ಸಾಗರ: ನಗರದ ಹೊರವಲಯದಲ್ಲಿರುವ ತಾಲೂಕಿನ ಶಿರವಾಳ ಗ್ರಾಮದಲ್ಲಿ ನಿರ್ಮಾಣಗೊಳ್ಳುತ್ತಿರುವ ಮಲಿನ ನೀರು ಶುದ್ಧೀಕರಣ ಘಟಕದ ಕಾಮಗಾರಿಯನ್ನು ಸಾಧ್ಯವಾದಷ್ಟು ಚುರುಕುಗೊಳಿಸಬೇಕು ಎಂದು ಶಾಸಕ ಎಚ್. ಹಾಲಪ್ಪ ಅಧಿಕಾರಿಗಳಿಗೆ ಸೂಚಿಸಿದರು.
ಕಾಮಗಾರಿಯ ಪ್ರಗತಿ ವೀಕ್ಷಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 70 ಕೋಟಿ ರೂ. ವೆಚ್ಚದಲ್ಲಿ ನಗರ ವ್ಯಾಪ್ತಿಯಲ್ಲಿ ನಡೆದಿರುವ ಒಳಚರಂಡಿ ಕಾಮಗಾರಿ ಮುಕ್ತಾಯದ ಹಂತಕ್ಕೆ ಬಂದಿದೆ. ಈ ಕಾಮಗಾರಿಯ ಪೈಪ್‌ಲೈನ್ ಮೂಲಕ ಸಾರ್ವಜನಿಕರ ಮನೆಗಳಿಂದ ಹರಿಯುವ ತ್ಯಾಜ್ಯ ನೀರನ್ನು ಶುದ್ಧೀಕರಣ ಘಟಕಕ್ಕೆ ಹರಿಸಿ ಶುದ್ಧೀಕರಣಗೊಳಿಸಿದ ನಂತರ ವರದಾ ನದಿಗೆ ಹರಿಸಲಾಗುವುದು ಎಂದು ತಿಳಿಸಿದರು.
ಒಳಚರಂಡಿ ಕಾಮಗಾರಿಗೆ ಸಂಬಂಧಿಸಿ ನಗರ ವ್ಯಾಪ್ತಿಯಲ್ಲಿ 9.5 ಕಿಮೀ ಉದ್ದದ ಪೈಪ್‌ಲೈನ್ ಅಳವಡಿಸುವ ಕಾರ್ಯ ಬಾಕಿ ಇದೆ. ಕೆಲವು ಖಾಸಗಿ ವ್ಯಕ್ತಿಗಳು ಪೈಪ್‌ಲೈನ್ ಕಾಮಗಾರಿಗೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಗೆ ಅಡ್ಡಿಪಡಿಸುತ್ತಿರುವುದರಿಂದ ಈ ಕಾಮಗಾರಿ ನನೆಗುದಿಗೆ ಬಿದ್ದಿದೆ. ಮುಂದಿನ ಒಂದು ವಾರದೊಳಗೆ ಸಂಬಂಧಪಟ್ಟ ಅಧಿಕಾರಿಗಳ ಸಭೆ ಕರೆದು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.
ಮಲಿನ ನೀರು ಶುದ್ಧೀಕರಣ ಘಟಕದ ಕಾಮಗಾರಿ ಸಂಪೂರ್ಣ ಮುಕ್ತಾಯಗೊಳ್ಳುವವರೆಗೂ ಒಳ ಚರಂಡಿ ಕಾಮಗಾರಿ ಪೈಪ್‌ಲೈನ್‌ನ ಸಂಪರ್ಕವನ್ನು ಮನೆಗಳಿಗೆ ನೀಡುವುದು ಬೇಡ ಎಂದು ತಿಳಿಸಿದ್ದೆ. ಆದರೆ ಹಿಂದಿನ ನಗರಸಭೆಯ ಜನಪ್ರತಿನಿಧಿಗಳ ಒತ್ತಾಯದ ಕಾರಣಕ್ಕೆ ಕೆಲವು ಮನೆಗಳಿಗೆ ಈಗಾಗಲೇ ಸಂಪರ್ಕ ಕಲ್ಪಿಸಲಾಗಿದೆ. ಕಾಮಗಾರಿಗಳ ಕಾರಣಕ್ಕೆ ಮತ್ತೆ ಮತ್ತೆ ರಸ್ತೆ ಅಗೆಯುವ ಕಾರ್ಯ ನಡೆಯಬಾರದು ಎಂದು ಅವರು ಮಾಹಿತಿ ನೀಡಿದರು.
ಒಳಚರಂಡಿ ವಿಭಾಗದ ಕಾರ್ಯಪಾಲಕ ಅಭಿಯಂತರ ಚಂದ್ರಶೇಖರ್ ಮಾತನಾಡಿ, ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿ ಮಲಿನ ನೀರು ಶುದ್ಧೀಕರಣ ಘಟಕವನ್ನು 13.5 ಕೋಟಿ ರೂ. ವೆಚ್ಚದಲ್ಲಿ ಸಿದ್ಧಗೊಳಿಸಲಾಗುತ್ತಿದೆ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಈಗಾಗಲೇ ಈ ಕಾಮಗಾರಿಗೆ ಅನುಮೋದನೆ ನೀಡಿದೆ ಎಂದು ತಿಳಿಸಿದರು.
ಶಿರವಾಳ ಗ್ರಾಮದ ಸ.ನಂ. 46ರಲ್ಲಿರುವ ಮೂರು ಕಾಲು ಎಕರೆ ಪ್ರದೇಶದಲ್ಲಿ ಶುದ್ಧೀಕರಣ ಘಟಕ ನಿರ್ಮಾಣಗೊಳ್ಳುತ್ತಿದ್ದು, 90 ಲಕ್ಷ ಲೀಟರ್ ನೀರನ್ನು ಸಂಗ್ರಹಿಸುವ ಸಾಮರ್ಥ್ಯ ಹೊಂದಿದೆ. ಈಗಾಗಲೇ ಶೇ 25ರಷ್ಟು ಕಾಮಗಾರಿ ಮುಕ್ತಾಯಗೊಂಡಿದೆ. ಒಳಚರಂಡಿ ಕಾಮಗಾರಿ ಪೈಪ್‌ಲೈನ್‌ಗೆ ಒಟ್ಟು 12,750 ಮನೆಗಳ ತ್ಯಾಜ್ಯ ನೀರನ್ನು ಸಂಗ್ರಹಿಸಲಾಗುವುದು. ಈಗಾಗಲೇ 1,656 ಮನೆಗಳ ತ್ಯಾಜ್ಯ ನೀರನ್ನು ಹರಿಸಲು ಪೈಪ್‌ಲೈನ್‌ಗೆ ಸಂಪರ್ಕ ಕಲ್ಪಿಸುವ ಕಾಮಗಾರಿ ಮುಕ್ತಾಯಗೊಂಡಿದೆ. ಸರ್ಕಾರ ಇದಕ್ಕೆ 25.05 ಕೋಟಿ ರೂ. ಮಂಜೂರು ಮಾಡಿದೆ ಎಂದು ತಿಳಿಸಿದರು.