ಕಲಬುರಗಿ: ಸಹರಾ ಹಾಗೂ ಬಿರ್ಲಾ ಡೈರಿಗಳಲ್ಲಿನ ಅಂಶಗಳ ಕುರಿತು ಸಿಬಿಐಗೆ ವಹಿಸಿ ತನಿಖೆ ಮಾಡಿಸಲಿ. ಬಳಿಕ ಕರ್ನಾಟಕದಲ್ಲಿ ಸಿಕ್ಕಿದೆ ಎನ್ನಲಾಗುತ್ತಿರುವ ನಕಲಿ ಡೈರಿಯನ್ನು ಸಿಬಿಐಗೆ ಒಪ್ಪಿಸೋಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿಗೆ ಸವಾಲು ಹಾಕಿದರು.
ಗುಲಬರ್ಗಾ ವಿವಿ ಆವರಣದ ಹೆಲಿಪ್ಯಾಡ್‌ನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಸಿಕ್ಕಿರುವುದು ನಕಲಿ ಡೈರಿ. ಅದರ ಅಂಶಗಳ ಕುರಿತು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ.
ಅದನ್ನು ಬಿಟ್ಟು ಬಿಜೆಪಿಗರು, ಮೊದಲು ಸಹರಾ ಮತ್ತು ಬಿರ್ಲಾ ಡೈರಿ ಕುರಿತುತನಿಖೆ ಮಾಡಿ ಜನತೆಗೆ ಉತ್ತರ ಕೊಡಲಿ. ಆಗಲಾದರೂ ಜನರಿಗೆ ಮೋದಿ ಮೇಲೆ ನಂಬಿಕೆ ಬರಬಹುದು. ಬಳಿಕ ನಮ್ಮದು ಎನ್ನಲಾಗುತ್ತಿರುವ ಡೈರಿ ಕುರಿತು ತನಿಖೆ ಮಾಡಿಸೋಣ ಎಂದು ಹೇಳಿದರು.
ಈ ಮೊದಲು ಯುಪಿಎ ಸರ್ಕಾರ ಇದ್ದಾಗ ಸಿಬಿಐ ತನಿಖಾ ಸಂಸ್ಥೆ ಮೇಲೆ ಇಲ್ಲದ ನಂಬಿಕೆ, ಈಗ ಎನ್‌ಡಿಎ ಅಧಿಕಾರಕ್ಕೆ ಬರುತ್ತಿದ್ದಂತೆ ಹೇಗೆ ಬರುತ್ತದೆ? ಸಿಬಿಐ ಅಂದರೆ ಚೋರ್ ಬಚಾವೋ ಸಂಸ್ಥೆ ಅಂತಾ ಕರೆದಿರಲಿಲ್ಲವೇ? ಅಂತಹವರಿಗೆ ಈಗ ಏಕಾಏಕಿಯಾಗಿ ನಂಬಿಕೆ ಬಂದಿರುವುದರ ಹಿಂದೆ ಕೀಳು ರಾಜಕೀಯ ಸೇರಿಕೊಂಡಿದೆ ಎಂದರು.
ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವ ವಿಶ್ವಾಸವ್ಯಕ್ತಪಡಿಸಿದ ಅವರು, ರಾಜ್ಯದಲ್ಲಿನ ಎಲ್ಲ ವಿವಿಗಳಲ್ಲಿ ಸ್ಥಾಪನೆ ಮಾಡಿರುವ ದಾರ್ಶನಿಕರ ಅಧ್ಯಯನ ಪೀಠಗಳಿಗೆ ಶೀಘ್ರ ಹಣ ಬಿಡುಗಡೆ ಮಾಡಲಾಗುವುದು. ಪ್ರತಿಯೊಂದು ಪೀಠ ನಿರ್ದಿಷ್ಟ ಕೆಲಸ ಮಾಡಲಿದೆ ಎಂದು ತಿಳಿಸಿದರು.