Advertisement

ಉಷಾ ಪಿ.ರೈ ಸೇರಿದಂತೆ ಐವರಿಗೆ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ

11:01 PM Mar 06, 2020 | Lakshmi GovindaRaj |

ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿ ಶುಕ್ರವಾರ 2019ನೇ ಸಾಲಿನ “ಗೌರವ ಪ್ರಶಸ್ತಿ’, ಸಾಹಿತ್ಯ ಶ್ರೀ ಪ್ರಶಸ್ತಿಗಳನ್ನು ಮತ್ತು 2018ನೇ ಸಾಲಿನ ಪುಸ್ತಕ ಬಹುಮಾನ ಹಾಗೂ ಒಂಭತ್ತು ದತ್ತಿ ಬಹುಮಾನಗಳನ್ನು ಪ್ರಕಟಿಸಿದೆ. ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಅಮೂಲ್ಯ ಸೇವೆಯನ್ನು ಪರಿಗಣಿಸಿ, ಕಾದಂಬರಿಗಾರ್ತಿ ಉಡುಪಿಯ ಉಷಾ ಪಿ.ರೈ, ಹಿರಿಯ ಪತ್ರಕರ್ತ ಹಾಗೂ ಕಾದಂಬರಿಕಾರ ಬಾಬು ಕೃಷ್ಣಮೂರ್ತಿ ಸೇರಿದಂತೆ ಐವರು ಸಾಧಕರಿಗೆ ಅಕಾಡೆಮಿಯ ಗೌರವ ಪ್ರಶಸ್ತಿ ಪ್ರಕಟಿಸಿದೆ.

Advertisement

ಕನ್ನಡ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ.ವಸಂತಕುಮಾರ್‌ ಅವರು ವಿವಿಧ ಪ್ರಶಸ್ತಿಗಳನ್ನು ಪ್ರಕಟಿಸಿದರು. “ಅನುಶ್ರೇಣಿ-ಯಜಮಾನಿಕೆ’ ಕೃತಿ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿರುವ ಗುಬ್ಬಿ ತಾಲೂಕು ಕಲ್ಲೂರುನ ಪ್ರೊ.ಕೆ.ಜಿ.ನಾಗರಾಜಪ್ಪ, ಚಿತ್ರದುರ್ಗದ ಇತಿಹಾಸ ಸಂಶೋಧಕ ಪ್ರೊ.ಲಕ್ಷ್ಮಣ ತೆಲಗಾವಿ ಹಾಗೂ ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಬೆನಕನಾಳದ ಡಾ.ವೀರಣ್ಣ ರಾಜೂರ ಅವರನ್ನು ಅಕಾಡೆಮಿಯ ಗೌರವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿ ಐವತ್ತು ಸಾವಿರ ರೂ.ನಗದು ಮತ್ತು ಸ್ಮರಣಿಕೆ ಒಳಗೊಂಡಿದೆ ಎಂದು ತಿಳಿಸಿದರು.

ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಗಮನಾರ್ಹ ಸೇವೆಯನ್ನು ಪರಿಗಣಿಸಿ 2019ನೇ ಸಾಲಿನ ವರ್ಷದ “ಸಾಹಿತ್ಯಶ್ರೀ’ ಪ್ರಶಸ್ತಿಗೆ ಕಥೆಗಾರ ಅಮರೇಶ ನುಗಡೋಣಿ, ವಿಮರ್ಶಕ ಡಾ.ವಿ.ಎಸ್‌.ಮಾಳಿ, ಡಾ.ಮಾಧವ ಪೆರಾಜೆ, ವಸುಧೇಂದ್ರ, ಕವಿ ಸುಬ್ಬು ಹೊಲೆಯಾರ್‌, ಡಾ.ಜಿ.ಪ್ರಶಾಂತ ನಾಯಕ, ಡಾ.ಶಾರದಾ ಕುಪ್ಪಂ, ಪಿ.ಶಿವಣ್ಣ, ಕಾದಂಬರಿಗಾರ್ತಿ ಎಂ.ಎಸ್‌. ವೇದಾ, ಸಂಶೋಧಕರಾದ ಪ್ರೊ.ಎಫ್.ಟಿ.ಹಳ್ಳಗೇರಿ ಅವರನ್ನು ಆಯ್ಕೆ ಮಾಡಲಾಗಿದೆ. ಸಾಹಿತ್ಯ ಶ್ರೀ ಪ್ರಶಸ್ತಿ 25 ಸಾವಿರ ರೂ.ನಗದು ಮತ್ತು ಸ್ಮರಣಿಕೆ ಒಳಗೊಂಡಿದೆ.

ಅಂಕಣ ಬರಹಗಾರ ನರೇಂದ್ರ ರೈ ದೇರ್ಲ ಸೇರಿದಂತೆ 19 ಲೇಖಕರ ವಿವಿಧ ಕೃತಿಗಳು ಅಕಾಡೆಮಿಯ 2018ನೇ ಸಾಲಿನ “ಪುಸ್ತಕ ಬಹುಮಾನ ಪ್ರಶಸ್ತಿ’ಗೆ ಹಾಗೂ ಹಿರಿಯ ಲೇಖಕ ಲಕ್ಷ್ಮೀಶ ತೋಳ್ಪಾಡಿ ಸೇರಿದಂತೆ 9 ಮಂದಿ ವಿವಿಧ ಕ್ಷೇತ್ರಗಳ ಬರಹಗಾರರು ಅಕಾಡೆಮಿಯ 2018ನೇ ಸಾಲಿನ “ವಿವಿಧ ದತ್ತಿನಿಧಿ ಬಹುಮಾನ’ಕ್ಕೆ ಭಾಜನರಾಗಿದ್ದಾರೆ. ಈ ಪ್ರಶಸ್ತಿಗಳು ತಲಾ 25 ಸಾವಿರ ರೂ.ನಗದು ಮತ್ತು ಸ್ಮರಣಿಕೆ ಒಳಗೊಂಡಿದೆ. ಮಾರ್ಚ್‌ ಅಂತ್ಯದಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅವರು ತಿಳಿಸಿದರು.

2018ನೇ ಸಾಲಿನ ಪುಸ್ತಕ ಬಹುಮಾನ ಪಡೆದವರು: ಎಚ್‌.ಎನ್‌.ಆರತಿ (ಸ್ಮೋಕಿಂಗ್‌ ಝೋನ್‌), ವಿಲ್ಸನ್‌ ಕಟೀಲ್‌ (ನಿಷೇಧಕ್ಕೊಳಪಟ್ಟ ಒಂದು ನೋಟು), ಕಾ.ತ.ಚಿಕ್ಕಣ್ಣ (ಮಳೆ ಬಯಲು), ಎಸ್‌.ಗಂಗಾಧರಯ್ಯ (ದೇವರ ಕುದುರೆ), ಹೂಲಿ ಶೇಖರ (ಸುಳಿವಾತ್ಮ ಎನ್ನೊಳಗೆ), ಜಿ.ಕೆ.ರವೀಂದ್ರಕುಮಾರ್‌ ( ತಾರಸಿ ಮಲ್ಹಾರ್‌), ಪ್ರಸಾದ್‌ ನಾಯ್ಕ (ಹಾಯ್‌ ಅಂಗೋಲಾ), ಮ.ಸು.ಮನ್ನಾರ್‌ ಕೃಷ್ಣರಾವ್‌( ಸರ್ದಾರ್‌ ವಲ್ಲಭಭಾಯ್‌ ಪಟೇಲ್‌), ಎಸ್‌.ಆರ್‌.ವಿಜಯಶಂಕರ (ವಸುಧಾ ವಲಯ), ಪ್ರೊ. ಶಿವರಾಮಯ್ಯ (ಪಂಪಭಾರತ ಸಂಪುಟ1 ಮತ್ತು 2),

Advertisement

ಬಸು ಬೇವಿನಗಿಡದ (ಓಡಿ ಹೋದ ಹುಡುಗ), ಸುಧೀಂದ್ರ ಹಾಲೊಡ್ಡೇರಿ (ಸುದ್ಧು! ಸಂಶೋಧನೆ ನಡೆಯುತ್ತಿದೆ), ರವಿ ಹಂಜ್‌ (ಹುಯೆನ್‌ ತ್ಸಾಂಗನ ಮಹಾ ಪಯಣ), ಡಾ.ಪಂಡಿತ ಕೆ.ರಾಥೋಡ್‌ (ಕರ್ನಾಟಕದಲ್ಲಿ ಧಾರ್ಮಿಕ ಸಂಘರ್ಷ), ಎಂ.ಮಾಧವ ಪೈ (ಸಾವಿತ್ರಿ), ಡಿ.ಎನ್‌.ಶ್ರೀನಾಥ್‌ (ಕನ್ನಡ ಕಿ ಚರ್ಚಿತ್‌ ಬೀಸ್‌ ಕಹಾನಿಯಾ), ನರೇಂದ್ರ ರೈ ದೇರ್ಲ (ನೆಲಮುಖೀ), ಪುಂಡಲೀಕ ಕಲ್ಲಿಗನೂರು (ಶಿಲ್ಪಕಲಾ ದೇಗುಲಗಳು), ಪ್ರೊ.ಕೆ.ಸುಮಿತ್ರಾಬಾಯಿ (ಸೂಲಾಡಿ ಬಂದೋ ತಿರುತಿರುಗೀ).

2018ನೇ ಸಾಲಿನ ವಿವಿಧ ದತ್ತಿ ನಿಧಿ ಬಹುಮಾನ ಪಡೆದವರು: ಸ್ಮಿತಾ ಮಾಕಳ್ಳಿ (ಒಂದು ಅಂಕ ಮುಗಿದು), ಡಾ.ಲೋಕೇಶ ಅಗಸನಕಟ್ಟೆ (ಅತೀತ ಲೋಕದ ಮಹಾಯಾತ್ರಿಕ), ಚಿದಾನಂದ ಸಾಲಿ (ಮೂರನೇ ಕಣ್ಣು), ಚಂಸು ಪಾಟೀಲ (ಬೇಸಾಯದ ಕತಿ), ಸುರೇಶ್‌ ನಾಗಲಮಡಿಕೆ (ಹಲವು ಬಣ್ಣದ ಹಗ್ಗ), ಜಿ.ರಾಮನಾಥ ಭಟ್‌ (ರವೀಂದ್ರ ಗದ್ಯ ಸಂಚಯ), ಡಾ.ಲಕ್ಷ್ಮಣ ವಿ.ಎನ್‌ (ಎಲೆಕ್ಟ್ರಾನಿಕ್‌ ಬೇಲಿ ಮತ್ತು ಪಾರಿವಾಳ), ಎನ್‌. ತಿರುಮಲೇಶ್ವರ ಭಟ್‌ (the other face ಮೂಲ: ಮೊಗಸಾಲೆ), ಲಕ್ಷ್ಮೀಶ ತೋಳ್ಪಾಡಿ ( ಮಹಾಭಾರತ ಅನುಸುಂಧಾನ ಭಾರತ ಯಾತ್ರೆ).

ಸೀಮಾತೀತ ಸಾಹಿತ್ಯ ಪರ್ಬ: ಈ ಹಿಂದಿನ ಸಾಹಿತ್ಯ ಅಕಾಡೆಮಿ ಅಧ್ಯಕ್ಷರು “ಸೀಮಾತೀತ ಸಾಹಿತ್ಯ ಪರ್ಬ’ ಎಂಬ ಸಾಹಿತ್ಯ ಕುರಿತ ಸಮಾವೇಶವನ್ನು ಹಮ್ಮಿಕೊಂಡಿದ್ದರು. ನಾನಾ ಕಾರಣಗಳಿಂದ ಆ ಕಾರ್ಯಕ್ರಮ ನಿಂತು ಹೋಗಿತ್ತು. ಆ ಕಾರ್ಯಕ್ರಮವನ್ನು ಮತ್ತೆ ಹಮ್ಮಿಕೊಳ್ಳುವ ಬಗ್ಗೆ ಅಕಾಡೆಮಿ ಆಲೋಚಿಸುತ್ತಿದೆ. ಇದರ ಜತೆಗೆ “ಕನ್ನಡ ಸಾಹಿತ್ಯದಲ್ಲಿ ಜೀವನ ಮೌಲ್ಯ ಮಾಲೆ, “ದೇಶಿ ದರ್ಶನ ಮಾಲೆ’ ಸೇರಿದಂತೆ ಹಲವು ಯೋಜನೆಗಳನ್ನು ಅಕಾಡೆಮಿ ರೂಪಿಸುತ್ತಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ.ವಸಂತಕುಮಾರ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next