ಸಾಗರ: ಮಲೆನಾಡಿನ ದಟ್ಟ ಅರಣ್ಯ ಹಾಗೂ ಗುಡ್ಡಗಳಲ್ಲಿ ಚಾರಣ ಹಾಗೂ ಪ್ರವಾಸಕ್ಕೆ ಜನ ಲಗ್ಗೆ ಇಡುತ್ತಿರುವುದಕ್ಕೆ ಆಕ್ಷೇಪ ಹಾಗೂ ಆತಂಕ ವ್ಯಕ್ತವಾಗುತ್ತಿದೆ. ಹೀಗೆ ಪ್ರವಾಸಕ್ಕೆ ಬಂದವರನ್ನು ಕೆಲ ಗ್ರಾಮಸ್ಥರು ತಡೆದ ಪ್ರಸಂಗವೂ ನಡೆದಿದೆ.
ಇತ್ತೀಚಿನ ದಿನಗಳಲ್ಲಿ ಮಲೆನಾಡಿನ ಕಾಡು ಗುಡ್ಡಗಳಲ್ಲದೆ ಹಳ್ಳಿಗಳ ಸಮೀಪವೇ ಕಾಡೆಮ್ಮೆ, ಕಾಳಿಂಗ ಸರ್ಪ ಮೊದಲಾದ ಕಾಡುಪ್ರಾಣಿಗಳು ನಿರಂತರವಾಗಿ ಸಂಚರಿಸಿದ್ದು, ಈ ಪ್ರದೇಶಗಳಿಗೆ ಸೂಕ್ತ ರಕ್ಷಣೆ, ಪರವಾನಗಿ ಅಥವಾ ಮಾರ್ಗದರ್ಶನ ಇಲ್ಲದೆ ಪ್ರವಾಸಿಗರು ಬರುತ್ತಿದ್ದು, ಪ್ರಾಣಾಪಾಯ ಆಗಬಹುದು ಎಂದು ತಾಲೂಕಿನ ಪರಿಸರ ಪ್ರೇಮಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ತಾಲೂಕಿನ ಹಂಸಗಾರು, ಗೋಟಗಾರು ವ್ಯಾಪ್ತಿಯಲ್ಲಿನ ಶರಾವತಿ ಹಿನ್ನೀರಿನ ಗುಡ್ಡಕ್ಕೆ ಎರಡು ಐಷಾರಾಮಿ ಬಸ್‌ಗಳಲ್ಲಿ ದಿಢೀರನೆ ಸುಮಾರು 70 ಜನರು ಪ್ರವಾಸಿಗರು ಆಗಮಿಸಿ ಚಾರಣಕ್ಕೆ ಮುಂದಾಗಿದ್ದಾರೆ. ಬೆಳಗಿನ ಹೊತ್ತು ಈ ಭಾಗದಲ್ಲಿ ಕಾಡುಕೋಣಗಳು ಗುಂಪುಗುಂಪಾಗಿ ಸಂಚರಿಸುವ ಕಾರಣ ಯಾವುದೇ ಕ್ಷಣದಲ್ಲಿ ಅಪಾಯವಾಗಬಹುದು ಎಂಬ ಹಿನ್ನೆಲೆಯಲ್ಲಿ ಪ್ರಕೃತಿ ವೀಕ್ಷಣೆ ನಡೆಸಲು ಬಂದವರ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ವೇಳೆ ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಪ್ರವಾಸಿಗರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸೂಕ್ತ ಮಾಗದರ್ಶಕರು, ರಕ್ಷಣಾ ವ್ಯವಸ್ಥೆ ಮತ್ತು ಪರವಾನಗಿ ಇಲ್ಲದ ಹಿನ್ನೆಲೆಯಲ್ಲಿ ಪ್ರವಾಸಿಗರನ್ನು ವಾಪಸ್ ಕಳುಹಿಸಿದ್ದಾರೆ.
ಚಾರಣಕ್ಕೆ ಬರುವುದು ಫ್ಯಾಶನ್ ಆಗಬಾರದು. ಅದರ ಹಿಂದೆ ಪರಿಸರದ ಕಾಳಜಿ ಇರಬೇಕು. ಪ್ಲಾಸ್ಟಿಕ್, ಬಾಟಲಿ ಇನ್ನಿತರ ತ್ಯಾಜ್ಯಗಳಿಂದ ಸ್ಥಳೀಯ ಪರಿಸರವನ್ನು ಹಾಳು ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಇತ್ತೀಚೆಗೆ ತಾಲೂಕಿನ ಹಿಪ್ಲಿ ಎಂಬಲ್ಲಿನ ಕಿರು ಜಲಾಶಯದ ಕುರಿತು ಮಾಧ್ಯಮಗಳಲ್ಲಿ ಸುದ್ದಿ ಬರುತ್ತಿದ್ದಂತೆ ಅಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಿ ಪರಿಸರ ಸಂಪೂರ್ಣವಾಗಿ ಹದಗೆಡಿಸಲಾಗಿದೆ. ಅಪಾಯದ ಮಾಹಿತಿ ಇಲ್ಲದೆ, ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಚಾರಣದ ಫೋಟೋ ಹಾಕುವ ಪ್ರವಾಸಿಗರು ಸ್ಥಳೀಯ ಪರಿಸರದ ಚಾರಣ ಆಕಾಂಕ್ಷಿಗಳನ್ನು ಹೆಚ್ಚಿಸುತ್ತಾರೆ. ಯಾವುದೋ ಒಂದು ಹಂತದಲ್ಲಿ ಈ ಭಾಗದ ಪರಿಸರವೂ ಹಾಳಾಗುವಂತಾಗುತ್ತದೆ ಎಂದು ಸ್ಥಳೀಯ ಪರಿಸರ ಕಾರ್ಯಕರ್ತರಾದ ಹಿಂಡೂಮನೆ ಜಿತೇಂದ್ರ, ಹರ್ಷ ಹೊಸಳ್ಳಿ, ಅರುಣ ಗೋಟಗಾರು, ಶ್ರೀಧರ ಗ್ರಾಫಿಕ್ಸ್ ನಟರಾಜ್ ಮುಂತಾದವರು ಆತಂಕ ವ್ಯಕ್ತಪಡಿಸಿದ್ದಾರೆ.
ಜಾಲತಾಣಗಳಲ್ಲಿ ದೊಡ್ಡ ಚರ್ಚೆ: ಹಂಸಗಾರು ಹೊಸಳ್ಳಿ ಗುಡ್ಡಕ್ಕೆ ಚಾರಣ ಬಂದವರಿಗೆ ಸ್ಥಳೀಯರು ಆಕ್ಷೇಪಿಸಿ ವಾಪಸ್ ಕಳುಹಿಸಿದ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಚರ್ಚೆಯ ವಿಷಯವಾಗಿದೆ. ತಾಲೂಕು ಅಭಿವೃದ್ಧಿಯಾಗಬೇಕು ಎನ್ನುವವರು ಪ್ರವಾಸಿ ತಾಣ, ಚಾರಣಗಳು ಪ್ರವಾಸಿಗರಿಗೆ ಅಲಭ್ಯ ಎನ್ನುವುದು ಎಷ್ಟು ಸರಿ, ಇದರ ಬದಲು ಸ್ವಚ್ಛತೆ, ಹಾನಿ ಎಂಬ ವಿಷಯ ಇಟ್ಟುಕೊಂಡು ಎಲ್ಲ ಪ್ರವಾಸಿ ಸ್ಥಳಗಳನ್ನು ಬಂದ್ ಮಾಡಿಬಿಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರವಾಸ ತಾಣಗಳ ವಿಚಾರದಲ್ಲಿ ಹಲವು ನಿಯಮಗಳಿವೆ. ಸಂರಕ್ಷಿತ ಅರಣ್ಯ ಪ್ರದೇಶ ಎಂದು ಘೋಷಿತ ಸ್ಥಳಕ್ಕೆ ಪ್ರವಾಸದ ಹೆಸರಿನಲ್ಲಿ ಏಕಾಏಕಿ ಚಾರಣಿಗಳು ನುಗ್ಗುವುದು ಸರಿಯಲ್ಲ. ಮಲೆನಾಡಿನ ಸೂಕ್ಷ್ಮ ಪರಿಸರವನ್ನು ಸಂರಕ್ಷಿಸಿಕೊಳ್ಳಬೇಕಿದೆ. ಯಾವುದೇ ವೈಜ್ಞಾನಿಕ ಅಧ್ಯಯನ ಮಾದರಿಯ ನಿರೀಕ್ಷೆಗಳಿಲ್ಲದೆ ಕೇವಲ ಮೋಜು ಮಸ್ತಿಗಾಗಿ ಕಾಡಿಗೆ ನುಗ್ಗುವವರನ್ನು ವಿರೋಧಿಸುತ್ತೇವೆ ಎಂದು ಪರಿಸರ ಪ್ರೇಮಿ ಜಿತೇಂದ್ರ ಹಿಂಡೂಮನೆ ವಿವಾದದ ಕುರಿತು ಸ್ಪಷ್ಟಪಡಿಸಿದರು.