ಉಳ್ಳಾಲ/ಉಡುಪಿ/ಪುತ್ತೂರು: ಕರ್ನಾಟಕ ಸಾಹಿತ್ಯ ಅಕಾಡೆಮಿಯ ವಿವಿಧ ಪ್ರಶಸ್ತಿಗಳ ಪ್ರದಾನ ಸಮಾರಂಭ ಸೆ. 12ರಂದು ಬೆಂಗಳೂರಿನಲ್ಲಿ ನಡೆದಿದ್ದು, ಅನಿವಾರ್ಯ ಕಾರಣದಿಂದ ಗೈರುಹಾಜರಾಗಿದ್ದ ಕರಾವಳಿಯ ಹಿರಿಯ ಸಾಹಿತಿಗಳಾದ ಡಾ| ಅಮೃತ ಸೋಮೇಶ್ವರ, ಲಕ್ಷ್ಮೀಶ ತೋಳ್ಪಾಡಿ ಮತ್ತು ಡಾ| ಮಹಾಬಲೇಶ್ವರ ರಾವ್ ಅವರ ನಿವಾಸಕ್ಕೇ ತೆರಳಿ ಪ್ರದಾನ ಮಾಡಿ ಗೌರವಿಸುವ ಕಾರ್ಯಕ್ರಮವು ಸೋಮವಾರ ನಡೆಯಿತು.
ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಡಾ| ಬಿ.ವಿ. ವಸಂತ ಕುಮಾರ್, ಸದಸ್ಯರಾದ ಡಾ| ಬಿ.ಎಂ. ಶರಭೇಂದ್ರ ಸ್ವಾಮಿ, ರಿಜಿಸ್ಟ್ರಾರ್ ಎನ್. ಕರಿಯಪ್ಪ ಅವರು ಹಿರಿಯರನ್ನು ಗೌರವಿಸಿದರು.
ಅಮೃತ ಸೋಮೇಶ್ವರ ಅವರಿಗೆ “ಗೌರವಶ್ರೀ’ ಪ್ರಶಸ್ತಿ
ಉಳ್ಳಾಲ: ಹಿರಿಯ ಜನಪದ ವಿದ್ವಾಂಸ, ಸಾಹಿತಿ ಡಾ| ಅಮೃತ ಸೋಮೇಶ್ವರ ಅವರಿಗೆ ಸಾಹಿತ್ಯ ಅಕಾಡೆಮಿಯ 2020ನೇ ಸಾಲಿನ “ಗೌರವ ಶ್ರೀ’ ಪ್ರಶಸ್ತಿಯನ್ನು ಸೋಮೇಶ್ವರದಲ್ಲಿರುವ ಸ್ವಗೃಹ “ಒಲುಮೆ’ಯಲ್ಲಿ ಪ್ರದಾನ ಮಾಡಲಾಯಿತು.
ಇದನ್ನೂ ಓದಿ:ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕೆ ಸಂಬಂಧಿಸಿ ವಿಟಿಯು ಜತೆ ಚರ್ಚೆ
ಈ ಸಂದರ್ಭದಲ್ಲಿ ಅಮೃತ ಸೋಮೇಶ್ವರ ಅವರ 86ನೇ ಹುಟ್ಟುಹಬ್ಬದ ಆಚರಣೆಯೂ ನಡೆಯಿತು. ಮಂಗಳೂರು ಆಕಾಶವಾಣಿ ಕೇಂದ್ರದ ಮುಖ್ಯಸ್ಥ ಸೂರ್ಯನಾರಾಯಣ ಭಟ್, ನರ್ಮದಾ ಅಮೃತಾ ಸೋಮೇಶ್ವರ, ಚೇತನ್ ಸೋಮೇಶ್ವರ, ಜೀವನ್ ಸೋಮೇಶ್ವರ, ರಾಜೇಶ್ವರಿ, ಸತ್ಯ ಜೀವನ್, ಸೃಜನ್ ಸೋಮೇಶ್ವರ ಹಾಗೂ ಸೃಷ್ಟಿ ಸೋಮೇಶ್ವರ ಉಪಸ್ಥಿತರಿದ್ದರು.