ಕಲಬುರಗಿ: ಬರುವ ಜನೇವರಿ ತಿಂಗಳಲ್ಲಿ ನಡೆಸಲು ಉದ್ದೇಶಿಸಿರುವ 85 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಕುರಿತಾಗಿ ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರಥಮ ಪೂರ್ವ ಸಿದ್ಧತಾ ಸಭೆ ನಡೆಯಿತು.
ಕಸಾಪ ಅಧ್ಯಕ್ಷ ಡಾ.ಮನು ಬಳಿಗಾರ ನೇತೃತ್ವ ಹಾಗೂ ಜಿಲ್ಲಾಧಿಕಾರಿ ಬಿ. ಶರತ್ ಅಧ್ಯಕ್ಷತೆಯಲ್ಲಿ ಸಭೆ ನಡೆದು ಸಮ್ಮೇಳನ ಜನವರಿ ಮಾಸಾಂತ್ಯ ಇಲ್ಲವೇ ಫೆಬ್ರವರಿ ತಿಂಗಳಿನ ಮೊದಲು ವಾರದಲ್ಲಿ ನಡೆಸುವ, ಸ್ಥಳ ಆಯ್ಕೆ ಸೇರಿದಂತೆ ಇತರ ಪ್ರಮುಖ ವಿಷಯಗಳ ಕುರಿತು ಪ್ರಮುಖವಾಗಿ ಚರ್ಚಿಸಲಾಯಿತು.
33 ವರ್ಷಗಳ ನಂತರ ಕಲ್ಯಾಣ ಕರ್ನಾಟಕ ಕಲಬುರಗಿಯಲ್ಲಿ ಕನ್ನಡದ ತೇರು ಎಳೆಯಲು ಉತ್ಸುಕತೆ ಹೊಂದಿರುವುದಾಗಿ ಹಿರಿಯ ಸಾಹಿತಿಗಳು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಸಾಹಿತ್ಯಾಸಕ್ತರು ಸಲಹೆ ನೀಡಿದರು.
ಸಭೆಯಲ್ಲಿ ಕರ್ನಾಟಕ ಕೇಂದ್ರೀಯ ವಿವಿಯ ಕುಲಪತಿ ಪ್ರೊ. ಎಚ್.ಎಂ. ಮಹೇಶ್ವರಯ್ಯ, ಜಿಲ್ಲಾ ಪಂಚಾಯತ್ ಸಿಇಓ ಡಾ. ಪಿ.ರಾಜಾ, ಹೆಚ್ಚುವರಿ ಡಿಸಿ ಶಂಕ್ರಣ್ಣ ವಣಿಕ್ಯಾಳ, ಕೇಂದ್ರ ಕಸಾಪ ಸಮಿತಿಯ ನಾರಾಯಣ, ಕಲಬುರಗಿ ಜಿಲ್ಲಾ ಕಸಾಪ ಅಧ್ಯಕ್ಷ ವೀರಭದ್ರ ಸಿಂಪಿ, ಹಿರಿಯ ಸಾಹಿತಿಗಳಾದ ಪ್ರೊ. ವಸಂತ ಕುಷ್ಠಗಿ, ಡಾ.ಪಿ.ಎಸ್. ಶಂಕರ, ಸ್ವಾಮಿರಾವ ಕುಲಕರ್ಣಿ, ಲಿಂಗರಾಜ ಶಾಸ್ತ್ರೀ, ವೀರಣ್ಣ ದಂಡೆ, ಮಹಿಪಾಲರೆಡ್ಡಿ ಮುನ್ನೂರ, ವಿಜಯಕುಮಾರ್ ತೇಗಲತಿಪ್ಪಿ, ಬಾಲ ಜಯಚಂದ್ರ ಶೆಟ್ಟಿ, ಪ್ರಕಾಶಕ ಬಸವರಾಜ್ ಕೊನೆಕ್ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.