ಶಿರಸಿ: ರಾಜ್ಯ ಸರಕಾರ ನೀಡುವ ಸಹಕಾರಿ ರತ್ನ ಪ್ರಶಸ್ತಿ ಇಲ್ಲಿನ ಕದಂಬ ಮಾರ್ಕೇಟಿಂಗ್ ಅಧ್ಯಕ್ಷ ಶಂಭುಲಿಂಗ ಹೆಗಡೆ ನಡಗೋಡ ಅವರಿಗೆ ಪ್ರಕಟವಾಗಿದೆ.
1980ರ ದಶಕದಿಂದ ಸಹಕಾರಿ ಸೇವೆ ಆರಂಭಿಸಿದ ಶಂಭುಲಿಂಗ ಹೆಗಡೆ ಅವರು ಆರಂಭದಲ್ಲಿ ಹುಳಗೋಳ ಸೊಸೈಟಿ ಮೂಲಕ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದರು. ಬಳಿಕ ತಾರಗೋಡ ಡೇರಿ, ಧಾರವಾಡ ಹಾಲು ಒಕ್ಕೂಟ, ಡೆವಲಪ್ ಮೆಂಟ್ ಸೊಸೈಟಿ, ಕ್ಯಾಂಪ್ಕೋ, ಕೆಎಂಎಪ್ ಗಳಲ್ಲೂ ಸೇವೆ ನೀಡಿದ್ದಾರೆ. ಪ್ರಸ್ತುತ ಕದಂಬ ಮಾರ್ಕೆಟಿಂಗ್ ಅಧ್ಯಕ್ಷರಾಗಿ, ಎರಡನೇ ಅವಧಿಗೆ ಕ್ಯಾಂಪ್ಕೋ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ.
1972ರಿಂದಲೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಕ್ರೀಯ ಕಾರ್ಯಕರ್ತರಾಗಿರುವ ಶಂಭುಲಿಂಗ ಹೆಗಡೆ, 1978ರ ತುರ್ತು ಪರಿಸ್ಥಿತಿಯಲ್ಲೂ ಪೂರ್ಣಾವಧಿ ಕಾರ್ಯಕರ್ತರಾಗಿದ್ದರು. ಕದಂಬ ಮಾರ್ಕೇಟಿಂಗ್ ತನ್ನ ವಿಶಿಷ್ಟ ಸೇವೆಯ ಮೂಲಕ ಗಮನ ಸೆಳೆದಿದ್ದು, ಅದರ ನೇತೃತ್ವ ಇವರದ್ದೇ ಆಗಿದೆ.
ಪ್ರಾಮಾಣಿಕ ಸಹಕಾರಿ ಕಾರ್ಯಕರ್ತ ಎಂಬ ಬಣ್ಣ ನೆಯೂ ಇದೆ. ಬಿಜೆಪಿಯಲ್ಲೂ ಹಲವು ಹಂತದ ಕಾರ್ಯಕರ್ತರಾಗಿ ಕೆಲಸ ಮಾಡಿದ್ದಾರೆ ಎಂಬುದು ಉಲ್ಲೇಖನೀಯ.
ಶಂಭುಲಿಂಗ ಹೆಗಡೆ ಅವರಿಗೆ ಸಹಕಾರಿ ರತ್ನ ಪ್ರಶಸ್ತಿ ಬಂದಿದ್ದು ಖುಷಿ ತಂದಿದೆ ಎಂದು ಕದಂಬ ಟ್ರೇಡ್ ಅಧ್ಯಕ್ಷ ಶ್ರೀಪಾದ ಹೆಗಡ ದೊಡ್ನಳ್ಳಿ, ಕದಂಬ ಉಪಾಧ್ಯಕ್ಷ ಎಂವಿ.ಭಟ್ಟ ತಟ್ಟೀಕೈ, ನಿಕಟಪೂರ್ವ ವ್ಯವಸ್ಥಾಪಕ ವಿಶ್ವೇಶ್ವರ ಭಟ್ಟ ಕೋಟೆಮನೆ ಅಭಿನಂದಿಸಿದ್ದಾರೆ.