Advertisement

Sagara ತಹಶೀಲ್ದಾರ್‌ರಿಂದ ಕಿರುಕುಳ ಆರೋಪ: ವಿಎ ಆತ್ಮಹತ್ಯೆ ಯತ್ನ

10:08 PM Jul 11, 2024 | Shreeram Nayak |

ಸಾಗರ: ತಹಶೀಲ್ದಾರ್‌ರ ಕಿರುಕುಳದಿಂದ ಬೇಸತ್ತಿರುವ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಮುಂದಾಗಿರುವುದಾಗಿ ಆರೋಪಿಸಿರುವ ಗ್ರಾಮ ಲೆಕ್ಕಾಧಿಕಾರಿಯೊಬ್ಬರು ತಹಶೀಲ್ದಾರರ ಕಚೇರಿಯಲ್ಲಿಯೇ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿರುವ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.

Advertisement

ಕಳೆದ ಮೂರ್ನಾಲ್ಕು ವರ್ಷದಿಂದ ಅರೆಹದ ವೃತ್ತದಲ್ಲಿ ಗ್ರಾಮ ಲೆಕ್ಕಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ವಿಮಲಾ ಎನ್ನುವವರು ಗುರುವಾರ ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಇವರ ಬಳಿಯಲ್ಲಿಯೇ ಡೆತ್‌ನೋಟ್ ಸಿಕ್ಕಿದ್ದು, ಆರೋಗ್ಯದ ಸಮಸ್ಯೆಯಿದ್ದರೂ ತಹಶೀಲ್ದಾರರು ದೂರದ ಊರಿನಲ್ಲಿ ಕೆಲಸಕ್ಕೆ ಹಾಕಿದ್ದಾರೆ. ಬದಲಾಯಿಸಿಕೊಡಲು ಒಪ್ಪುತ್ತಿಲ್ಲ. ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಕಚೇರಿಯಲ್ಲೇ ಅಸ್ವಸ್ಥರಾದ ಅವರನ್ನು ಕೂಡಲೇ ಉಪವಿಭಾಗೀಯ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ ಕರೆದೊಯ್ಯಲಾಗಿದೆ.

ಪೇಟೆ ಠಾಣೆ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿದ್ದು, ವಿಚಾರಣೆ ಪ್ರಾರಂಭಿಸಿದ್ದಾರೆ.

Advertisement

ತ್ಯಾಗರ್ತಿ ಮೂಲದ ವಿಮಲಾ ಕಳೆದ ಮೂರ್ನಾಲ್ಕು ವರ್ಷದಿಂದ ಅರೆಹದ ವೃತ್ತದಲ್ಲಿ ಗ್ರಾಮ ಲೆಕ್ಕಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಜತೆಯಲ್ಲಿ ಮರತ್ತೂರು ಗ್ರಾಮ ಲೆಕ್ಕಾಧಿಕಾರಿಯಾಗಿಯೂ ಕೆಲಸ ಮಾಡುವಂತೆ ತಹಶೀಲ್ದಾರರು ಸೂಚಿಸಿದ್ದರು. ಆದರೆ ಚುನಾವಣಾ ಸಂದರ್ಭದಲ್ಲಿ ಆರೋಗ್ಯದ ಸಮಸ್ಯೆಯಿಂದಾಗಿ ರಜೆ ಹಾಕಿದ್ದರು. ಈ ಹಿನ್ನೆಲೆಯಲ್ಲಿ ವಿಮಲಾರನ್ನು 15 ದಿನಗಳ ಕಾಲ ಬರೂರು ವೃತ್ತಕ್ಕೆ ವರ್ಗಾಯಿಸಲಾಗಿತ್ತು. ಆರೋಗ್ಯ ಸುಧಾರಿಸಿದ ಬಳಿಕ ಮೊದಲಿನ ಸ್ಥಾನಕ್ಕೆ ಹಾಜರಾಗುವಂತೆ ತಹಶೀಲ್ದಾರರು ನಿರ್ದೇಶಿಸಿದ್ದರು ಎಂದು ಕಚೇರಿ ಸಿಬ್ಬಂದಿ ತಿಳಿಸಿದ್ದಾರೆ.

ಗುರುವಾರ ಬೆಳಗ್ಗೆ ಅರೆಹದ ವೃತ್ತದ ಕಚೇರಿಗೆ ಭೇಟಿ ನೀಡಿದ್ದ ವಿಮಲಾರವರು ಮಧ್ಯಾಹ್ನ ತಹಶೀಲ್ದಾರರ ಕಚೇರಿಯಲ್ಲಿ ಮಾತ್ರೆ ಸೇವಿಸಿದ್ದಾರೆ. ಅಲ್ಲದೆ ತಹಶೀಲ್ದಾರರು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ. ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದು, ಮನೆಗೆ ಹತ್ತಿರವಿರುವ ಬರೂರು ವೃತ್ತಕ್ಕೆ ವರ್ಗಾಯಿಸುವಂತೆ ವಿನಂತಿಸಿಕೊಂಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಅರೆಹದದ ಜತೆಯಲ್ಲಿ ಮರತ್ತೂರು ವೃತ್ತವನ್ನೂ ನಿರ್ವಹಿಸುವಂತೆ ನಿರಂತರವಾಗಿ ಒತ್ತಡ ಹೇರುತ್ತಿದ್ದರು. ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದು ರಜೆ ಕೊಡುವಂತೆ ಮನವಿ ಮಾಡಿಕೊಂಡಿದ್ದರೂ, ಉಪ ತಹಶೀಲ್ದಾರರ ಮೂಲಕ ನೋಟೀಸ್ ಕೊಡುತ್ತಿದ್ದಾರೆ. ಇದಕ್ಕಾಗಿ ಮನನೊಂದು ಆತ್ಮಹತ್ಯೆಗೆ ಮುಂದಾಗಿರುವುದಾಗಿ ಅವರು ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next