ಸಾಗರ: ನಗರದ ಜನರಿಗೆ ಸಮರ್ಪಕ ಕುಡಿಯುವ ನೀರು ಪೂರೈಕೆ ಮಾಡುವಲ್ಲಿ ಆಡಳಿತ ಅಗತ್ಯ ಕ್ರಮ ಕೈಗೊಳ್ಳಬೇಕು. ನಿಮ್ಮ ತಪ್ಪಿನಿಂದಾಗಿ ಜನರು ನೀರಿಗೆ ಪರದಾಡುವಂತಾದರೆ ಸಹಿಸಿಕೊಂಡು ಸುಮ್ಮನೆ ಇರಲು ಸಾಧ್ಯವಿಲ್ಲ ಎಂದು ಶಾಸಕ ಎಚ್. ಹಾಲಪ್ಪ ಕಟುವಾಗಿ ಎಚ್ಚರಿಕೆ ನೀಡಿದ್ದಾರೆ.
ನಗರದ ವರದಹಳ್ಳಿ ರಸ್ತೆಯಲ್ಲಿರುವ ನಗರಸಭೆಯ ಕುಡಿಯುವ ನೀರಿನ ಜಲ ಶುದ್ಧೀಕರಣ ಘಟಕಕ್ಕೆ ಗುರುವಾರ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದ ಅವರು, ನಾನು ಶಾಸಕನಾಗಿ ಆಯ್ಕೆಯಾದ ತಕ್ಷಣ ಕಾರ್ಗಲ್ ಮತ್ತು ಸಾಗರದಲ್ಲಿರುವ ಕುಡಿಯುವ ನೀರಿನ ಘಟಕಕ್ಕೆ ಭೇಟಿ ನೀಡಿದಾಗ ಅಲ್ಲಿನ ಅವ್ಯವಸ್ಥೆ ನೋಡಿ ಬೇಸರಗೊಂಡಿದ್ದೆ ಎಂದು ಹೇಳಿದರು.
ಜಲಶುದ್ಧೀಕರಣ ಘಟಕ ಯಾವ ನೀಲನಕ್ಷೆ ಇರಿಸಿಕೊಂಡು ನಿರ್ಮಾಣ ಮಾಡಿದ್ದಾರೋ ಗೊತ್ತಿಲ್ಲ. ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನೆ ಮಾಡಿದಾಗ ನನಗೆ ಕಾಗೋಡು ತಿಮ್ಮಪ್ಪ ಅವರನ್ನು ಶಾಸಕರು ವಿರೋಧಿಸುತ್ತಿದ್ದಾರೆ ಎನ್ನುವ ಪಟ್ಟ ಕಟ್ಟಿದರು. ನಿಜಕ್ಕೂ ಕಾರ್ಗಲ್ನಲ್ಲಿ ನಿರ್ಮಾಣ ಮಾಡಿರುವ ಜಲಶುದ್ಧೀಕರಣ ಘಟಕದಲ್ಲಿ ಅಳವಡಿಸಿರುವ ಪಂಪ್, ಪ್ಯಾನಲ್ ಬೋರ್ಡ್ ಕಳಪೆಯದ್ದಾಗಿದೆ. ಇಷ್ಟು ದಿನ ಹೇಗೋ ಅದು ಕೆಲಸ ಮಾಡಿಕೊಂಡು ಬಂದಿದೆ. ಜೊತೆಗೆ ಪದೇಪದೇ ರಿಪೇರಿಗೆ ಬಂದು ಜನರಿಗೆ ನೀರಿನ ಸಮಸ್ಯೆ ಉಂಟಾಗುತ್ತಿದೆ ಎಂದು ಹೇಳಿದರು.
ಇಲ್ಲಿ ಅಳವಡಿಸಿರುವ ಪಂಪ್‌ಗ್ಳನ್ನು ಬೆಲ್ಜಿಯಂ ದೇಶದಿಂದ ಆಮದು ಮಾಡಿಕೊಳ್ಳಲಾಗಿದೆ. ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಫಿಟಿಂಗ್ ಮಾಡಿ ಇಲ್ಲಿಗೆ ತಂದು ಅಳವಡಿಸಲಾಗಿದೆ. ನಮ್ಮ ದೇಶದಲ್ಲಿಯೆ ಉತ್ತಮ ಕಂಪನಿಗಳಿದ್ದರೂ ಅಲ್ಲಿಂದ ಖರೀದಿ ಮಾಡಿಲ್ಲ. ಗುತ್ತಿಗೆದಾರ ಕಡಿಮೆ ದರದಲ್ಲಿ ಖರೀದಿ ಮಾಡಿ ಕಳಪೆ ಕಾಮಗಾರಿ ನಿರ್ವಹಿಸಿದ್ದಾನೆ. ಕಾಮಗಾರಿ ನನಗೆ ತೃಪ್ತಿ ತಂದಿಲ್ಲ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಪೂರ್ಣ ಕಾಮಗಾರಿ ಕುರಿತು ತನಿಖೆ ನಡೆಸುವಂತೆ ಮನವಿ ಮಾಡಲಾಗುತ್ತದೆ ಎಂದು ತಿಳಿಸಿದರು. ನಗರಸಭೆ ಸದಸ್ಯರಾದ ಟಿ.ಡಿ. ಮೇಘರಾಜ್, ಕೆ.ಆರ್. ಗಣೇಶಪ್ರಸಾದ್, ರವಿ ಉಡುಪ, ಲಿಂಗರಾಜ್, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಕೆ.ಎಚ್. ನಾಗಪ್ಪ, ಚಂದ್ರಶೇಖರ್, ವಿಠ್ಠಲ್ ಹೆಗಡೆ, ಚೇತನರಾಜ್, ರವೀಂದ್ರ, ವಿನಾಯಕ ಮನೆಘಟ್ಟ ಇನ್ನಿತರರು ಇದ್ದರು.