖಕಿ-ವಾಚಕಿಯರ ಸಂಘದ ಅಧ್ಯಕ್ಷತೆ ವಹಿಸುವ ಅವಕಾಶವೂ ಸಿಕ್ಕಿತು. ಲೇಖಕಿಯರು ಮೊದಲ ಬಾರಿಗೆ ನಡೆಸಿದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು 1994ರಲ್ಲಿ ವಹಿಸಿದ್ದೆ. ದೇವ ಕಾದಂಬರಿ ಮಂಗಳೂರು ವಿಶ್ವವಿದ್ಯಾಲಯದ ಪದವಿ ತರಗತಿ ಹಾಗೂ ಕೊಟ್ಟಾಯಂ ವಿಶ್ವವಿದ್ಯಾಲಯದ ಪಿಯುಸಿಗೆ ಪಠ್ಯಪುಸ್ತಕವಾಗಿದೆ. ಮಂದಾರ ಕಾದಂಬರಿ ಟೆಲಿಚಿತ್ರವಾಗಿದ್ದು, ಅದು ಧಾರಾವಾಹಿ ರೂಪದಲ್ಲಿ ಪ್ರಸಾರವಾಗಿದೆ. ಕಣ್ಣೂರು ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಸತ್ಯಭಾಮಾ ಮತ್ತು ಸುಬ್ರಹ್ಮಣ್ಯ ಪದವಿ ಕಾಲೇಜಿನ ಮೂಕಾಂಬಿಕಾ ಅವರು ನನ್ನ ಕಾದಂಬರಿ ಸಾಹಿತ್ಯ ಕುರಿತು ಅಧ್ಯಯನ ನಡೆಸಿ ಎಂ.ಫಿಲ್. ಪದವಿ ಪಡೆದಿದ್ದಾರೆ. ಇವನ್ನೆಲ್ಲ ನೋಡುವಾಗ ಗೃಹಕೃತ್ಯ, ಕೃಷಿ ಕಾಯಕದ ನಡುವೆ ನಾನು ಇಷ್ಟೆಲ್ಲ ನಿರ್ವಹಿಸಿದೆನಾ? ಎಂದು ನನಗೇ ಒಮ್ಮೊಮ್ಮೆ ಅನಿಸುವುದುಂಟು. ಅರ್ಧಾಂಗಿ, ಆಘಾತ, ಅನಿಶ್ಚಯ, ಅತಪೆ¤, ಅಲೋಕ, ಹೊಸಹೆಜ್ಜೆ, ಮಿನುಗು ಚುಕ್ಕೆ, ಸರಿದ ತೆರೆ ಸೇರಿದಂತೆ 20 ಕಾದಂಬರಿಗಳು, ಹಳ್ಳಿಗೆ ಬಂದ ಎಳೆಯರು, ಮಹಿಳೆ- ಪರಿವರ್ತನೆಯ ಹಾದಿಯಲ್ಲಿ, ಗ್ರಾಮೀಣ ಮಹಿಳೆಯರು ಮುಂತಾಗಿ 10 ಇತರ ಕೃತಿಗಳು, ವಸಂತದ ಹೂವುಗಳು, ಸಂಜೆ ಬಿಸಿಲು ಎಂಬ ಎರಡು ಕಥಾ ಸಂಕಲನ ಬರೆದೆ. ಕಾರುಣನಿಧಿ ಶ್ರೀ ಶಾರದಾ ಮಾತೆ, ಅನನ್ಯ ಅನುವಾದಕ ಶ್ರೀ ಅಹೋಬಲ ಶಂಕರ ಎಂಬ ಜೀವನ ಚರಿತ್ರೆಯೂ ಬರೆದೆ. ಈಗ ಮಗಳು ಲಲಿತಾ, ಮಗ ಎ. ಪಿ. ರಾಧಾಕೃಷ್ಣ , ಅಳಿಯ, ಸೊಸೆ, ಮೊಮ್ಮಕ್ಕಳ ಜೊತೆಗೆ ಜೀವನ ತುಸು ಆರಾಮವಾಗಿದೆ. ಬರವಣಿಗೆ ನನ್ನ ಕೈಹಿಡಿದು ನಡೆಸುತ್ತಿದೆ. ಜ್ಯೋತಿ