ಸಾಗರ: ಕಳೆದ ವರ್ಷ 97 ಜನ ಮಂಗನ ಕಾಯಿಲೆಯಿಂದ ಬಾಧಿತರಾಗಿ ಇಡೀ ತಾಲೂಕಿನ ಜನರಲ್ಲಿ ಜೀವಭಯವನ್ನು ಉಂಟು ಮಾಡಿದ್ದ ಕ್ಯಾಸನೂರು ಅರಣ್ಯ ಕಾಯಿಲೆಯ ಪ್ರತಿಬಂಧಕ ಲಸಿಕೆ ವಿಚಾರದಲ್ಲಿ ಅರಲಗೋಡು ಪ್ರಾಥಮಿಕ ಆರೋಗ್ಯ ಕೇಂದ್ರದ 17 ಹಳ್ಳಿಗಳ ಶೇ. 66ರಷ್ಟು ಮಂದಿ ಮಾತ್ರ ಮೂರನೇ ಹಂತದ ಬೂಸ್ಟರ್ ಡೋಸ್ ತೆಗೆದುಕೊಂಡಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಇನ್ನೊಮ್ಮೆ ಜಾಗೃತಿ ಕ್ಯಾಂಪ್ ಮಾಡಿ ಹೆಚ್ಚಿನ ಪ್ರಗತಿ ಸಾಧಿಸಲು ತೀರ್ಮಾನಿಸಿದೆ.
ಅರಳಗೋಡು, ನೆಲ್ಲಿಮಕ್ಕಿ, ಜೀಗಳ, ವಾಟೆಮಕ್ಕಿ, ಮರಬೀಡಿ, ಇಟ್ಟಿಗೆ, ಐತುಮನೆ, ಸಂಪ, ಮರಾಠಿಕೇರಿ, ಯಲಕೋಡು, ಸೀತಾಳಬಾವಿ, ನಂದೋಡಿ, ಕಣಗಲಘಟ್ಟ, ಬಣ್ಣುಮನೆ, ದೊಂಬೇಕೈ, ಹೊನ್ನೆಮಕ್ಕಿ ಹಾಗೂ ಕಂಜಿಕೈ ಗ್ರಾಮಗಳ 782 ಗ್ರಾಮಸ್ಥರಲ್ಲಿ ಕೇವಲ 420 ಜನರು ಮಾತ್ರ ಮೂರನೇ ಹಂತದ ಬೂಸ್ಟರ್ ಡೋಸ್ ತೆಗೆದುಕೊಂಡಿದ್ದಾರೆ. ಮೊದಲ ಹಂತದಲ್ಲಿ ಶೇ. 97, ಎರಡನೇ ಹಂತದಲ್ಲಿ ಶೇ. 84ರ ಸಾಧನೆ ಮಾಡಿದ್ದ ಆರೋಗ್ಯ ಇಲಾಖೆ ಆರು ತಿಂಗಳ ನಂತರ ತೆಗೆದುಕೊಳ್ಳುವ ಮೂರನೇ ಡೋಸ್ ವಿಚಾರದಲ್ಲಿ ಜನರ ಮವೊಲಿಸುವಲ್ಲಿ ವಿಫಲವಾಗಿದೆ. ಕಳೆದ ವರ್ಷ 21 ಜನ ಕೆಎಫ್‌ಡಿ ಕಾರಣದಿಂದ ಈ ಭಾಗದಲ್ಲಿ ಸಾವನ್ನಪ್ಪಿರುವುದನ್ನು ಇಲ್ಲಿ ಸ್ಮರಿಸಬಹುದು.
ಈ ಬಗ್ಗೆ ಪ್ರತಿಕ್ರಿಯಿಸಿದ ತಾಲೂಕು ಆರೋಗ್ಯಾಧಿಕಾರಿ ಡಾ| ಮುನಿ ವೆಂಕಟರಾಜು, ನಾವು ಅರಲಗೋಡಿನಲ್ಲಿ ನಿರಂತರವಾಗಿ ವ್ಯಾಕ್ಸಿನ್ ಲಭ್ಯವಿರುವಂತೆ ನೋಡಿಕೊಂಡಿದ್ದೇವೆ. ಲಸಿಕೆಯನ್ನು ಯಾವತ್ತು ಬಂದರೂ ಜನರಿಗೆ ನೀಡುತ್ತಿದ್ದೇವೆ. ಆದರೆ ರೋಗ ಬಾಧೆ ಕಾಣಿಸದ ಹಿನ್ನೆಲೆಯಲ್ಲಿ ಜನಕ್ಕೆ ಭಯ ಹೋಗಿದೆ. ಅವರು ನಿರಾಸಕ್ತಿ ತೋರುತ್ತಿದ್ದಾರೆ. ಈಗಾಗಲೇ ತೀರ್ಥಹಳ್ಳಿ ತಾಲೂಕಿನಲ್ಲಿ ಓರ್ವ ವ್ಯಕ್ತಿಯಲ್ಲಿ ಕೆಎಫ್‌ಡಿ ಪಾಸಿಟಿವ್ ಬಂದಿರುವ ಕಾರಣ ನಾವೂ ಕೂಡ ಸದ್ಯದಲ್ಲಿಯೇ ಇನ್ನಷ್ಟು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿ, ಲಸಿಕೆ ಶಿಬಿರಗಳನ್ನು ಮಾಡಲಿದ್ದೇವೆ ಎಂದರು.
ಅರಲಗೋಡು ಸುತ್ತಮುತ್ತಲ ಜನರ ಮಾಹಿತಿಯಂತೆ, ಆ ಭಾಗದ ಹೊನ್ನೆಮಕ್ಕಿ, ಸಂಪ ಭಾಗದಲ್ಲಿ ಎರಡು ಮೃತ ಮಂಗಗಳು ತಿಂಗಳ ಹಿಂದೆ ಸತ್ತ ಸ್ಥಿತಿಯಲ್ಲಿ ಪತ್ತೆಯಾಗಿದ್ದವು. ಆದರೆ ಅರಣ್ಯ ಇಲಾಖೆ ವಿಳಂಬ ಮಾಡದೆ ಅದನ್ನು ಸುಟ್ಟುಹಾಕಿದೆ. ಅವುಗಳ ಪೋಸ್ಟ್‌ಮಾರ್ಟ್‌ಂ ನಡೆದ ಬಗ್ಗೆ ದಾಖಲೆಗಳಿಲ್ಲ. ಆರೋಗ್ಯ ಇಲಾಖೆ ಮೂಲಗಳ ಪ್ರಕಾರ, ಸೆಪ್ಟೆಂಬರ್ 9ರಂದು ಉಳ್ಳೂರಿನಲ್ಲಿ ಮಂಗ ಸಾವನ್ನಪ್ಪಿದ ಘಟನೆ ನಂತರ ಇಲಾಖೆಗೆ ಮತ್ತೆ ಮಂಗನ ಸಾವಿನ ಪ್ರಕರಣ ವರದಿಯಾಗಿಲ್ಲ. ಈ ಸಮಯದಲ್ಲಿಯೂ ಮಂಗಗಳಲ್ಲಾಗಲಿ, ಉಣುಗುಗಳಲ್ಲಾಗಲಿ ಕೆಎಫ್‌ಡಿ ವೈರಾಣು ಪತ್ತೆಯಾಗಿಲ್ಲ.
ಜನ ಕೃಷಿಯಲ್ಲಿ ಮಗ್ನ: ಈ ನಡುವೆ ಅರಲಗೋಡು ಭಾಗದಲ್ಲಿ ಈ ವರ್ಷ ಕೃಷಿಕರು ತರಾತುರಿಯಿಂದ ಗದ್ದೆ ಕೊಯ್ಲು, ಕೊನೆ ಕೊಯ್ಲು ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಕಳೆದ ವರ್ಷ ಅಳಗೋಡು ಪರಮೇಶ್ವರ ಸೇರಿದಂತೆ ಹಲವರ ಮನೆಯಲ್ಲಿ ಕೊನೆ ಕೊಯ್ಲು ಮಾಡದೆ ತೋಟದಲ್ಲಿಯೇ ಬಿಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಕೃಷಿಕ ರಾಜೇಶ್ ಅಳಗೋಡು, ಈಗಾಗಲೇ ಈ ಭಾಗದಲ್ಲಿ ಶೇ. 80ಕ್ಕೂ ಹೆಚ್ಚು ಕೊಯ್ಲು ಕೆಲಸ ಮುಗಿದಿದೆ. ಕಳೆದ ವರ್ಷದಂತೆ ಮಂಗಗಳು ಸತ್ತ ದೃಶ್ಯಗಳು ಈ ಬಾರಿ ಕಾಣಿಸಿಲ್ಲ ಎಂದು ತಿಳಿಸಿದರು.